Banking Laws: ಇನ್ಮುಂದೆ ನಿಮ್ಮ ಬ್ಯಾಂಕ್ ಖಾತೆಗೆ ನಾಲ್ವರು ನಾಮಿನಿಯಾಗಿ ಸೇರ್ಪಡೆಗೊಳಿಸುವ ಅವಕಾಶ: ಹಣಕಾಸು ಸಚಿವೆ ಸ್ಪಷ್ಟನೆ

Banking Laws: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಿದ ಬ್ಯಾಂಕಿಂಗ್ ಕಾನೂನು (ತಿದ್ದುಪಡಿ) ಮಸೂದೆ-2024 (Banking Laws Amendment Bill)ರಲ್ಲಿ ಇನ್ಮುಂದೆ ಠೇವಣಿದಾರರು ಬ್ಯಾಂಕ್ ಖಾತೆಗೆ ನಾಲ್ವರು ನಾಮಿನಿಯಾಗಿ ಸೇರ್ಪಡೆಗೊಳಿಸುವ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಇದರ ಜೊತೆಗೆ ಬ್ಯಾಂಕ್‌ನಲ್ಲಿರುವ ಠೇವಣಿ, ಚಿನ್ನಾಭರಣ, ದಾಖಲೆ ಪತ್ರಗಳು ಹಾಗೂ ಲಾಕರ್‌ಗಳಿಗೂ ಈ ಕಾನೂನಿನಡಿ ಠೇವಣಿದಾರರು ತಮ್ಮ ಉತ್ತರಾಧಿಕಾರಿಗಳ ನೇಮಿಸುವ ಅಧಿಕಾರ ಹೊಂದಲಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಬ್ಯಾಂಕ್ ಖಾತೆಗೆ ಒಬ್ಬರನ್ನು ನಾಮಿನಿ ಮಾಡಲು ಅವಕಾಶವಿದೆ. ಇದೀಗ ಮಸೂದೆ ಏಕಕಾಲದಲ್ಲಿ ನಾಲ್ವರನ್ನು ವಾರಸುದಾರರನ್ನಾಗಿ ಮಾಡಲು ಅವಕಾಶ ನೀಡಿದೆ. ಠೇವಣಿದಾರರು ಮತ್ತು ಹೂಡಿಕೆದಾರರ ಹಿತದೃಷ್ಟಿ ಕಾಪಾಡಲು ಸರ್ಕಾರವು ಈ ಕ್ರಮ ಕೈಗೊಂಡಿದೆ ಎಂದು ಹಣಕಾಸು ಸಚಿವೆ ಅವರು ತಿಳಿಸಿದ್ದಾರೆ.
ಇನ್ನು ಬ್ಯಾಂಕಿಂಗ್ ಕಾನೂನು (ತಿದ್ದುಪಡಿ) ಮಸೂದೆ-2024 ಪ್ರಕಾರ, ವಾರಸುದಾರರಿಲ್ಲದ ಲಾಭಾಂಶ, ಷೇರು, ಬಡ್ಡಿ ಅಥವಾ ಬಾಂಡ್‌ಗಳನ್ನು ಹೂಡಿಕೆದಾರರ ಶಿಕ್ಷಣ ಮತ್ತು ರಕ್ಷಣಾ ನಿಧಿಗೆ ವರ್ಗಾಯಿಸಲು ಅನುವು ಮಾಡಿಕೊಡಲಿದೆ. ವಾರಸುದಾರರು ಇದ್ದರೆ ಆ ನಿಧಿಯ ಮೂಲಕ ಹಣ ವಾಪಸ್ ಪಡೆಯುವ ಅವಕಾಶವೂ ಇದೆ ಎಂದಿದ್ದಾರೆ.