Indira Canteen: ಬಂಟ್ವಾಳದ ಇಂದಿರಾ ಕ್ಯಾಂಟೀನ್‌ನಲ್ಲಿ ಡಿಫೆರೆಂಟ್ ಮೆನು: ಪುಂಡಿ ಗಸಿ, ನೀರು ದೋಸೆ, ಪಾಯಸದೂಟ ಭರ್ಜರಿ ಭೋಜನ!
Indira Canteen: ರಾಜ್ಯದ ಎಲ್ಲ ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಯಾ ಜಿಲ್ಲೆಗೆ ತಕ್ಕಂತೆ ಜುಲೈ 1ರಿಂದ ಹೊಸ ಮೆನು ಜಾರಿಗೊಂಡಿದ್ದು, ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಇಂದಿರಾ ಕ್ಯಾಂಟೀನ್ (Indira Canteen) ಊಟದ ಹೊಸ ಮೆನುವನ್ನು ಪ್ರಾರಂಭ ಮಾಡಲಾಗಿದೆ.
ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಇಂದಿರಾ ಕ್ಯಾಂಟೀನ್ ಗ್ರಾಹಕರಿಗೆ ಈಗ ಹೊಸ ಅಡುಗೆ ರುಚಿ ಸಿಗಲಿದೆ. ಬಿಸಿ ಬಿಸಿ ಅನ್ನ ಸಾಂಬಾರ್ (Rice Sambar) ಜೊತೆಗೆ ಪಾಯಸ, ಇಡ್ಲಿ ಸಾಂಬಾರು, ಪುಂಡಿ ಗಸಿ, ಸಜ್ಜಿಗೆ ಅವಲಕ್ಕಿ, ಬನ್ಸ್ (Buns) ಸವಿಯುವ ಅವಕಾಶ ಇದೆ. 6 ವರ್ಷಗಳ ಹಿಂದೆ ಬಂಟ್ವಾಳದ ಬಿ.ಸಿ.ರೋಡು ಮಿನಿ ವಿಧಾನಸೌಧ ಬಳಿ ಆರಂಭಗೊಂಡಿದ್ದ ‘ಇಂದಿರಾ ಕ್ಯಾಂಟೀನ್’ ಈಗ ಹೊಸ ಮೆನುವಿನೊಂದಿಗೆ ಜನರ ಹೊಟ್ಟೆ ತುಂಬಿಸುತ್ತಿದೆ. ಯಾಕೆಂದರೆ ಬಂಟ್ವಾಳದ ಇಂದಿರಾ ಕ್ಯಾಂಟೀನ್ ಮೆನು ಡಿಫೆರೆಂಟ್ ಆಗಿಯೇ ಕಾರ್ಯಾರಂಭ ಮಾಡುತ್ತಿದೆ.
ಇಲ್ಲಿನ ಹೊಸ ಮೆನು ಪ್ರಕಾರ, ಸೋಮವಾರ: ನೀರು ದೋಸೆ, ಚಟ್ನಿ ಮತ್ತು ಇಡ್ಲಿ ಸಾಂಬಾರು, ಮಂಗಳವಾರ: ಇಡ್ಲಿ ಸಾಂಬಾರು ಮತ್ತು ಸಜ್ಜಿಗೆ -ಅವಲಕ್ಕಿ,
ಬುಧವಾರ: ಇಡ್ಲಿ ಸಾಂಬಾರು ಮತ್ತು ಪುಂಡಿ ಗಸಿ,
ಗುರುವಾರ: ಇಡ್ಲಿ ಸಾಂಬಾರು ಮತ್ತು ಪಲಾವ್,
ಶುಕ್ರವಾರ: ಇಡ್ಲಿ ಸಾಂಬಾರು ಮತ್ತು ಕಡ್ಲೆ- ಅವಲಕ್ಕಿ,
ಶನಿವಾರ: ಇಡ್ಲಿ ಸಾಂಬಾರು ಮತ್ತು ಬನ್ಸ್,
ಭಾನುವಾರ: ಇಡ್ಲಿ ಸಾಂಬಾರು ಮತ್ತು ಕೇಸರಿಬಾತ್ ಸಿಗುತ್ತಿದೆ. ಹೀಗೆ ಕರಾವಳಿ ಶೈಲಿಯ ಆಹಾರಗಳು ಇಂದಿರಾ ಕ್ಯಾಂಟೀನ್ ನಲ್ಲಿ ಲಭ್ಯವಾಗುತ್ತಿದೆ.
ಬೆಳಗ್ಗೆ 7ರಿಂದ 10ರವರೆಗೆ, ಸಂಜೆ 5ರಿಂದ 7ರವರೆಗೆ ಬಿಸಿ ಬಿಸಿ ತಿಂಡಿ ಕೇವಲ ₹ 5 ರೂಪಾಯಿಗೆ ಸಿಗುತ್ತಿದೆ. ಮಧ್ಯಾಹ್ನ 12.30ರಿಂದ 3 ಗಂಟೆಯವರೆಗೆ ಚಪಾತಿ ಸಹಿತ ಊಟ ಸಿಗುತ್ತಿದೆ. ಜುಲೈ 1ರಿಂದ 10 ರೂಪಾಯಿ ಊಟದ ಜತೆಗೆ ಎರಡು ಚಪಾತಿ ಸಿಗುತ್ತಿದೆ. ಆಲೂಗಡ್ಡೆ ಬಾಜಿ ಬೇಕಿದ್ದರೆ ಹೆಚ್ಚುವರಿ 10 ರೂಪಾಯಿ ಹೆಚ್ಚುವರಿ ಪಾವತಿಸಬೇಕಿದೆ. ಇನ್ನು ಸೋಮವಾರ, ಗುರುವಾರ ಮತ್ತು ಶನಿವಾರ ಊಟದ ಜತೆಗೆ ಪಾಯಸವೂ ಸಿಗುತ್ತಿದ್ದು ಗ್ರಾಹಕರಲ್ಲಿ ಸಂತಸ ಮೂಡಿಸಿದೆ.
ಐದಾರು ವರ್ಷಗಳಲ್ಲಿ 200 ಮಂದಿ ಮಾತ್ರ ತಿಂಡಿ ಮತ್ತು ಊಟಕ್ಕೆ ಬರುತ್ತಿದ್ದರು. ಈ ಪೈಕಿ ಆಟೋ ರಿಕ್ಷಾ ಚಾಲಕರು ಮತ್ತು ಕೂಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಜುಲೈ 1ರಿಂದ ಸುಮಾರು 300 ಮಂದಿ ಬರುತ್ತಿದ್ದಾರೆ. ಅಲ್ಲದೆ ಇಂದಿರಾ ಕ್ಯಾಂಟೀನ್ ನ ಅಡುಗೆ ಕೇವಲ ಎರಡು ಗಂಟೆಯಲ್ಲೇ ಖಾಲಿಯಾಗುತ್ತಿರೋದು ಜನಾಕರ್ಷಣೆಗೆ ಸಾಕ್ಷಿಯಾಗಿದೆ.
Mangaluru: ವಿದ್ಯುತ್ ಸ್ಪರ್ಶಿಸಿ ಒದ್ದಾಡುತ್ತಿದ್ದ ನಾಯಿಯನ್ನು ರಕ್ಷಿಸಲು ಹೋದ ಸಿಎ ವಿದ್ಯಾರ್ಥಿನಿ ಸಾವು