CM Siddaramaiah: ಹರಿಯಾಣದಲ್ಲಿ ಕಾಂಗ್ರೆಸ್’ಗೆ ಹೀನಾಯ ಸೋಲು – ಸೋಲಿಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯನವರೇ ಕಾರಣ ಎಂದ ಕಾಂಗ್ರೆಸ್ ನಾಯಕರು – ಹೇಗೆ?

CM Siddaramaiah: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಭಾರೀ ಮುಖಭಂಗವಾಗಿದೆ. ಚುನಾವಣೋತ್ತರ ಸಮೀಕ್ಷೆಗಳಲ್ಲಿ ʼಕೈʼ ಪಕ್ಷವು ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿಯಲಾಗಿತ್ತು. ಇದು ಪಕ್ಷದ ನಾಯಕರಲ್ಲಿ ಉತ್ಸಾಹ ತಂದಿತ್ತು, ಆದರೆ ಇಂದಿನ ಫಲಿತಾಂಶದ ದಿನವೇ ಎಕ್ಸಿಟ್ ಪೋಲ್ ಫಲಿತಾಂಶಗಳು ತಲೆಕೆಳಗಾಗಿವೆ. ಬಿಜೆಪಿ ಸತತವಾಗಿ ಮೂರನೇ ಬಾರಿ ಸರ್ಕಾರ ರಚಿಸಲು ಸಜ್ಜಾಗಿದೆ. ಈ ಬೆನ್ನಲ್ಲೇ ಹರಿಯಾಣದಲ್ಲಿ ಕಾಂಗ್ರೆಸ್ ಸೋಲಿಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣ ಎಂದು ಸ್ವತಃ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ಆರೋಪಿಸಿದ್ದಾರೆ.

ಹೌದು, ಕಾಂಗ್ರೆಸ್ ಹಿರಿಯ ನಾಯಕ ಕೆ.ಬಿ.ಕೋಳಿವಾಡ(K B Kholiwada) ಅವರೇ ಈ ರೀತಿಯ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗಾರರ ಜೊತೆಗೆ ಮಾತನಾಡಿರುವ ಅವರು, ʼಹರಿಯಾಣದಲ್ಲಿ ಕಾಂಗ್ರೆಸ್ ಸೋಲಿಗೆ ಸಿಎಂ ಸಿದ್ದರಾಮಯ್ಯನವರೇ ಕಾರಣʼ ಅಂತಾ ಹೇಳಿದ್ದಾರೆ. ಮುಡಾ ನಿವೇಶನ ಹಂಚಿಕೆ ಹಗರಣ ಪ್ರಕರಣದಲ್ಲಿ ಸಿದ್ದರಾಮಯ್ಯರ ಹೆಸರು ಕೇಳಿಬಂದ ಬೆನ್ನಲ್ಲೇ ರಾಜೀನಾಮೆ ನೀಡಬೇಕು ಅಂತಾ ಕೆ.ಬಿ.ಕೋಳಿವಾರ ಆಗ್ರಹಿಸಿದ್ದಾರೆ. ಇದೀಗ ಅವರು ಮತ್ತೊಮ್ಮೆ ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದು, ಹರಿಯಾಣದಲ್ಲಿ ಕಾಂಗ್ರೆಸ್ ಹಿನ್ನಡೆಗೆ ಮುಡಾ ಪ್ರಕರಣವೇ ಪ್ರಮುಖ ಕಾರಣವೆಂದು ಹೇಳಿದ್ದಾರೆ.

ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೋಳಿವಾಡ ಅವರು, ಕಾಂತರಾಜ ರಿಪೋರ್ಟ್ ಅನ್ನೋದನ್ನ ವೈಜ್ಞಾನಿಕ ಅವೈಜ್ಞಾನಿಕ ಅಂತಾರೆ, ಇದು ಯಾಕೆ ಅನ್ನೋದು ಅರ್ಥ ಆಗ್ತಾ ಇಲ್ಲ. ಇದು ಆದಷ್ಟು ಬೇಗ ಜಾರಿ ಆಗಬೇಕು. ಸಬ್ ಕಮಿಟಿ ಮಾಡೋದು ಅಂತ ಡಿಲೇ ಮಾಡೋದು ಬೇಡ. ಕ್ರಿಮಿಲೇಯರ್ ಮಾಡೋದು ಒಳ್ಳೆಯದು, ಒಂದು ತಿಂಗಳ ಟೈಂ ಕೊಟ್ಟು ಸಮಸ್ಯೆ ಇದ್ದರೆ ಅದನ್ನ ಸರಿ ಮಾಡಬೇಕು. ಗಣತಿ ಮಾಡುವ ಮುನ್ನ ನಾನೇ ಅನೇಕ ಹಳ್ಳಿಗಳಿಗೆ ಕರೆದುಕೊಂಡು ಹೋಗಿದ್ದೆ, ಅಲ್ಲಿ ಎಲ್ಲಾ ಡೀಟೇಲ್ಸ್ ತೆಗೆದುಕೊಂಡಿದ್ದಾರೆ. ಉಪ ಜಾತಿಗಳ ಬಗ್ಗೆಯೂ ಕೇಳಿದ್ದಾರೆ. ಜಾತಿ ಬರೆದು ಅದರಲ್ಲಿ ಉಪ ಜಾತಿ ಅಂತಲೂ ಬರೆದಿದ್ದಾರೆ. ಇದರಲ್ಲಿ ಲೋಪ ಅಂತ ಅಲ್ಲ ಒಂದು ತಿಂಗಳ ಸಮಯ ಕೊಟ್ಟು ಸರಿ ಮಾಡಿ, ಇದು ರಾಜಕೀಯಕ್ಕೆ ಮಾತಾಡೋದು ಅಲ್ಲ ಎಂದರು.

