B Y Vijayendra: ಚನ್ನಪಟ್ಟಣದಲ್ಲಿ ಗೆದ್ದಿದ್ದು ಕುಮಾರಸ್ವಾಮಿ, ಬಿಜೆಪಿ ಆಕಾಂಕ್ಷಿಗಳು ಸುಮ್ಮನಿರೋದು ಸರಿ – ರಾಜ್ಯಾಧ್ಯಕ್ಷ ವಿಜಯೇಂದ್ರ

Share the Article

B Y Vijayendra: ರಾಜ್ಯದಲ್ಲಿ ಉಪಚುನಾವಣೆಯ (Assembly By Election) ಕಾವು ಜೋರಾಗಿದೆ. ಆದರೆ ಅಭ್ಯರ್ಥಿಗಳ ಆಯ್ಕೆ ಇನ್ನೂ ಕುತೂಹಲವಾಗಿಯೇ ಉಳಿದಿದೆ. ಅದರಲ್ಲೂ ಪ್ರತಿಷ್ಠೆಯ ಕ್ಷೇತ್ರವಾದ ಚನ್ನಪಟ್ಟಣ(Channapattana)ದ ಕಡೆಯೇ ಜನರ ಚಿತ್ತ ನೆಟ್ಟಿದೆ. ಇದನ್ನು ಜಿದ್ದಾಗಿ ಪರಿಗಣಿಸಿರುವ ಕಾಂಗ್ರೆಸ್ ಹಾಗೂ ಮೈತ್ರಿ ದೋಸ್ತಿಗಳು ಗೆಲ್ಲಲೇ ಬೇಕೆಂದು ಪಣತೊಟ್ಟಿವೆ. ಆದರೀಗ ದೋಸ್ತಿಗಳಾದ BJP-JDS ನಲ್ಲೇ ಕ್ಷೇತ್ರ ಯಾರಿಗೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಈ ಬೆನ್ನಲ್ಲೇ ಟಿಕೆಟ್ ಆಕಾಂಕ್ಷಿ ಆಗಿರುವ ಸಿ ಪಿ ಯೋಗೇಶ್ವರ್ ಅವರು ಟಿಕೆಟ್ ಸಿಗದಿದ್ದರೆ ಪಕ್ಷೇತರವಾಗಿ ಕಣಕ್ಕಿಳಿಯುವ ಕುರಿತು ಘೋಷಣೆ ಮಾಡಿದ್ದಾರೆ.

ಮೈತ್ರಿ ನಾಯಕರಿಗೆ ಸೆಡ್ಡು ಹೊಡೆಯಲು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ (CP Yogeshwar) ಮುಂದಾಗಿದ್ದು ಮೈತ್ರಿ ಅಭ್ಯರ್ಥಿಯಾಗಿ ತನಗೇ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿರೋ ಸಿಪಿವೈ, ಟಿಕೆಟ್ ನೀಡದಿದ್ದರೆ ಪಕ್ಷೇತರವಾಗಿ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಈ ಬೆನ್ನಲ್ಲೇ ಯೋಗೇಶ್ವರ್ ನಡೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ(B Y Vijayendra) ಅವರು ಮೊದಲ ಬಾರೀ ಪ್ರತಿಕ್ರಿಯಿಸಿದ್ದು, ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಹೌದು, ಬೆಂಗಳೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿಜಯೇಂದ್ರ, ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ನನ್ನ ಆದ್ಯ ಕರ್ತವ್ಯವಾಗಿದ್ದು, ಅದನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದೇನೆ. ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡುವ ಕುರಿತು ಬಿಜೆಪಿ ಮತ್ತು ಜೆಡಿಎಸ್ ಪ್ರಮುಖ ನಾಯಕರು ದೆಹಲಿಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಅಲ್ಲದೆ ಚನ್ನಪಟ್ಟಣದಲ್ಲಿ ಈ ಹಿಂದೆ ಗೆದ್ದಿದ್ದು ಎಚ್ ಡಿ ಕುಮಾರಸ್ವಾಮಿ ಅವರು. ಹೀಗಾಗಿ ಬಿಜೆಪಿ ಆಕಾಂಕ್ಷಿಗಳು ಸುಮ್ಮನಿರುವುದು ಲೇಸು ಅಂದಿದ್ದಾರೆ. ಈ ಮೂಲಕ ಚನ್ನಪಟ್ಟಣವು ಜೆಡಿಎಸ್ ಪಾಲಾಗುವುದು ಪಕ್ಕಾ. ಜೆಡಿಎಸ್ ನಿಂದ ತೆರವಾದ ಕ್ಷೇತ್ರ ಜೆಡಿಎಸ್ ಗೆ ಸೇರುವುದು ಸರಿ ಎಂದು ಅವರು ಪರೋಕ್ಷವಾಗಿ ಹೇಳಿದಂತಿದೆ.

ಬಳಿಕ ಮಾತನಾಡಿದ ಅವರು ಚನ್ನಪಟ್ಟಣ ಉಪಚುನಾವಣೆಯಲ್ಲಿ ಯೋಗೇಶ್ವರ್ ಅಭ್ಯರ್ಥಿಯಾಗಬೇಕೆಂಬ ಆಕಾಂಕ್ಷೆಯು ತಪ್ಪಲ್ಲ. ಇನ್ನೊಂದು ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಭಾವ ಮತ್ತು ಬೆಂಬಲವನ್ನು ಯೋಗೇಶ್ವರ್ ಹೊಂದಿದ್ದಾರೆ. ಆದರೆ, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಂದಾಗಿರುವುದರಿಂದ ಮತ್ತು ಕುಮಾರಸ್ವಾಮಿ ಅವರು ಈ ಹಿಂದೆ ಆಯ್ಕೆಯಾಗಿರುವುದರಿಂದ ದೆಹಲಿಯಲ್ಲಿ ಎರಡೂ ಪಕ್ಷಗಳ ನಾಯಕರು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

Leave A Reply