Muda Scam: ಸಿಎಂ ಸಿದ್ದುಗೆ ಮುಡಾ ಸಂಕಷ್ಟ- ಏನೆಲ್ಲಾ ತನಿಖೆ ಮಾಡಲಾಗುತ್ತೆ, ಹೇಗೆ ನಡೆಯುತ್ತದೆ?
Mudq Scam: ಮುಡಾ ಹಗರಣ ಸಿದ್ದರಾಮಯ್ಯ ಕುಣಿಕೆಯನ್ನು ಇನ್ನಷ್ಟು ಗಟ್ಟಿಯಾಗಿ ಬಿಗಿಯೋದು ಫಿಕ್ಸ್ ಆಗಿದೆ. ಯಾಕೆಂದರೆ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿ ಪ್ರಾಸಿಕ್ಯೂಷನ್‌ಗೆ ಹೈಕೋರ್ಟ್ ಅನುಮತಿ ನೀಡಿದೆ. ಈ ಮೂಲಕ ರಾಜ್ಯಪಾಲರ ಆದೇಶವನ್ನು ಹೈಕೋರ್ಟ್ (Karnataka High Court) ಎತ್ತಿಹಿಡಿದಿದೆ. ಈ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ (High Court) ತೀರ್ಪು ಪ್ರಕಟವಾದ ಬೆನ್ನಲ್ಲೇ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್) ಸೆಕ್ಷನ್ 218 ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 17ಎ ಬಗ್ಗೆ ಭಾರೀ ಚರ್ಚೆ ಆರಂಭವಾಗಿದೆ.
ಅಂದಹಾಗೆ BNSS ಸೆಕ್ಷನ್ 218, ಭ್ರಷ್ಟಾಚಾರ ತಡೆ ಕಾಯ್ದೆ (PC Act) ಸೆಕ್ಷನ್ 17 ಎ, 19 ರ ಅಡಿ ಪ್ರಾಸಿಕ್ಯೂಷನ್‌ಗೆ ದೂರುದಾರರು ಅನುಮತಿ ಕೇಳಿದ್ದರು. ಪಿಸಿ ಕಾಯ್ದೆಯ 19 ಅಡಿ ಕೇಳಿದ್ದ ಮನವಿಯನ್ನು ರಾಜ್ಯಪಾಲರೇ ತಿರಸ್ಕರಿಸಿದ್ದರು. ಈಗ ಕೋರ್ಟ್ ಬಿಎನ್‌ಎಸ್‌ಎಸ್ ಸೆಕ್ಷನ್ 218ರ ಅಡಿ ನೀಡಿರುವ ಅನುಮತಿಯನ್ನು ತಿರಸ್ಕರಿಸಿದೆ. ನ್ಯಾಯಾಲಯ ಈಗ ಪಿಸಿ ಕಾಯ್ದೆಯ ಸೆಕ್ಷನ್ 17 ಎ ಮಾತ್ರ ಸೀಮಿತಗೊಳಿಸಿ ಆದೇಶ ಪ್ರಕಟಿಸಿದೆ.
17 (ಎ) ಅಡಿ ಹೇಗೆ ತನಿಖೆ?
ಮುಡಾ ಕೇಸಲ್ಲಿ ಈಗ ಪ್ರಾಥಮಿಕ ತನಿಖೆ ನಡೆಸಬಹುದು. ಪ್ರಕರಣದ ಸತ್ಯಾಸತ್ಯತೆ ಬಗ್ಗೆ ಮಾಹಿತಿ ಕಲೆ ಹಾಕಬಹುದು. ಅಂದರೆ ಈ ಪ್ರಕರಣದಲ್ಲಿ ಯರ‍್ಯಾರ ಪಾತ್ರವೇನು? ಸಿಎಂ ಪಾತ್ರ, ಪ್ರಭಾವದ ಬಗ್ಗೆ ತನಿಖೆ ನಡೆಸಬಹುದು. ತನಿಖೆಯ ನಂತರ 19 (ಎ) ಅಡಿ ಚಾರ್ಜ್‌ಶೀಟ್ ಸಲ್ಲಿಕೆಗೆ ರಾಜ್ಯಪಾಲರ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು.
ಇಷ್ಟೇ ಅಲ್ಲದೆ ನ್ಯಾಯಿಕ ಪ್ರಕ್ರಿಯೆಗೆ ಇದ್ದ ತಡೆ ತೆರವು ಬೆನ್ನಲ್ಲೇ ಜನಪ್ರತಿನಿಧಿಗಳ ಕೋರ್ಟ್ ಆದೇಶ ನೀಡಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ (Lokayukta Enquiry) ಆದೇಶ ಹೊರಡಿಸಿದೆ.
