Cracker factory Blast: ಪಟಾಕಿ ಘಟಕದಲ್ಲಿ ಸ್ಫೋಟ: ಗೋದಾಮು, ಮನೆಗಳಿಗೆ ಹಾನಿ

Cracker factory Blast: ಇನ್ನೇನು ದೀಪಾವಳಿ ಹಬ್ಬಕ್ಕೆ ಒಂದು ತಿಂಗಳು ಬಾಕಿ ಇದೆ. ಪಟಾಕಿ ತಯಾರಿಕಾ ಘಟಕಗಳು ಪಟಾಕಿ ತಯಾರಿಸೋದ್ರಲ್ಲಿ ಮಗ್ನವಾಗಿವೆ. ಆದರೆ ಕೆಲವೊಮ್ಮೆ ಅಲ್ಲಿ ನಡೆಯುವ ಅಚಾನಕ್‌ ದುರಂತದಿಂದ ಕೇವಲ ಕಾರ್ಖಾನೆಗೆ ನಷ್ಟ ಮಾತ್ರವಲ್ಲದೆ ಅಕ್ಕ ಪಕ್ಕದ ಕಟ್ಟಡ, ಮನೆಗಳಿಗೂ ಹಾನಿ ಉಂಟಾಗುತ್ತದೆ. ಎಷ್ಟೋ ಬಾರಿ ಪ್ರಾಣ ಹಾನಿ ಸಂಭವಿಸಿದ್ದು ಇದೆ.

ಇಂದು ತಮಿಳುನಾಡಿನ ವಿರುದುನಗರ ಜಿಲ್ಲೆಯ ಸತ್ತೂರಿನಲ್ಲಿರುವ ಪಟಾಕಿ ತಯಾರಿಕಾ ಘಟಕದಲ್ಲಿ ಹಠಾತ್ ಸ್ಫೋಟ ಸಂಭವಿಸಿದೆ. ಬ್ಲಾಸ್ಟ್‌ನ ಹೊಡೆತಕ್ಕೆ ಪಟಾಕಿಗಳನ್ನು ಸಂಗ್ರಹಿಸಲಾಗಿದ್ದ ಗೋದಾಮಿಗೆ ಹಾಗೂ ಸಮೀಪದ ಮನೆಗಳಿಗೆ ಹಾನಿಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಮಿಳುನಾಡಿನ ಸತ್ತೂರು ಹಾಗೂ ಶಿವಕಾಶಿಯಿಂದ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬೆಂಕಿಯನ್ನು ನಂದಿಸಲು ಘಟಕಕ್ಕೆ ದೌಡಾಯಿಸಿದ್ದಾರೆ ಎಂದು ವರದಿಯಾಗಿದೆ. ಎರಡು ಗಂಟೆಗಳ ಕಾಲ ನಿರಂತರ ಸ್ಫೋಟಗಳು ಸಂಭವಿಸಿದ್ದು, ಸುಮಾರು 15 ಕಿಮೀ ವ್ಯಾಪ್ತಿಯ ನಿವಾಸಿಗಳಲ್ಲಿ ಭೀತಿ ಸೃಷ್ಟಿಸಿದೆ ಎಂದು ಮಾಹಿತಿ ದೊರೆತಿದೆ.

3 ವಿವಿಧ ಅಗ್ನಿಶಾಮಕ ಠಾಣೆಗಳ ಅಗ್ನಿಶಾಮಕ ಮತ್ತು ರಕ್ಷಣಾ ತಂಡಗಳನ್ನು ಸ್ಥಳಕ್ಕೆ ತಕ್ಷಣ ನಿಯೋಜಿಸಲಾಗಿದೆ. ನಿರಂತರ ಸ್ಫೋಟಗಳ ಮಧ್ಯೆಯೇ ಪರಿಸ್ಥಿತಿಯನ್ನು ಹತೋಟಿಗೆ ತರಲು ರಕ್ಷಣಾ ತಂಡಗಳು ಹರಸಾಹಸ ಪಡುತ್ತಿವೆ. 10ಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳು ಸ್ಥಳದಲ್ಲಿ ಮಿಕ್ಕಾಂ ಹೂಡಿವೆ. ಆದರೆ, ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಬೆಂಕಿ ನಂದಿಸಿದ ಬಳಿಕವಷ್ಟೇ ಎಷ್ಟು ಮಟ್ಟಿನ ಹಾನಿ ಸಂಭವಿಸಿದೆ ಎಂದು ಮಾಹಿತಿ ಸಿಗಲು ಸಾಧ್ಯ ಎಂದು ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.