Menstrual Leave: ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಗುಡ್‌ನ್ಯೂಸ್!

Menstrual Leave: ಗೃಹಲಕ್ಷ್ಮಿ, ಶಕ್ತಿ ಯೋಜನೆ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಮತ್ತೊಂದು ಗುಡ್‌ನ್ಯೂಸ್ ಇಲ್ಲಿದೆ. ಈಗಾಗಲೇ ಶಕ್ತಿ ಯೋಜನೆ ಮತ್ತು, ಗೃಹಲಕ್ಷ್ಮಿ ಯೋಜನೆಯ ಪ್ರಯೋಜನ ಪಡೆಯುತ್ತಿರುವ ಮಹಿಳೆಯರಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಈಗ ಉದ್ಯೋಗಸ್ಥ ಮಹಿಳೆಯರಿಗೆ ಸಿಹಿ ಸುದ್ದಿ ಒಂದನ್ನು ನೀಡಿದೆ.

ಹೌದು, ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಸ್ಥ ಮಹಿಳೆಯರಿಗೆ ಋತು ಸ್ರಾವದ ರಜೆ (Menstrual Leave) ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಈ ಕುರಿತು ಕಾರ್ಮಿಕ ಸಚಿವ ಸಂತೋಷ ಲಾಡ್ ಅವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಋತುಸ್ರಾವದ ರಜೆ ನೀಡುವ ಕುರಿತು ಸಲ್ಲಿಕೆಯಾಗಿರುವ ವರದಿಯ ಬಗ್ಗೆ ಚರ್ಚೆ ನಡೆದಿದ್ದು, ಋತುಸ್ರಾವದ ರಜೆ ನೀತಿ-2024 ಕಾಯ್ದೆಯನ್ನು ಜಾರಿಗೊಳಿಸುವ ಸಂಬಂಧ ಕಾರ್ಮಿಕ ಸಚಿವರು ಆಸಕ್ತಿ ತೋರಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಈ ಸಭೆಯಲ್ಲಿ ರಜೆ ನೀಡುವ ಸಂಬಂಧ ಎಲ್ಲಾ ಇಲಾಖೆಗಳ ಜೊತೆಗೆ ಚರ್ಚೆ ನಡೆಸಲು ತೀರ್ಮಾನಿಸಲಾಗಿದ್ದು, ರಾಜ್ಯದಲ್ಲಿ ಮಹಿಳೆಯರಿಗೆ ವಾರ್ಷಿಕವಾಗಿ 6 ದಿನಗಳ ರಜೆ ನೀಡುವ ಕುರಿತು ಚಿಂತನೆ ನಡೆದಿದೆ ಎಂದು ತಿಳಿದು ಬಂದಿದೆ.
ಸಭೆಯ ಬಳಿಕ ಕಾರ್ಮಿಕ ಸಚಿವ ಸಂತೋಷ ಲಾಡ್ ಮಾಧ್ಯಮಗಳ ಜೊತೆ ಮಾತನಾಡಿದ್ದು, ಹೆಣ್ಣುಮಕ್ಕಳಿಗೆ ವರ್ಷಕ್ಕೆ 12 ದಿನಗಳ ರಜೆ ಕೊಡಬೇಕೆಂದು ಚರ್ಚೆಯಾಗಿದೆ.
ಅಂತಿಮವಾಗಿ ವರದಿಯಲ್ಲಿ ವರ್ಷದಲ್ಲಿ ಕನಿಷ್ಠ 6 ದಿನಗಳ ಋತುಸ್ರಾವದ ರಜೆಯನ್ನಾದರೂ ನೀಡಬೇಕು ಎಂಬ ಶಿಫಾರಸ್ಸು ಇದೆ. ಆದರೆ ಇದರ ಒಳಿತು ಕೆಡುಕು ನೋಡಬೇಕು. ಈ ಬಗ್ಗೆ ಸಾರ್ವಜನಿಕರಿಂದಲೂ ಅಭಿಪ್ರಾಯ ಸಂಗ್ರಹಿಸುತ್ತೇವೆ. ನಂತರ ಎಲ್ಲವನ್ನು ಗಮನಿಸಿ ಋತುಸ್ರಾವದ ರಜೆ ನೀಡುವ ಕುರಿತು ತಿರ್ಮಾನ ಮಾಡಲಾಗುತ್ತದೆ ಎಂದು ಕಾರ್ಮಿಕ ಸಚಿವ ಹೇಳಿದ್ದಾರೆ.