TB Dam: ತುಂಗಾಭದ್ರಾ ಡ್ಯಾಮ್ ನಿಂದ ಗೇಟ್ ಕೊಚ್ಚಿಹೋಗಲು ಕಾರಣವೇನು? ಏನಿದು ಚೈನ್ ಲಿಂಕ್, ಕಟ್ಟಾಗಿದ್ದು ಹೇಗೆ ?
TB Dam: ನಾಡಿನ ಅತೀ ದೊಡ್ಡ ಅಣೆಕಟ್ಟುಗಳಲ್ಲಿ ಒಂದಾದ, 2 ಲಕ್ಷ ಹೆಕ್ಟೇರ್ ಗಿಂತಲೂ ಹೆಚ್ಚಿಗೆ ಜಮೀನುಗಳಿಗೆ ನೀರುಣಿಸುವ ಹೊಸಪೇಟೆಯ(Hospete) ತುಂಗಭದ್ರಾ ಅಣೆಕಟ್ಟೆಯ(TB Dam) 19ನೇ ಗೇಟ್ ಲಿಂಕ್ ಮುರಿದು ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಿದೆ. ನದಿಗೆ ಅಪಾರ ಪ್ರಮಾಣದ ನೀರು ಹರಿಸಲಾಗುತ್ತಿದೆ. ನದಿ ಬಳಿಯ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ. ತಜ್ಞರ ತಂಡ ಬಂದು ಕಾರ್ಯಾಚರಣೆಯನ್ನು ಶುರುಮಾಡಿದೆ. ಹಾಗಿದ್ರೆ ಇದ್ದಕ್ಕಿದ್ದಂತೆ ಡ್ಯಾಮಿನ ಗೇಟ್ ಕೊಚ್ಚಿಹೋಗಲು ಕಾರಣವೇನು? ಚೈನ್ ಲಿಂಕ್ ಕಟ್ ಆಗಿದ್ದು ಹೇಗೆ? ಇದರ ರೀಪೇರಿ ಹೇಗೆ? ಇಲ್ಲಿದೆ ನೋಡಿ ಕೆಲವು ಮಾಹಿತಿಗಳು.
* ಏನಿದು ಚೈನ್ ಲಿಂಕ್? ಗೇಟ್ ಕುಸಿಯಲು ಕಾರಣವೇನು?
ಡ್ಯಾಮಿನಲ್ಲಿ ಒಂದು ಕಬ್ಬಿಣದ ಹಲಗೆಯನ್ನು ಮತ್ತೊಂದು ಕಬ್ಬಿಣದ ಹಲಗೆಗೆ ಬೆಸುಗೆ (ವೆಲ್ಡಿಂಗ್) ಹಾಕಿ ಚೈನ್ ಲಿಂಕ್ ಗೇಟ್ ರೂಪಿಸಲಾಗುತ್ತದೆ. ಇಂಥ ಬೆಸುಗೆ ಸಡಿಲವಾದ ಕಾರಣ ಗೇಪ್ ಕುಸಿದು ಈ ಅನಾಹುತ ಸಂಭವಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಒ.ಆರ್.ಕೆ.ರೆಡ್ಡಿ ಸಹ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
* ರಿಪೇರಿ ಕಾಮಗಾರಿ ಹೇಗೆ ನಡೆಯುತ್ತೆ?