ಹಗರಣ ಸಂಬಂಧ ಸಿಆರ್‌ಪಿಸಿ ಸೆಕ್ಷನ್ 156(3) ಅಡಿ ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ಮೈಸೂರಿನ ಲೋಕಾಯುಕ್ತ ಪೊಲೀಸರಿಗೆ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಆದೇಶ ನೀಡಿದ್ದಾರೆ.
ಜನಪ್ರತಿಧಿಗಳ ಕೋರ್ಟ್ ಆದೇಶವೇನು?
ಸಿಎಂ ವಿರುದ್ಧ ಮೈಸೂರು ಲೋಕಾಯುಕ್ತ ಪೊಲೀಸರು ತನಿಖೆ ನಡೆಸಬೇಕು. ಸಿಆರ್‌ಪಿಸಿ ಸೆಕ್ಷನ್ 156(3) ಅಡಿ ತನಿಖೆ ನಡೆಸಬೇಕು. ಡಿಸೆಂಬರ್ 24ರ ಒಳಗೆ ತನಿಖಾ ವರದಿ ಸಲ್ಲಿಸಬೇಕು.
ಕೋರ್ಟ್ ಅಭಿಪ್ರಾಯ ಏನು?
ಮುಡಾ ಜಮೀನು ಸ್ವಾಧೀನ ನಂತರ ಪರಿಹಾರ ನಿಗದಿಯಾಗಿದೆ. ಪರಿಹಾರ ನಿಗದಿ ಬಳಿಕವೂ ಡಿನೋಟಿಫಿಕೇಷನ್ (Denotification) ನಡೆದಿದೆ. 14 ನಿವೇಶನಗಳ ಹಂಚಿಕೆ ಕಾನೂನು ಬಾಹಿರವಾಗಿದೆ. ದೇವರಾಜು ಹೆಸರಿನಲ್ಲಿ ನಕಲಿ ಡಿನೋಟಿಫೈ ಮಾಡಲಾಗಿದೆ. ಮಾಲೀಕರಲ್ಲದ ದೇವರಾಜುರಿಂದ ಭೂ ಮಾರಾಟ ಮಾಡಲಾಗಿದೆ. ಪಿಸಿ ಆಕ್ಟ್ 17ಎ ಅಡಿ ರಾಜ್ಯಪಾಲರ ಅನುಮತಿ ಪರಿಗಣಿಸಲಾಗಿದೆ. ತನಿಖೆಗೆ ಸಿಎಂ ಹಿಂಜರಿಯಬಾರದು ಎಂದು ಹೈಕೋರ್ಟ್ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಸಿಆರ್‌ಪಿಸಿ ಸೆಕ್ಷನ್ 156 (3) ಅಡಿ ತನಿಖೆ:
ಮ್ಯಾಜಿಸ್ಟ್ರೇಟ್ ಆದೇಶದ ಮೇರೆಗೆ ಎಫ್‌ಐಆರ್ ದಾಖಲಿಸಿ ತನಿಖೆ ಮಾಡಬೇಕು. 90 ದಿನದಲ್ಲಿ ತನಿಖಾ ವರದಿಯನ್ನು ಸಲ್ಲಿಸಬೇಕು. ಬಂಧನ ಮಾತ್ರ ತನಿಖಾಧಿಕಾರಿ ವಿವೇಚನೆಗೆ ಬಿಟ್ಟಿದ್ದು.
ಯಾವ ಯಾವ ಕಾಯ್ದೆಗಳಡಿ ತನಿಖೆ?
ಒಟ್ಟು 4 ಕಾಯ್ದೆಗಳ ಅಡಿ ತನಿಖೆಗೆ ಆದೇಶ ನೀಡಲಾಗಿದೆ. ಐಪಿಸಿ ಸೆಕ್ಷನ್ 120ಬಿ, 166, 403, 420 ಮತ್ತು ಪಿಸಿ ಆಕ್ಟ್ ಸೆಕ್ಷನ್ 9, 13ರ ಅಡಿ ತನಿಖೆ ನಡೆಸಬೇಕು. ಇದರ ಜೊತೆ ಬೇನಾಮಿ ವ್ಯವಹಾರ ನಿಷೇಧ ಕಾಯ್ದೆ 53, 54 ಮತ್ತು ಭೂಕಬಳಿಕೆ ನಿಗ್ರಹ ಕಾಯ್ದೆಯಡಿಯೂ ತನಿಖೆ ನಡೆಸಬೇಕು.
ಯಾರ ಯಾರ ತನಿಖೆ ನಡೆಯುತ್ತೆ?
* ಸಿದ್ದರಾಮಯ್ಯ
* ಪಾರ್ವತಿ, ಸಿದ್ದರಾಮಯ್ಯ ಪತ್ನಿ
* ಮಲ್ಲಿಕಾರ್ಜುನ ಸ್ವಾಮಿ, ಸಿದ್ದರಾಮಯ್ಯ ಬಾಮೈದ
* ದೇವರಾಜು, ಮಾರಾಟಗಾರ
* ಇತರರು