Uttar Kannada: ಭಾರೀ ಮಳೆಯ ಕಾರಣ, ರಾಷ್ಟ್ರೀಯ ಹೆದ್ದಾರಿ ಮೇಲೆ ಕುಸಿದ ಗುಡ್ಡ; 7 ಜನರ ದುರ್ಮರಣ, ನದಿಗೆ ಬಿದ್ದ ಎರಡು ಗ್ಯಾಸ್ ಟ್ಯಾಂಕರ್
Uttar Kannada: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿರುವ ಕಾರಣದಿಂದ ಇಂದು ಅಂಕೋಲಾ ತಾಲೂಕಿನ ಶಿರೂರು ಬಳಿಯ ಹೆದ್ದಾರಿ ಸಮೀಪ ಬೃಹತ್ ಗುಡ್ಡ ಕುಸಿದಿದ್ದು, ಏಳು ಜನ ಮೃತ ಹೊಂದಿರುವುದಾಗಿ ವರದಿಯಾಗಿದೆ. ಘಟನಾ ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ, ಎನ್‌ಡಿಆರ್‌ಎಫ್ ಸಿಬ್ಬಂದಿ ಬಂದಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಗುಡ್ಡ ಕುಸಿತದ ಪರಿಣಾಮ ವಾಹನ ಸಂಚಾರ ಬಂದ್ ಆಗಿದೆ.
ಗುಡ್ಡ ಕುಸಿದು ಏಳು ಜನ ಮೃತ ಹೊಂದಿರುವುದಾಗಿ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಮಣ್ಣಿನಡಿ 9 ಜನ ಸಿಲುಕಿದ್ದು, ಒಂದೇ ಕಾರಿನಲ್ಲಿ ತೆರಳುತ್ತಿದ್ದ ಒಂದೇ ಕುಟುಂಬದವರು ಇದ್ದಾರೆ ಎನ್ನಲಾಗಿದೆ. ಲಕ್ಷ್ಮಣ ನಾಯ್ಕ, ಶಾಂತಿ ನಾಯ್ಕ (37), ರೋಷನ್, ಆವಂತಿಕಾ, ಜಗನ್ನಾಥ ಸೇರಿ 9 ಜನ ಸಿಲುಕಿದ್ದಾರೆ. 9 ಜರಲ್ಲಿ 7 ಮಂದಿ ಮೃತ ಹೊಂದಿದ್ದು, ಮಣ್ಣು ತೆರವಿನ ಕಾರ್ಯಾಚರಣೆ ನಡೆಯುತ್ತಿದೆ.
ಕಳೆದ 15 ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಇಂದು ಬೃಹತ್ ಗುಡ್ಡ ಕುಸಿದಿರುವ ಘಟನೆ ನಡೆದಿದ್ದು, ಜನರ ಸಾವಾಗಿದೆ.
ಈ ದುರ್ಘಟನೆ ನಡೆಯುವ ಮೊದಲು ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿನ ಗುಡ್ಡದ ಬಳಿ ಟ್ಯಾಂಕರ್ ನಿಲ್ಲಿಸಿ, ಚಾಲಕ ಹಾಗೂ ಕ್ಲೀನರ್ ಅಲ್ಲೇ ಚಹಾ ಸೇವನೆ ಮಾಡುತಿದ್ದರು. ಕೂಡಲೇ ದಿಢೀರನೆಂದು ಗುಡ್ಡ ಕುಸಿದಿದೆ. ಗುಡ್ಡ ಕುಸಿದ ರಭಸಕ್ಕೆ ಗ್ಯಾಸ್ ಟ್ಯಾಂಕರ್ ನದಿಗೆ ಬಿದ್ದಿದೆ. ಚಾಲಕ, ಕ್ಲೀನರ್ ಸೇರಿ ಒಂಬತ್ತು ಜನ ನಾಪತ್ತೆಯಾಗಿರುವ ಕುರಿತು ವರದಿಯಾಗಿದೆ.
ನದಿಗೆ ಟ್ಯಾಂಕರ್ ಬಿದ್ದಿರುವುದರಿಂದ ಗ್ಯಾಸ್ ಸೋರಿಕೆಯಾಗುತ್ತಿದ್ದು, ಈ ಕಾರಣದಿಂದ ಜಿಲ್ಲಾಡಳಿತ ನದಿ ಪಾತ್ರದ ಮನೆಗಳಲ್ಲಿ ವಾಸಿಸುವ ಜನರನ್ನು ತೆರವುಗೊಳಿಸುವಂತೆ ಆದೇಶ ನೀಡಿದೆ.