Renukaswamy Case: ದರ್ಶನ್ ಪ್ರಕರಣಕ್ಕೆ ರೋಚಕ ಟ್ವಿಸ್ಟ್ -ರೇಣುಕಾ ಸ್ವಾಮಿಯನ್ನು ಕೊಂದಿದ್ದು ನಾಯಿ, ದರ್ಶನ್ ಅಲ್ಲ ? ವಿಚಾರಣೆ ವೇಳೆ ಲಾಯರ್ ಸ್ಪೋಟಕ ಹೇಳಿಕೆ
Renukaswamy case: ದರ್ಶನ್ ತೂಗುದೀಪ ಜಾಮೀನು ಅರ್ಜಿ ವಿಚಾರಣೆ ಇಂದು ನಡೆದಿದ್ದು, ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡನೆ ಮಾಡಿದರು. ಪ್ರಕರಣದ ತನಿಖೆಯಲ್ಲಿ ಪೊಲೀಸರು ತಪ್ಪು ಮಾಡಿದ್ದಾರೆಂದು ವಾದಿಸಿದ ನಾಗೇಶ್, ಆರೋಪ ಪಟ್ಟಿಯಲ್ಲಿನ ತಪ್ಪುಗಳನ್ನು ಎತ್ತಿ ತೋರಿಸಿದರು.
ಹೌದು, ದರ್ಶನ್(Darshan) ಮತ್ತು ಗ್ಯಾಂಗ್ನಿಂದ ರೇಣುಕಾಸ್ವಾಮಿ(Renukaswamy) ಬರ್ಬರ ಹತ್ಯೆ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ದರ್ಶನ್ ಜಾಮೀನು ಅರ್ಜಿಯ ಎರಡನೇ ದಿನದ ವಾದ ಮಂಡನೆ 57ನೇ ಸಿಸಿಹೆಚ್ ಕೋರ್ಟ್ನಲ್ಲಿ ಇಂದು (ಅಕ್ಟೋಬರ್ 5) ನಡೆದಿದೆ. ಜಾಮೀನು ಅರ್ಜಿ ವಿಚಾರಣೆ ವೇಳೆ ದರ್ಶನ್ ಪರ ವಕೀಲರು ಗಂಭೀರ ಆರೋಪಗಳನ್ನು ಮಾಡಿರುವುದಾಗಿ ವರದಿಯಾಗಿದೆ. ರೇಣುಕಾಸ್ವಾಮಿಯ ಮೃತದೇಹವನ್ನು ನಾಯಿಗಳು ಕಚ್ಚಿವೆ. ಇದನ್ನೇ ಕೊಲೆ ಎಂದು ಬಿಂಬಿಸಲಾಗಿದೆ ಎಂದು ದೂರಿದ್ದಾರೆ.
ಪೊಲೀಸರೇ ಸಾಕ್ಷಿಗಳನ್ನು ಸೃಷ್ಟಿಸಿದ್ದಾರೆ. ಚಾರ್ಜ್‌ಶೀಟ್‌ನಲ್ಲಿ ದಾಖಲಿಸಿರುವ ಮಾಹಿತಿಗೂ ಸಾಕ್ಷಿಗಳು ನೀಡಿರುವ ಹೇಳಿಕೆಗಳಿಗೂ ಬಹಳ ವ್ಯತ್ಯಾಸವಿದೆ. ರೇಣುಕಾಸ್ವಾಮಿ ಮೃತದೇಹದ ಮೇಲೆ ನಾಯಿ ಕಚ್ಚಿರುವ ಗುರುತುಗಳಿವೆ. ಇದನ್ನೇ ಮಾಧ್ಯಮಗಳು ಕೊಲೆ ಎಂದು ಬಿಂಬಿಸಿವೆ ಎಂದು ದೂರಿದರು ಎನ್ನಲಾಗಿದೆ. ತನಿಖಾಧಿಕಾರಿಗಳು ಅತ್ಯುತ್ತಮವಾಗಿ ತನಿಖೆ ನಡೆಸಿದ್ದಾರೆಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಕೋರ್ಟ್‌ಗೆ ತಿಳಿಸಿದರು. ಆದರೆ ದರ್ಶನ್ ಪರ ವಕೀಲರು ಇದು ಕಳಪೆ ತನಿಖೆ ಎಂದು ಹೇಳಿದರು.
ಅಲ್ಲದೆ ರಸ್ತೆಬದಿಯಲ್ಲಿ ರೇಣುಕಾಸ್ವಾಮಿ ಮೃತದೇಹವನ್ನು ಬಿಸಾಡಲಾಗಿತ್ತು. ಜೂ.9ರ ಬೆಳಿಗ್ಗ 10 ಗಂಟೆಗೆ ದೂರನ್ನು ರಿಜಿಸ್ಟರ್ ಮಾಡಲಾಗಿದೆ. ತಕ್ಷಣವೇ ದೇಹದ ಮಹಜರು, ಪಂಚನಾಮೆ ಮಾಡಬೇಕಿತ್ತು. ಆದರೆ ಜೂ. 11ರ ಮಧ್ಯಾಹ್ನ ದೇಹದ ಮಹಜರು ಮಾಡಲಾಗಿದೆ. ಹೀಗೇಕೆ ಮಾಡಿದರು ಎಂಬುದೂ ಮಿಲಿಯನ್ ಡಾಲರ್ ಪ್ರಶ್ನೆ. ಪೋಸ್ಟ್ಮಾರ್ಟಂ ಕೂಡ ಜೂ. 11ರ ಮಧ್ಯಾಹ್ನ 2.45ಕ್ಕೆ ಮಾಡಲಾಗಿದೆ. ದೇಹದ ಐಡೆಂಟಿಟಿ ಆಗಿರಲಿಲ್ಲ ಎಂಬ ಸಬೂಬು ನೀಡಲಾಗಿದೆ. ಆದರೆ ಮಹಜರು ಮಾಡಲು ದೇಹದ ಐಡೆಂಟಿಟಿ ಏಕೆ ಬೇಕು’ ಎಂದು ನಾಗೇಶ್ ವಾದ ಮಂಡನೆ ಮಾಡಿದ್ದಾರೆ.
ಎ14 ಮೊಬೈಲ್ನಲ್ಲಿ ಮೃತನ ಫೋಟೋ ಇತ್ತೆಂದು ಹೇಳಲಾಗಿದೆ. ಆ ಫೋಟೋವನ್ನು ರಿಟ್ರೀವ್ ಮಾಡಿದ್ದಾಗಿ ಪೊಲೀಸರು ಹೇಳಿದ್ದಾರೆ. ಪಿಎಸ್‌ಐ ವಿನಯ್ ಹೇಳಿಕೆಯಲ್ಲಿ ಅಂದು ತಾನು ಕೇರಳದಲ್ಲಿದ್ದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಮೃತನ ಫೋಟೋವನ್ನು ಕಳುಹಿಸಿದ್ದೇ ಪಿಎಸ್‌ಐ ವಿನಯ್. ಆದರೆ ವಿನಯ್ ಮೊಬೈಲ್ನ ಸೀಜ್ ಮಾಡಿ ಫೋಟೋ ರಿಟ್ರೀವ್ ಮಾಡಿಲ್ಲ. ಹೀಗಿದ್ದಾಗ ಇದೊಂದು ಕ್ಲಾಸಿಕ್ ತನಿಖೆ ಎಂದು ಹೇಳಲು ಸಾಧ್ಯವೇ’ ಎಂದು ನಾಗೇಶ್ ಪ್ರಶ್ನೆ ಮಾಡಿದ್ದಾರೆ.