BJP: ವಿಧಾನ ಪರಿಷತ್ತ್ ಚುನಾವಣೆ- ಪ್ರಮೋದ್ ಮಧ್ವರಾಜ್, ಅರುಣ್ ಪುತ್ತಿಲರಲ್ಲಿ ಯಾರಿಗೆ ಟಿಕೆಟ್ ಫಿಕ್ಸ್?
BJP: ಉಡುಪಿ-ಚಿಕ್ಕಮಗಳೂರು (Udupi-Chikkanagaluru) ಸಂಸದ ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆಯಿಂದ ತೆರವಾದ ದಕ್ಷಿಣ ಕನ್ನಡ(Dakshina Kannada) ಹಾಗೂ ಉಡುಪಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸುವ ವಿಧಾನ ಪರಿಷತ್ ಸ್ಥಾನದ ಮರು ಚುನಾವಣೆ ಅ.21 ರಂದು ನಿಗದಿಯಾಗಿದ್ದು ಬಿಜೆಪಿ- ಜೆಡಿಎಸ್ ಮ್ರೈತ್ರಿ ಅಭ್ಯರ್ಥಿ ಆಯ್ಕೆ ಕಸರತ್ತು ನಡೆಯುತ್ತಿದ್ದು, ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉಭಯ ಜಿಲ್ಲೆಗಳ ಮುಖಂಡರ ಅಭಿಪ್ರಾಯ ಪಡೆದು ಕೇಂದ್ರಕ್ಕೆ ಪಟ್ಟಿ ಕಳಿಸಿಕೊಡಲು ಬಿಜೆಪಿ ರಾಜ್ಯ ಘಟಕ ನಿರ್ಧರಿಸಿದೆ.
ಇನ್ನು ಈ ಬೆನ್ನಲ್ಲೇ ಪ್ರಮೋದ್ ಮಧ್ವರಾಜ್(Pramod Madhwaraj), ಅರುಣ್ ಪುತ್ತಿಲ(Arun kumar Puttila) ಹೆಸರು ಮಂಚೂಣಿಯಲ್ಲಿದೆ. ಉಡುಪಿ ಭಾಗದಿಂದ ಪ್ರಮೋದ್ ಮಧ್ವರಾಜ್ ಅವರ ಹೆಸರು ಮಂಚೂಣಿಯಲ್ಲಿದ್ರೆ, ದಕ್ಷಿಣ ಕನ್ನಡ ಜಿಲ್ಲೆಯಿಂದ ಅರುಣ್ ಪುತ್ತಿಲ ಅವರ ಹೆಸರು ಬಲವಾಗಿ ಕೇಳಿಬರುತ್ತಿದೆ. ಈ ಇಬ್ಬರ ಪೈಕಿ ಓರ್ವರಿಗೆ ಟಿಕೆಟ್ ಖಚಿತ ಎನ್ನಲಾಗುತ್ತಿದೆ.
ಅಲ್ಲದೆ ಸುದೀರ್ಘ ಅವಧಿಗೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದ ಮಾಜಿ ಸಂಸದ ನಳಿನ್ಕುಮಾರ್ ಕಟೀಲ್ಗೆ ಈ ಬಾರಿಯ ಲೋಕಸಭಾ ಟಿಕೆಟ್ ನಿರಾಕರಿಸಿ ಹೊಸಬರಿಗೆ ಅವಕಾಶ ನೀಡಿದರೂ ಅಸಮಧಾನಗೊಳ್ಳದೆ ಹೊಸ ಅಭ್ಯರ್ಥಿ ಗೆಲ್ಲಿಸಲು ಅವರು ಶ್ರಮಿಸಿದ್ದರು. ಅಲ್ಲದೆ ಪಕ್ಷದ ನಿಷ್ಠೆ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ಅವರಿಗೆ ಈಗ ಪರಿಷತ್ ಟಿಕೆಟ್ ನೀಡಬೇಕು ಎನ್ನುವ ಅಭಿಪ್ರಾಯ ಪಕ್ಷದ ರಾಜ್ಯ ನಾಯಕರು ಮತ್ತು ಸಂಘ ಪರಿವಾರದ ಕಡೆಯಿಂದ ಬಂದಿದೆ ಎನ್ನಲಾಗಿದೆ. ಆದರೆ ಕಟೀಲು ಆಯ್ಕೆಗೆ ಕಾರ್ಯಕರ್ತರ ವಲಯದಲ್ಲಿ ಅಪಸ್ವರ ಕೇಳಿಬಂದಿದೆ ಎನ್ನಲಾಗಿದೆ.
ಅಂದಹಾಗೆ ಕ್ಷೇತ್ರದ ಚುನಾವಣಾ ಉಸ್ತುವಾರಿಗಳನ್ನಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕೋಟ ಶ್ರೀನಿವಾಸ್ ಪೂಜಾರಿ, ಬ್ರಿಜೇಶ್ ಚೌಟ, ಪ್ರೀತಮ್ ಗೌಡರನ್ನು ನೇಮಿಸಿದ್ದು, ಅಭ್ಯರ್ಥಿ ಆಯ್ಕೆ ಸಂಬಂಧ ಅಭಿಪ್ರಾಯ ಸಂಗ್ರಹ ಮತ್ತು ವರದಿ ತಯಾರಿಸಿ ರಾಜ್ಯ ಘಟಕ್ಕೆ ನೀಡಿದೆ. ಬಿಜೆಪಿ ಉನ್ನತ ಮೂಲಗಳ ಪ್ರಕಾರ ಇಂದೇ ಬಿಜೆಪಿ ಟಿಕೆಟ್ ಘೋಷಣೆ ಮಾಡುವ ಸಾಧ್ಯತೆಯಿದೆ. ಬಿಜೆಪಿ ಈ ಬಾರಿ ಯಾರಿಗೆ ಮಣೆ ಹಾಕಲಿದೆ ಅನ್ನೋದು ಸದ್ಯದ ಕುತೂಹಲ. ಒಟ್ಟಿನಲ್ಲಿ ಬಿಜೆಪಿ ಅಳೆದು ತೂಗಿ ಟಿಕೆಟ್ ಘೋಷಿಸದೇ ಇದ್ರೆ ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.