ತುಂಗಭದ್ರಾ ಜಲಾಶಯದತ್ತ ಈಗಾಗಲೇ ಬೆಂಗಳೂರು, ಹೈದರಾಬಾದ್, ಚೆನ್ನೈ ನಗರಗಳಿಂದ ತಜ್ಞರ ತಂಡ ದೌಡಾಯಿಸಿದೆ. ತುಂಡಾಗಿರುವ ಜಲಾಶಯದ ಗೇಟ್ ನದಿಯಲ್ಲಿ ಕೊಚ್ಚಿ ಹೋಗಿದೆ. ಜಲಾಶಯಕ್ಕೆ ಇದೀಗ ಹೊಸ ಕ್ರಸ್ಟ್‌ಗೇಟ್ ಅಳವಡಿಸಬೇಕಾಗುತ್ತದೆ. ಈ ಗೇಟ್‌ನ ಎತ್ತರ 60 ಅಡಿ, ಅಗಲ 20 ಅಡಿ ಇರಬಹುದು ಎಂದು ಅಂದಾಜಿಸಲಾಗಿದೆ. 12 ಅಡಿ ಎತ್ತರದ 5 ಕಬ್ಬಿಣದ ಹಲಗೆಗಳನ್ನು ಜೋಡಿಸಿ, ಬೆಸುಗೆ ಹಾಕಿ ಈ ಗೇಟ್ ರೂಪಿಸಲು ತುಂಗಭದ್ರಾ ಜಲಾಶಯದ ಆಡಳಿತ ಮಂಡಳಿ ಚಿಂತನೆ ನಡೆಸಿದೆ.
* ಪರಿಣಾಮ ಏನು?
ಈ ಬಾರಿ ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ತುಂಗಭದ್ರಾ ಅಣೆಕಟ್ಟೆ ಭರ್ತಿಯಾಗಿದ್ದು, ಕೊಚ್ಚಿ ಹೋಗಿರುವ ಗೇಟ್ ದುರಸ್ತಿ ಮಾಡಬೇಕಾದರೆ, ನೀರು 20 ಅಡಿಯಷ್ಟು ಇಳಿಕೆಯಾಗಬೇಕಾಗುತ್ತದೆ. ಪರಿಣಾಮ 105 ಅಡಿ ಟಿಎಂಸಿ ನೀರಿನ ಸಾಮರ್ಥ್ಯವಿರುವ ಡ್ಯಾಂ ನಲ್ಲಿ 65 ಟಿಎಂಸಿ ಖಾಲಿಯಾಗಲಿದ್ದು, ರೈತರು ಸಂಕಷ್ಟಕ್ಕೆ ಗುರಿಯಾಗುವ ಸಾಧ್ಯತೆ ಇದೆ. ನೀರು ರಭಸವಾಗಿ ಹರಿಯುತ್ತಿರುವ ಪರಿಣಾಮ ಕಂಪ್ಲಿ ಪಟ್ಟಣ ಜಲಾವೃತಗೊಳುವ ಆತಂಕವೂ ಎದುರಾಗಿದೆ. ಕ್ರಸ್ಟ್ ಗೇಟ್ ತುಂಡಾಗಿರುವ ಹಿನ್ನೆಲೆಯಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದ್ದು, ಜಲಾಶಯದ ಆಸುಪಾಸಿನಲ್ಲಿ ಯಾರೂ ತೆರಳದಂತೆ ಕಟ್ಟೆಚ್ಚರ ವಹಿಸಲಾಗಿದೆ.
* ಜಲಾಶಯದಲ್ಲಿ ಎಷ್ಟಿದೆ ನೀರು?
ಕಳೆದ ಎರಡು ವಾರದಿಂದ ಸುರಿದ ಭಾರೀ ಮಳೆಗೆ ಜಲಾಶಯ ತುಂಬಿ ತುಳುಕುತ್ತಿದೆ. ಸದ್ಯ ಜಲಾಶಯದಲ್ಲಿ ಗರಿಷ್ಠ ಮಟ್ಟದ ನೀರಿದ್ದು, ಸಂಪೂರ್ಣ ಭರ್ತಿಯಾಗಿದೆ. 105 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಶನಿವಾರ ಅಂತ್ಯಕ್ಕೆ 104.5 ಟಿಎಂಸಿ ನೀರಿತ್ತು. ಗರಿಷ್ಠ 497.7 ಅಡಿ ನೀರಿನ ಮಟ್ಟವಿದ್ದು, 497.6 ಅಡಿಯಷ್ಟು ನೀರು ಸಂಗ್ರಹವಾಗಿದೆ.