Delhi: ಶಾಲೆಗೆ ಹೋಗಲು ಬೋರು, ಶಾಲೆಗೇ ಬಾಂಬ್ ಬೆದರಿಕೆ ಹಾಕಿದ 14 ರ ಪೋರ ಅರೆಸ್ಟ್ !
Delhi: ಶಾಲೆಗೆ ಹೋಗಲು ಬೋರಾದ ಹುಡುಗನೊಬ್ಬನು ಶಾಲೆ ತಪ್ಪಿಸಿಕೊಳ್ಳಲು ತನ್ನ ಶಾಲೆಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ ಸಂಬಂಧ ಪೊಲೀಸರು 14 ವರ್ಷದ ಬಾಲಕನನ್ನು ಬಂಧಿಸಿದ್ದಾರೆ. ದಕ್ಷಿಣ ದೆಹಲಿಯ(Delhi) ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ನಿನ್ನೆ ಶುಕ್ರವಾರ ಮಧ್ಯರಾತ್ರಿ 12.30ರ ಸುಮಾರಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದರಿಂದ ಖಾಸಗಿ ಶಾಲೆಯಲ್ಲಿ ಭಾರೀ ಆತಂಕ ಮನೆ ಮಾಡಿತ್ತು. ಕೂಡಲೇ ಪೊಲೀಸರನ್ನು ಕರೆಸಿ ಬಾಂಬ್ ಮತ್ತು ಶ್ವಾನ ದಳದಿಂದ ತಪಾಸಣೆ ನಡೆಸಲಾಗಿತ್ತು. ಆದರೆ ಬಾಂಬು ಪತ್ತೆಯಾಗಿರಲಿಲ್ಲ.
ಜತೆಗೆ ದಕ್ಷಿಣ ದೆಹಲಿಯ ಇನ್ನೂ ಎರಡು ಖಾಸಗಿ ಶಾಲೆಗಳಲ್ಲಿ ಬಾಂಬ್ ಇಡಲಾಗಿದೆ ಎಂದು ಇಮೇಲ್ ಸಂದೇಶ ಕಳುಹಿಸಲಾಗಿತ್ತು. ಸಂದೇಶ ಕಳುಹಿಸಿದ ವ್ಯಕ್ತಿ ತಾನು ಪಾಕಿಸ್ತಾನಿ ಜನರಲ್ ಎಂದು ಹೇಳಿದ್ದ. ತಕ್ಷಣ ಪೊಲೀಸರು ಹುಡುಕಾಟ ಶುರು ಮಾಡಿದ್ದರು.
ಪೊಲೀಸರ ಪ್ರಕಾರ, ಇತರ ಎರಡು ಶಾಲೆಗಳಲ್ಲಿಯೂ ತಪಾಸಣೆ ನಡೆಸಲಾಯಿತು. ಆದರೆ ಮೂರರಲ್ಲಿ ಎಲ್ಲಿಯೂ ಅನುಮಾನಾಸ್ಪದವಾಗಿ ವಸ್ತುಗಳು ಕಂಡು ಬರಲಿಲ್ಲ. ಈ ಸಂಬಂಧ ಒಬ್ಬ ಬಾಲಕನನ್ನು ಶನಿವಾರ ಬಂಧಿಸಲಾಗಿದೆ. ಆತ ಸಂಬಂಧಿಕರ ಇಮೇಲ್ ಖಾತೆಯ ಮೂಲಕ ಶಾಲಾ ಆಡಳಿತಕ್ಕೆ ಮೇಲ್ ಕಳುಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ತನ್ನ ಶಾಲೆಗೆ ಹೋಗಲು ಇಷ್ಟಪಡದ ಹುಡುಗನು ಸಂಬಂಧಿಕರ ಇಮೇಲ್ ಐಡಿಯನ್ನು ಬಳಸಿಕೊಂಡು ಶಾಲೆಯ ಆಡಳಿತಕ್ಕೆ ಬಾಂಬ್ ಬೆದರಿಕೆಯನ್ನು ಕಳುಹಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಲಕನನ್ನು ಜುವೆನೈಲ್ ಜಸ್ಟೀಸ್ ಬೋರ್ಡ್ (ಜೆಜೆಬಿ) ಮುಂದೆ ಹಾಜರುಪಡಿಸಲಾಗಿ ನಂತರ ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.