Koyna Dam : ಸಂಪೂರ್ಣ ಭರ್ತಿಯಾದ ಕೊಯ್ನಾ ಜಲಾಶಯ: ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಆತಂಕ!

Koyna Dam : ಮಹಾರಾಷ್ಟ್ರದ (Maharashtra) ಘಟ್ಟ ಪ್ರದೇಶಗಳಲ್ಲಿ ಮಳೆ ಜೋರಾದರೆ, ಕರ್ನಾಟಕದ ಬೆಳಗಾವಿ ಗಡಿ ಜಿಲ್ಲೆಯ ಕೆಲ ತಾಲೂಕುಗಳಿಗೂ ಅದರ ಪರಿಣಾಮ ತಟ್ಟುತ್ತದೆ. ಅತ್ತ ಕೋಯ್ನಾ ಜಲಾಶಯದಲ್ಲಿ ನೀರು ತುಂಬುತ್ತಿದ್ದಂತೆ ನೀರನ್ನು ಗೇಟ್‌ ಮುಖಾಂತರ ಕೃಷ್ಣಾ ನದಿಗೆ ಹರಿಸಲಾಗುತ್ತದೆ. ಇದೀಗ ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಪಶ್ಚಿಮ ಘಟ್ಟ ಪ್ರದೇಶದ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೊಯ್ನಾ (Koyna) ಜಲಾಶಯ ಸಂಪೂರ್ಣ ಭರ್ತಿ ಆಗಿದ್ದು ಕೃಷ್ಣಾ ನದಿ (Krishna River) ತೀರದಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಜಲಾಶಯ ಭರ್ತಿಯಾದ ಕಾರಣ ಕೊಯ್ನಾ ಜಲಾಶಯದಿಂದ ಈಗಾಗಲೇ 13 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇನ್ನೂ ಹೆಚ್ಚಿನ ಪ್ರಮಾಣದ ನೀರು ಬಿಡುವ ಸಾಧ್ಯತೆ ಇದೆ ಎಂದು ಮಾಹಿತಿಯಿದೆ. ಈ ಹಿನ್ನೆಲೆಯಲ್ಲಿ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ ನದಿ ತೀರದಲ್ಲಿ ಪ್ರವಾಹ ಆತಂಕ ಎದುರಾಗಿದೆ. ಕೃಷ್ಣಾ ನದಿ ನೀರಿನ ಒಳ ಹರಿವಿನಲ್ಲೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಅಲ್ಲಿನ ಸ್ಥಳೀಯ ನಾಗರೀಕರಿಗೆ ಬೇರೆಡೆಗೆ ಸ್ಥಳಾಂತರಗೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ.

ಕೃಷ್ಣಾ ನದಿಯ ಸದ್ಯದ ಒಳ ಹರಿವು 1 ಲಕ್ಷ 13 ಸಾವಿರ ಕ್ಯುಸೆಕ್ ಇದೆ. ಕಳೆದ ಬಾರಿ ಮಳೆ ಬಂದಾಗ ಇದೇ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಮತ್ತೆ ಮಳೆ ಆರಂಭವಾದ ಹಿನ್ನೆಲೆ ಎರಡನೇ ಬಾರಿ ಕೃಷ್ಣಾ ನದಿ ತೀರದ ಜನರು ಪ್ರವಾಹ ಎದುರಿಸುವ ಆತಂಕ ಎದುರಾಗಿದೆ. ಬೆಳಗಾವಿ ಜಿಲ್ಲೆಯ ಕಾಗವಾಡ, ಅಥಣಿ, ಚಿಕ್ಕೋಡಿ, ರಾಯಬಾಗ ತಾಲೂಕುಗಳಲ್ಲಿ ಹರಿಯುವ ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಭೀತಿ ನದಿ ದಂಡೆ ಜನರಿಗೆ ಆತಂಕ ತಂದೊಡ್ಡಿದೆ.

Leave A Reply

Your email address will not be published.