BJP Tweet: ‘ಜಯತೆ, ಜಯತೆ, ಸತ್ಯಮೇವ ಜಯತೆ!! ಸಂವಿಧಾನಕ್ಕೆ ಗೌರವ ಕೊಟ್ಟು ರಾಜೀನಾಮೆ ನೀಡಿ- ಬಿಜೆಪಿ ಆಗ್ರಹ

Muda Scam BJP Tweet: ಸಿಎಂ ಸಿದ್ದರಾಮಯ್ಯ ಸಲ್ಲಿಕೆ ಮಾಡಿದ್ದ ಮೂಡಾ ಕೇಸ್‌ನಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೊತ್‌ ತಮ್ಮ ವಿರುದ್ಧ ನೀಡಿದ್ದ ಪ್ರಾಸಿಕ್ಯೂಷನ್‌ ಅನುಮತಿಯನ್ನು ಪ್ರಶ್ನೆ ಮಾಡಿ ಅರ್ಜಿಯನ್ನು ಹೈಕೋರ್ಟ್‌ ಪೀಠ ವಜಾ ಮಾಡಿದ್ದು, ಇದರ ಬೆನ್ನಲ್ಲಿಯೇ ಕೆಳಹಂತದ ನ್ಯಾಯಾಲಯದಲ್ಲಿ ಸಿದ್ದರಾಮಯ್ಯ ಮೂಡಾ ಕೇಸ್‌ ವಿಚಾರಕ್ಕೆ ಸಂಬಂಧಪಟ್ಟಂತೆ ಕಾನೂನು ಪ್ರಕ್ರಿಯೆ ನಡೆಯಲಿದೆ.

ಇದೀಗ ಸಿದ್ದರಾಮಯ್ಯ ಅವರು ಹೈಕೋರ್ಟ್‌ ನೀಡಿರುವ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ತೀರ್ಮಾನ ಮಾಡಿದ್ದು, ತೀರ್ಪಿನ ವಿವರ ಸಂಪೂರ್ಣವಾಗಿ ಬಂದ ನಂತರ ಕಾನೂನು ಹೋರಾಟ ಮಾಡುವ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಅರ್ಜಿ ವಜಾ ಬೆನ್ನಲ್ಲೇ ಇತ್ತ ಕಡೆ ರಾಜ್ಯ ಬಿಜೆಪಿ ” ಸಿಎಂ ಸಿದ್ದರಾಮಯ್ಯ ಅವರ ನೈತಿಕತೆಯ ಬಗ್ಗೆಯೇ ಪ್ರಶ್ನೆ ಮಾಡಿದ್ದು, ಸಂವಿಧಾನದ ಬಗ್ಗೆ ಗೌರವ ಇದ್ದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬನ್ನಿ” ಎಂದು ಟ್ವೀಟ್‌ ಮಾಡಿದೆ.

‘ಜಯತೆ, ಜಯತೆ, ಸತ್ಯಮೇವ ಜಯತೆ!! ದಲಿತರ ಭೂಮಿಯನ್ನು ಅಕ್ರಮವಾಗಿ ಕಬಳಿಸಿ, ಬಡವರ ಪಾಲಿಗೆ ಸೇರಬೇಕಾಗಿದ್ದ ಸೈಟುಗಳನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದ ಸಿಎಂ ಸಿದ್ಧರಾಮಯ್ಯ ಅವರ ವಿರುದ್ದ ಹೈಕೋರ್ಟ್‌ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿರುವುದು ಸ್ವಾಗತಾರ್ಹ. ತಮ್ಮ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಘನತೆವೆತ್ತ ರಾಜ್ಯಪಾಲರ ಮೇಲೆ ಕೀಳು ಮಟ್ಟದ ರಾಜಕೀಯಕ್ಕೆ ಕಾಂಗ್ರೆಸ್‌ ನ ನಾಯಕರು ಮುಂದಾಗಿದ್ದರು. ಆದರೆ ನ್ಯಾಯಾಲಯ ರಾಜ್ಯಪಾಲರ ನಡೆಯನ್ನು ಎತ್ತಿ ಹಿಡಿದು, ಭ್ರಷ್ಟರಿಗೆ ಭಾರತದಲ್ಲಿ ಜಾಗವಿಲ್ಲ ಎಂಬುದನ್ನು ಪುನರುಚ್ಛರಿಸಿದೆ. ಸಿದ್ದರಾಮಯ್ಯ ಅವರಿಗೆ ಈ ನೆಲದ ಕಾನೂನಿನ ಬಗ್ಗೆ, ಸಂವಿಧಾನದ ಬಗ್ಗೆ , ನ್ಯಾಯಾಲಯದ ಬಗ್ಗೆ ಕಿಂಚಿತ್ತಾದರೂ ಗೌರವವಿದ್ದರೆ, ಭಂಡತನವನ್ನು ಮುಂದುವರೆಸದೆ, ನ್ಯಾಯಾಲಯದ ತೀರ್ಪಿಗೆ ತಲೆಬಾಗಿ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಬಿಜೆಪಿ ಹೇಳಿದೆ.

‘ಬಡವರ ನಿವೇಶನ ಕಬಳಿಸಿ, ಲಜ್ಜೆಬಿಟ್ಟು ಸಿಎಂ ಹುದ್ದೆಯಲ್ಲಿ ಮುಂದುವರಿಯುತ್ತಿರುವ ಸಿದ್ದರಾಮಯ್ಯ,ನವರೇ ಒಂದು ಕ್ಷಣವೂ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುವ ನೈತಿಕತೆಯನ್ನು ಇಂದು ತಾವು ಉಳಿಸಿಕೊಂಡಿಲ್ಲ. ರಾಜೀನಾಮೆ ನೀಡಿ, ತನಿಖೆ ಎದುರಿಸಿ. ನೀವು ಕಟ್ಟಿರುವ ಸುಳ್ಳಿನ ಸಾಮ್ರಾಜ್ಯ ಸಂಪೂರ್ಣ ಕುಸಿದಿದೆ ಇನ್ನು ಗೌರವಯುತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ..’ ಎಂದು ಬಿಜೆಪಿ ಕರ್ನಾಟಕ ಮತ್ತೊಂದು ಟ್ವೀಟ್‌ ಮಾಡಿದೆ.

 

Leave A Reply

Your email address will not be published.