Kerala Marriage Story: ಮಗ ಪ್ರೀತಿಸಿ ಕೈಕೊಟ್ಟ ಹುಡುಗಿಯನ್ನು ಮಗಳಂತೆ ಸಾಕಿ ಮದುವೆ ಮಾಡಿಸಿದ ಅಪ್ಪ
Kerala Marriage Story: ಎಲ್ಲರ ಜೀವನದಲ್ಲಿ ಮದುವೆ ಅತ್ಯಂತ ಪ್ರಮುಖ ಘಟ್ಟವಾಗಿರುತ್ತದೆ. ಅದಕ್ಕೆ ದೊಡ್ಡವರು ಹುಡುಗ-ಹುಡುಗಿಯ ಪೂರ್ವಾಪರಗಳನ್ನು ನೋಡಿ ಮದುವೆ ಮಾಡಿಸುತ್ತಾರೆ. ಆದರೆ ಇಲ್ಲೊಂದು ಮದುವೆ ವಿಷಯದಲ್ಲಿ ವಿಚಿತ್ರ ಸನ್ನಿವೇಶ ಎದುರಾಗಿದೆ. ಇದು ಯಾವುದೇ ಸಿನಿಮಾ ಸ್ಟೋರಿಗಿಂತ ಕಡಿಮೆ ಇಲ್ಲದ ಘಟನೆ. ಬನ್ನಿ ಆ ಸ್ವಾರಸ್ಯಕರ ಘಟನೆ ಏನು? ತಿಳಿಯೋಣ
ತಿರುವಾಂಕುರ ಕಾಲೇಜಿನಲ್ಲಿ ಹುಡುಗ-ಹುಡುಗಿ ಪದವಿ ಕಲಿಯುವ ಸಂದರ್ಭದಲ್ಲಿ ಇವರಿಬ್ಬರ ನಡುವೆ ಪ್ರೀತಿ ಉಂಟಾಗುತ್ತದೆ. ಹೀಗಾಗಿ ಇವರಿಬ್ಬರು ಓಡಿ ಹೋಗುತ್ತಾರೆ. ಹುಡುಗಿ ಕಡೆಯವರಿಗೆ ಪ್ರೀತಿಯ ವಿಷಯ ಗೊತ್ತಾಗಿ ಪೊಲೀಸ್ ಕಂಪ್ಲೇಟ್ ಕೊಡುತ್ತಾರೆ. ನಂತರ ಪೊಲೀಸ್‌ನವರು ಹುಡುಗನನ್ನು ಪತ್ತೆ ಮಾಡಿ, ನ್ಯಾಯಾಲಯಕ್ಕೆ ಹಾಜರು ಪಡಿಸುತ್ತಾರೆ. ಈ ಸಂದರ್ಭದಲ್ಲಿ ಹುಡುಗಿ ಮನೆಯವರು ಹುಡುಗನ ಜೊತೆ ಓಡಿ ಹೋದ ಹುಡುಗಿ ನಮ್ಮ ಮನೆಗೆ ವಾಪಾಸು ಬರುವುದು ಬೇಡ ಎಂದು ಹೇಳುತ್ತಾರೆ.
ಈ ಸಂದರ್ಭದಲ್ಲಿ ಹುಡುಗನ ಮನೆಯವರು ಹುಡುಗಿಗೆ 18 ವರ್ಷ ತುಂಬಿದಾಗ ಮದುವೆ ಮಾಡಿಕೊಡುತ್ತೇವೆ ಎಂದು ತಮ್ಮ ಮನೆಗೆ ಕರೆದುಕೊಂಡು ಹೋಗುತ್ತಾರೆ. ಹುಡುಗ-ಹುಡುಗಿಯನ್ನು ಒಂದೇ ಮನೆಯಲ್ಲಿ ಮದುವೆಗಿಂತ ಮೊದಲು ಕೂರಿಸುವುದು ಸರಿಯಾಗುವುದಿಲ್ಲ ಎಂದು ಮಗನನ್ನು ಹಾಸ್ಟೆಲ್‌ಗೆ ಸೇರಿಸಿ, ಆ ಹುಡುಗಿಯನ್ನು ತಮ್ಮ ಮಗಳಂತೆ ಸಾಕಿ ಮನೆಯಲ್ಲಿರಿಸಿ ಓದು ಮುಂದುವರಿಸುತ್ತಾರೆ.
