Phonepe: ಕನ್ನಡಿಗರ ಬೆಂಬಲಕ್ಕೆ ನಿಂತ ಕಿಚ್ಚ ಸುದೀಪ್! ಫೋನ್‌ಪೇ ಒಪ್ಪಂದ ಕ್ಯಾನ್ಸಲ್?
Phonepe: ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ವಿರೋಧ ಮಾಡಿರುವ ಫೋನ್ ಪೇ ವಿರುದ್ಧ ಬಾಯ್ಕಾಟ್ ಅಭಿಯಾನ ಆರಂಭವಾಗಿದ್ದು, ಇದೀಗ ನಟ ಸುದೀಪ್ ಈ ಅಭಿಯಾನಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಈಗಾಗಲೇ ಫೋನ್ ಪೇಗೆ (Phonepe) ಕರ್ನಾಟಕದಲ್ಲಿ ನಟ ಸುದೀಪ್ ಅವರು ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಿಚ್ಚ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.
ಹೌದು, ಕನ್ನಡಿಗರಿಗೆ ಉದ್ಯೋಗ ಮೀಸಲಾತಿಯನ್ನು ಹಲವು ಉದ್ಯಮಿಗಳು ವಿರೋಧಿಸಿದ್ದರು. ಹೀಗಾಗಿ ಕೈಗಾರಿಕೋದ್ಯಮಿಗಳ ವಿರುದ್ಧ ಪ್ರತಿಭಟನೆ ಕೂಡ ನಡೆದಿತ್ತು. ಅಲ್ಲದೆ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿಯನ್ನು ಕಡ್ಡಾಯಗೊಳಿಸುವ ಬಗ್ಗೆ ಕರ್ನಾಕ ಸರ್ಕಾರದ ಹೊಸ ಮಸೂದೆಯ ವಿರುದ್ಧ ಫೋನ್ ಪೇ ಸಿಇಓ ಸಮೀರ್ ನಿಗಮ್ ಕಮೆಂಟ್ ಮಾಡಿದ್ದರು. ಹೀಗಾಗಿ ಕನ್ನಡಿಗರ ವಿರೋಧಿ ಸಮೀರ್ ನಿಗಮ್ ಒಡೆತನದ ಫೋನ್ ಪೇಯನ್ನು ಮೊಬೈಲ್ ನಿಂದ ಅನ್ ಇನ್ಸ್ಟಾಲ್ ಮಾಡಿ ಆತನಿಗೆ ಬುದ್ಧಿ ಕಲಿಸಿ ಎಂಬ ಅಭಿಯಾನ ನಡೆಯುತ್ತಿದೆ.
ಸದ್ಯ ಕನ್ನಡಿಗರ ವಿರುದ್ಧ ನಿಂತಿರೋ ಕಂಪನಿಯ ಪರ ಪ್ರಚಾರ ಮಾಡದಿರೋ ನಿಲುವಿಗೆ ಸುದೀಪ್ ಬಂದಿದ್ದಾರೆ ಎನ್ನಲಾಗಿದೆ. ಕನ್ನಡಿಗರಲ್ಲಿ ಕ್ಷಮೆ ಕೇಳದಿದ್ದರೆ ಫೋನ್ ಪೇ ಅಗ್ರಿಮೆಂಟ್ ಕ್ಯಾನ್ಸಲ್ ಗೆ ನಿರ್ಧಾರ ಮಾಡಲಾಗಿದೆ. ನಾಳೆ ಈ ಬಗ್ಗೆ ನಟ ಸುದೀಪ್ ನಿರ್ಧಾರ ಘೋಷಿಸುವ ಸಾಧ್ಯತೆ ಇದೆ.
ಒಟ್ಟಿನಲ್ಲಿ ಸಿಡಿದೆದ್ದ ಕನ್ನಡಿಗರು ಫೋನ್ ಪೇ ವಿರುದ್ಧ ಅನ್ ಇನ್ಸ್ಟಾಲ್ ಅಭಿಯಾನ ಆರಂಭಿಸಿದ್ದ ಈ ಹಿನ್ನೆಲೆಯಲ್ಲಿ ಸುದೀಪ್ ಕನ್ನಡಿಗರಿಗೆ ಬೆಂಬಲ ನೀಡಲು ಮುಂದಾಗಿದ್ದಾರೆ ಎಂದು ಸುದೀಪ್ ತಂಡದಿಂದ ಮಾಹಿತಿ ಲಭ್ಯವಾಗಿದೆ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಕಂಪನಿ, ಹಣಕ್ಕಿಂತಾ ಕನ್ನಡಿಗನಾಗಿ ನನ್ನ ಸ್ವಾಭಿಮಾನ ಮುಖ್ಯ ಎನ್ನುವುದು ಸುದೀಪ್ ಅವರ ನಿರ್ಧಾರವಾಗಿದೆ.