ಅಲ್ಲದೆ ಸಿದ್ದರಾಮಯ್ಯ ಕುರ್ಚಿ ಭದ್ರ ಮಾಡೋಕೆ ಡೈವರ್ಟ್ ಮಾಡ್ತಾ ಇದಾರೆ ಅನ್ನೋದು ಅವರ ಮಾತು, ಅದಕ್ಕೆ ನಾನು ತಲೆ ಕೆಡಿಸಿಕೊಳ್ಳಲ್ಲ. ಅತೀ ಶೀಘ್ರವಾಗಿ ಜಾರಿ ಮಾಡಬೇಕು. ಈಗ ಕಾಂಗ್ರೆಸ್ ಸರ್ಕಾರ ಇದೆ ಹಾಗಾಗಿ ಜಾರಿ ಮಾಡಿ ಅಂತ ನನ್ನದು ಒತ್ತಾಯ. ಮೊದಲು ವರದಿ ಓದಲಿ ಆಗ ಗೊತ್ತಾಗಲಿದೆ ಅದು ವೈಜ್ಞಾನಿಕನೋ ಅವೈಜ್ಞಾನಿಕನೋ ಅಂತ, ಶಾಮನೂರು ಶಿವಶಂಕರಪ್ಪ ಓಡಾಡಿದ್ದಾರಾ? ಮನೆಯಲ್ಲಿ ಕೂತು ಮಾತನಾಡುತ್ತಾರೆ. ನಾನು ಸರ್ವೇ ಮಾಡುವಾಗ ಓಡಾಡಿದ್ದೇನೆ, ಸಿದ್ದರಾಮಯ್ಯ ಅವರು ಜಾತಿ ಸಮೀಕ್ಷೆ ವರದಿಯನ್ನು ಜಾರಿ ಮಾಡ್ತಾರೆ ಅನ್ನೋ ನಂಬಿಕೆ ಇದೆ ಎಂದು ಹೇಳಿದರು.

ಕೋಳಿವಾಡ ಮಾತಿಗೆ ʼಕೈʼ ನಾಯಕರು ಗರಂ!
ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎನ್ನುವ ಕೆಬಿ ಕೋಳಿವಾಡ ಹೇಳಿಕೆಗೆ ಅನೇಕ ಕಾಂಗ್ರೆಸ್ ನಾಯಕರು ಗರಂ ಆಗಿದ್ದಾರೆ. ಈ ಬಗ್ಗೆ ಮಾತನಾಡಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ʼಕೋಳಿವಾಡ ಅವರಿಗೆ ತಲೆ ಕೆಟ್ಟಿದೆ ಎಂದು ಕಿಡಿಕಾರಿದ್ದರು. ಸಿದ್ದರಾಮಯ್ಯನವರು ಯಾವುದೇ ತಪ್ಪು ಮಾಡಿಲ್ಲ, ಕಾನೂನು ಪ್ರಕಾರ ತನಿಖೆ ಎದುರಿಸಲಿದ್ದಾರೆ, ಅವರು ರಾಜೀನಾಮೆ ಕೊಡುವುದಿಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆʼ ಅಂತಾ ಹೇಳಿದ್ದರು. ಇನ್ನೂ ಕೆಲವು ನಾಯಕರು ಸಿದ್ದರಾಮಯ್ಯನವರು ರಾಜೀನಾಮೆ ನೀಡುವುದಿಲ್ಲ, ತನಿಖೆ ಎದುರಿಸುತ್ತೇನೆ ಎಂದು ಹೇಳಿದ್ದಾರೆ. ಕೋಳಿವಾಡ ಹೇಳಿಕೆ ವೈಯಕ್ತಿಕ ಅಂತಾ ಹೇಳಿದ್ದರು.

Leave A Reply

Your email address will not be published.