Car Accident: ಮಗ ವಿದೇಶಕ್ಕೆ ಹಾರಿದ: ಅಪ್ಪ ಬರಬಾರದ ಊರಿಗೆ ಪಯಣ: ಏನಾಯ್ತು..?

Car Accident: ಸಾಕು ಬೆಳೆಸಿದ ಮಗನ ಬಗ್ಗೆ ಸಾವಿರ ಕನಸು ಹೊತ್ತ ತಂದೆ ತನ್ನ ಮಗನ ಉಜ್ವಲ ಭವಿಷ್ಯಕ್ಕಾಗಿ ಪುತ್ರನನ್ನು ವಿದೇಶಕ್ಕೆ ಕಳಿಸಿ ವಾಪಾಸಾಗುತ್ತಿದ್ರು. ಈ ವೇಳೆ ನಡೆದ ಭೀಕರ ಅಪಘಾತದಲ್ಲಿ(Accident) ಮಗನ ಭವಿಷ್ಯ ನೋಡುವ ಮೊದಲೇ ತಂದೆ ಸಾವನ್ನಪ್ಪಿದ್ದಾರೆ. ನಿಜಕ್ಕೂ ವಿಧಿ ಎಷ್ಟು ಕ್ರೂರ ಅನ್ನಿಸಿಬಿಡುತ್ತದೆ. ಮೃತ ದುರ್ದೈವಿ ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘದ ಗೌರವ ಅಧ್ಯಕ್ಷ ಗಣೇಶ್ (64) ಎಂಬುವವರು.

ಗಣೇಶ್ ಅವರು ತನ್ನ ಮಗನನ್ನು ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಿಟ್ಟು ವಾಪಾಸಾಗುವ ವೇಳೆ ಈ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಸಂಪಾಜೆ ಗ್ರಾಮದ ದೊಡ್ಡಡ್ಕ ಬಳಿ ಸಂಭವಿಸಿದೆ. ಕಾರನ್ನು ಗಣೇಶ್ ಅವರೇ ಚಲಾಯಿಸುತ್ತಿದ್ದರು ಹಾಗೂ ಅತೀ ವೇಗದಲ್ಲಿ ಕಾರು ಚಾಲನೆ ಮಾಡಿಕೊಂಡು ಬಂದ ಹಿನ್ನೆಲೆ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ವರದಿಯಾಗಿದೆ.
ಗಣೇಶ್ ಅವರಿಗೆ ಅಪಘಾತದಲ್ಲಿ ಎದೆ ಭಾಗಕ್ಕೆ ಗಂಭೀರ ಗಾಯವಾಗಿದೆ. ಅವರನ್ನು ತಕ್ಷಣ ಸುಳ್ಯದ (Sullia) ಕೆವಿಜಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ವಿಧಿ ವಶರಾಗಿದ್ದಾರೆ. ಕಾರಿನಲ್ಲಿದ್ದ ಮೃತರ ಪುತ್ರಿ, ಅವರ ಅಳಿಯ ಹಾಗೂ ಇನ್ನೊಬ್ಬ ಸಂಬಂಧಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ದುರ್ಘಟನೆ ಬಗ್ಗೆ ಮಡಿಕೇರಿ (Madikeri) ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.