ಆದರೆ ಇಲ್ಲೇ ಇರುವುದು ಟ್ವಿಸ್ಟ್. ಹಾಸ್ಟೆಲ್‌ನಲ್ಲಿ ಓದುವ ಸಂದರ್ಭದಲ್ಲಿ ಹುಡುಗನಿಗೆ ಇನ್ನೊಂದು ಹುಡುಗಿಯ ಜೊತೆ ಪ್ರೇಮಾಂಕುರವಾಗುತ್ತೆ. ಇದನ್ನು ತಿಳಿದ ಹುಡುಗನ ತಂದೆ ಶಾಜಿ ಅವರು ಮಗನನ್ನು ಗಲ್ಫ್‌ಗೆ ಉದ್ಯೋಗಕ್ಕೆಂದು ಕಳುಹಿಸುತ್ತಾರೆ. ಇತ್ತ ವಿದೇಶಕ್ಕೆ ಹೋದ ಮಗ ತನ್ನ ಮನೆಯವರಿಗೂ ಗೊತ್ತಾಗದ ಹಾಗೆ ಊರಿಗೆ ಬಂದು ಎರಡನೇ ಪ್ರೇಯಸಿಯನ್ನು ಮದುವೆಯಾಗುತ್ತಾನೆ.
ಇದನ್ನು ತಿಳಿದ ಶಾಜಿ ಅವರು ಮಗ ಮೊದಲು ಪ್ರೀತಿಸಿದ ಹುಡುಗಿಯನ್ನು ವಂಚಿಸಿದ್ದಕ್ಕಾಗಿ, ತಮ್ಮ ಮಗನನ್ನು ತನ್ನ ಕುಟುಂಬದಿಂದ ಹೊರಹೋಗುವಂತೆ ಹೇಳುತ್ತಾರೆ. ನಂತರ ತನ್ನ ಮಗನಿಗಾಗಿ ಮಾಡಿಟ್ಟಿದ್ದ ಕುಟುಂಬದ ಆಸ್ತಿಯನ್ನು ಅವನಿಗಾಗಿ ಕಾದು ಕುಳಿತಿದ್ದ ಹುಡುಗಿಯ ಹೆಸರಿಗೆ ಬರೆಯುತ್ತಾರೆ.
ಈ ರೀತಿಯಲ್ಲಿ ಮಗ ಪ್ರೀತಿಸಿದ್ದ ಹುಡುಗಿ ಮನೆ ಮಗಳಾಗಿದ್ದಾಳೆ. ನಂತರ ಮಗಳನ್ನು ಕರುನಾಗಪಳ್ಳಿ ನಿವಾಸಿ ಅಜಿತ್ ಎಂಬಾತನಿಗೆ ತಿರುನಕ್ಕರ ದೇವಾಲಯದಲ್ಲಿ ಮದುವೆ ಮಾಡಿಕೊಟ್ಟಿದ್ದಾರೆ.
ತನ್ನ ಆಸ್ತಿಯನ್ನು ಬರೆದುಕೊಟ್ಟು, ಓರ್ವ ಮಗಳಿಗೆ ಮಾಡುವ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡಿಕೊಟ್ಟ ಈ ಹುಡುಗನ ತಂದೆಯನ್ನು ಕಂಡರೆ ಕಣ್ಣಾಲಿಗಳು ತುಂಬುವುದಿಲ್ಲವೇ? ಶಾಜಿ ಅವರ ಮಾನವೀಯತೆಗೆ ಈಗಾಗಲೇ ಜನರು ಶಹಬ್ಬಾಸ್ ಗಿರಿ ನೀಡಿದ್ದಾರೆ. ಸಿನಿಮಾದ ಕಥೆ ನೋಡಲು ಚೆನ್ನಾಗಿರುತ್ತದೆ, ಆದರೆ ನಿಜ ಜೀವನದಲ್ಲಿ ನಡೆಯುವಂತಹ ಇಂತಹ ಘಟನೆಗಳು ಇನ್ನೊಬ್ಬರಿಗೆ ಮಾದರಿಯಾಗಲಿ.