C. P. Yogeshwara: ಕುಮಾರಸ್ವಾಮಿಗೆ ಸ್ವಲ್ಪ ಮುಂಗೋಪ ಅಷ್ಟೇ : ಚನ್ನಪಟ್ಟಣ ಕ್ಷೇತ್ರಕ್ಕೆ ಪ್ರಬಲ ಆಕಾಂಕ್ಷಿ ನಾನು – ಸಿಪಿ ಯೋಗೇಶ್ವರ್
C. P. Yogeshwara: ನಾನು ಚನ್ನಪಟ್ಟಣ ಕ್ಷೇತ್ರಕ್ಕೆ ಪ್ರಬಲ ಆಕಾಂಕ್ಷಿ ಆಗಿದ್ದೇನೆ. ಇಲ್ಲಿ ಸ್ಪರ್ಧೆಗೆ ಜನರು ಕೂಡ ಒತ್ತಡ ಹಾಕ್ತಿದ್ದಾರೆ. ನಾವೆಲ್ಲರೂ ಸಮಾನ ಮನಸ್ಕರ ಸಭೆ ಸೇರಿ ನಿರ್ಣಯ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ಚನ್ನಪಟ್ಟಣವನ್ನು ಕಾಂಗ್ರೆಸ್ ಗೆ ಬಿಟ್ಟು ಕೊಡಬಾರದು. ಆ ಕ್ಷೇತ್ರವನ್ನು ಎನ್‌ಡಿಎ ವಶಕ್ಕೆ ತಗೊಳ್ಳಬೇಕು. ಹೀಗಾಗಿ ನಾನು ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮನಸ್ಸು ಮಾಡಿದ್ದೇನೆ. ಅದಕ್ಕಾಗಿ ಇಂದು ದೆಹಲಿಗೆ ತೆರಳುತ್ತಿದ್ದೇನೆ. ಅಲ್ಲಿ ವರಿಷ್ಠರ ಭೇಟಿಯಾಗಿ ಮಾತಾಡ್ತೇನೆ ಎಂದು ಮಾಜಿ ಶಾಸಕ ಸಿ ಪಿ ಯೋಗೇಶ್ವರ್ ಹೇಳಿದ್ದಾರೆ. ಈ ಮೂಲಕ ಹೆಚ್ ಡಿಕೆ ಮತ್ತು ಸಿ.ಪಿ ಯೋಗೇಶ್ವರ್ ಮಮಧ್ಯೆ ಚೆನ್ನಪಟ್ಟಣ ಟಿಕೆಟ್‌ಗಾಗಿ ಕೋಲ್ಡ್ ವಾರ್ ನಡೆಯುತ್ತಿದೆ ಅನ್ನೋದು ಬಹಿರಂಗವಾಗಿದೆ.
ಕೇಂದ್ರ ಸಚಿವ ಕುಮಾರಸ್ವಾಮಿಗೆ ಸ್ವಲ್ಪ ಮುಂಗೋಪ ಅಷ್ಟೇ. ಆದರೆ ಅಂತಿಮವಾಗಿ ಅವರ ಜೊತೆ ವರಿಷ್ಠರು ಮಾತಾಡಿದ ಬಳಿಕ ನನ್ನ ಸ್ಪರ್ಧೆಗೆ ಅವ್ರು ಕೂಡ ಒಪ್ಪಿಗೆ ಸೂಚಿಸುವ ಭರವಸೆ ಇದೆ. ಕಳೆದ ಬಾರಿ ಲೋಕಸಭೆ ಚುನಾವಣೆಗೆ ಮೈತ್ರಿ ಮಾಡಿಕೊಳ್ಳುವಂತೆ ಹೇಳಿದವನೇ ನಾನು. ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳದಿದ್ದರೇ, ನಮ್ಮ ಭಾಗದಲ್ಲಿ ಜೆಡಿಎಸ್ ಕಥೆ ಏನಾಗ್ತಿತ್ತು..? ಹೀಗಾಗಿ ಎರಡು ಪಕ್ಷಗಳ ಒಮ್ಮತದ ಅಭ್ಯರ್ಥಿ ನಾನೇ ಆಗುವ ವಿಶ್ವಾಸ ಇದೆ. ಈ ಕುರಿತು ವರಿಷ್ಠರ ಜೊತೆ ಮಾಡನಾಡಲು ಒಂದು ಸಾರಿ ಹೋದ್ರೆ ಸಾಲದು, ಮತ್ತೆ ಕೂಡ ಹೋಗಬೇಕು. ಆಗಸ್ಟ್ 16ಕ್ಕೆ ಮತ್ತೆ ದೆಹಲಿಗೆ ತೆರಳಿ ವರಿಷ್ಠರ ಭೇಟಿಯಾಗ್ತೇನೆ.
ಈಗಾಗಲೇ ನಮ್ಮ ರಾಜ್ಯ ನಾಯಕರು ಕೂಡ ನನಗೆ ಭರವಸೆ ನೀಡಿದ್ದಾರೆ. ಎನ್‌ಡಿಎ ನಿಂದ ಸ್ಪರ್ಧೆ ಮಾಡುವ ಆಸೆ ಇದೆ, ಅದು ಸಾಧ್ಯವಾಗಿಲ್ಲ ಅಂದರೆ ಸ್ವತಂತ್ರವಾಗಿ ಸ್ಪರ್ಧೆ ಮಾಡುವ ನಿರ್ಣಯ ಮಾಡಿದ್ದೇನೆ. ಈಗಾಗಲೇ ನಮ್ಮ ಕ್ಷೇತ್ರದ ಜನರು ಹಲವು ಬಾರಿ ಸ್ವತಂತ್ರವಾಗಿ ನಿಂತರು, ನನ್ನನ್ನು ಗೆಲ್ಲಿಸಿದ್ದಾರೆ. ಮೈತ್ರಿ ಅಭ್ಯರ್ಥಿ ಸಾಧ್ಯವಿಲ್ಲ ಅಂದರೆ ಸ್ವತಂತ್ರವಾಗಿ ಸ್ಪರ್ಧೆ ಮಾಡ್ತೀನೇ ಹೊರತು ಕಾಂಗ್ರೆಸ್ ಗೆ ಹೋಗಿ ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡಲ್ಲ. ನನ್ನನ್ನು ಯಾವುದೇ ಕಾಂಗ್ರೆಸ್ ನಾಯಕರು ಸಂಪರ್ಕ ಮಾಡಿಲ್ಲ ಎಂದು ದೆಹಲಿಗೆ ತೆರಳುವ ಮುನ್ನ ಸಿಪಿ ಯೋಗೇಶ್ವರ್ ಹೇಳಿದ್ದಾರೆ.