Parliament Session: ‘ವಂದೇ ಭಾರತ್’ ಗೆ ಕೊಡುವ ಮಹತ್ವವನ್ನು ಸರ್ಕಾರ ಬಡವರ ರೈಲುಗಳಿಗೇಕೆ ಕೊಡುತ್ತಿಲ್ಲ ?! ರೈಲ್ವೆ ಸಚಿವರು ಹೇಳಿದ್ದಿಷ್ಟು
Parliament Session: ಭಾರತೀಯ ರೈಲ್ವೆ(Indian Railway) ಇಲಾಖೆ ಬಗ್ಗೆ ಎಲ್ಲರಿಗೂ ತಿಳಿದಿದೆ. ವಿಶ್ವದಾದ್ಯಂತ ನಾಲ್ಕನೇ ಅತಿ ದೊಡ್ಡ ರೈಲ್ವೆ ಪ್ಲಾಟ್ಫಾರ್ಮ್ ನಮ್ಮ ದೇಶದ್ದು ಎಂಬುದು ಎಲ್ಲರಿಗೂ ಹೆಮ್ಮೆಯ ಸಂಗತಿ. ದೇಶದ ಜೀವನಾಡಿಯಾದ ಈ ರೈಲುಗಳು ಪ್ರತಿದಿನ ಸುಮಾರು 2.5 ಕೋಟಿ ಜನರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುತ್ತವೆ. ಇತ್ತೀಚಿನ ದಿನಗಳಲ್ಲಿ, ಮೋದಿ ಸರ್ಕಾರ(Modi Government) ಅಧಿಕಾರಕ್ಕೆ ಬಂದಾಗಿನಿಂದ ರೈಲ್ವೆ ಅಭಿವೃದ್ಧಿಯಲ್ಲಿ ಸಾಕಷ್ಟು ಅಭಿವೃದ್ಧಿಯ ಬದಲಾವಣೆಗಳು ಆಗುತ್ತಿವೆ. ಅಂತೆಯೇ ಅವುಗಳಲ್ಲಿ ವಂದೇ ಭಾರತ್ ರೈಲು(Vande Bharat Trains) ಗಳು ಕೂಡ ಒಂದು.
ವಂದೇ ಭಾರತ್ ರೈಲು ಭಾರತದ ಅಭಿವೃದ್ಧಿಯ ಪ್ರತೀಯಕವಾದರೂ ಅದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಟಿಕೆಟ್ ದರ ಹೆಚ್ಚು, ಶ್ರೀಮಂತರಿಗೆ ಮಾತ್ರ ಎಟುಕುತ್ತದೆ, ಎಲ್ಲಾ ನಿಲ್ದಾಣಗಳಿಗೂ ಹೋಗಲ್ಲ, ಸುಲಭದಲ್ಲಿ ಲಭ್ಯವಿಲ್ಲ ಎಂದು ಹೀಗೆ ಹಲವು ಆರೋಪಗಳು ಕೇಳಿಬರುತ್ತಿವೆ. ಆದರೂ ಕೇಂದ್ರ ಇವುಗಳ ಅಭಿವೃದ್ಧಿಗೆ ಸಾಕಷ್ಟು ಶ್ರಮ ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ವಂದೇ ಭಾರತ್ ಕುರಿತು ಸದನದಲ್ಲಿ ವಿಪಕ್ಷಗಳು ರೈಲ್ವೆ ಸಚಿವರಿಗೆ ಪ್ರಶ್ನೆಗಳನ್ನು ಕೇಳಿದ್ದು, ಈ ರೈಲುಗಳಿಗೆ ಕೊಡುವಷ್ಟು ಗಮನವನ್ನು ಬಡವರ ರೈಲುಗಳಿಗೆ ಏಕೆ ಕೊಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸಚಿವರು ಏನು ಹೇಳಿದ್ದಾರೆ ಗೊತ್ತಾ? ಇಲ್ಲಿದೆ ನೋಡಿ.
ಹೌದು, ಸಂಸತ್ತಿನಲ್ಲಿ ರೈಲ್ವೆ ಕೇವಲ ವಂದೇ ಭಾರತ್ಗೆ ಗಮನ ಹರಿಸಿ, ಬಡವರ ರೈಲುಗಳಿಗೆ ಏಕೆ ಗಮನ ಹರಿಸುತ್ತಿಲ್ಲ ಎಂದು ಪ್ರಶ್ನಿಸಿದಾಗ ಉತ್ತರಿಸಿದ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್(Ashwini Vaishnav) ಅವರು “ನಮಗೆ ಕಡಿಮೆ ಆದಾಯದ ದೊಡ್ಡ ವರ್ಗ ಆಧಾರವಾಗಿದೆ. ಅವರ ಬೇಡಿಕೆಗೆ ನಾವು ಸ್ಪಂದಿಸುತ್ತೇವೆ ಹಾಗೂ ‘ಏಸ್ಪಿರೇಷನಲ್ ಕ್ಲಾಸ್’ ಎಂಬ ವರ್ಗ ಸೃಷ್ಟಿಯಾಗಿದ್ದು, ಈ ವರ್ಗದ ಬೇಡಿಕೆಗಳನ್ನೂ ಈಡೇರಿಸಬೇಕಾಗುತ್ತದೆ. ಹೀಗೆ ಎರಡೂ ವರ್ಗಗಳಿಗೆ ಸೌಲಭ್ಯ ಕಲ್ಪಿಸುತ್ತೇವೆ” ಎಂದು ಹೇಳಿದರು.