Chikkamagaluru: ಚಿಕ್ಕಮಗಳೂರಿನ ಪ್ರವಾಸಿ ತಾಣದಲ್ಲಿ ಕೆಸರುಮಯ ರಸ್ತೆಯಲ್ಲಿ ಬೈಕ್ ವೀಲಿಂಗ್- ಬೆಳ್ತಂಗಡಿಯ ಐವರು ಯುವಕರ ಬಂಧನ
Chikkamagaluru: ರಾಜ್ಯದಲ್ಲಿ ಮಳೆ ಬಿರುಸು ಪಡೆದುಕೊಂಡಿದ್ದು, ಪ್ರಕೃತಿ ಸೌಂದರ್ಯ ಹೆಚ್ಚಿದ್ದು, ಇತ್ತ ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಇದರ ಮಧ್ಯೆ ಕೆಲ ರಸ್ತೆಗಳು ಕೆಸರುಮಯವಾಗಿದ್ದು, ಇದರಲ್ಲಿ ದೊಡ್ಡ ದೊಡ್ಡ ಗುಂಡಿಗಳು ಕೂಡಾ ಸೃಷ್ಟಿಗೊಂಡಿದೆ. ಈ ಗುಡ್ಡಗಾಡಿನ ರಸ್ತೆಗಳು ಎತ್ತರ ತಗ್ಗು ದಿಣ್ಣೆಗಳಿಂದ ಕೂಡಿದ್ದು, ಬೈಕ್ ಸವಾರರು ಇಲ್ಲಿ ವಾಹನ ಓಡಿಸುವುದು ಕಷ್ಟ ಸಾಧ್ಯ. ಆದರೆ ಈ ಅವಕಾಶವನ್ನು ಕೆಲವು ಬೈಕರ್‌ಗಳು ತಮ್ಮ ರೀಲ್ಸ್ ಹುಚ್ಚಿಗೆ ಬಳಸಿಕೊಂಡಿದ್ದು, ಇದೀಗ ಸೆರೆವಾಸ ಅನುಭವಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಐವರು ಯುವಕರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ರಾಣಿ ಝರಿಗೆ ಹೋಗಿದ್ದು, ಅಲ್ಲಿರುವ ಕಚ್ಚಾ ರಸ್ತೆಯಲ್ಲಿ ರೀಲ್ಸ್‌ಗಾಗಿ ಬೈಕ್ ವೀಲಿಂಗ್ ಮಾಡಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಕಳೆದ ಕೆಲಸ ಸಮಯದಿಂದ ಸುರಿಯುವ ಭಾರೀ ಮಳೆಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದ್ದು, ವಾಹನ ದಟ್ಟನೆಯಿಂದ ಎಲ್ಲಾ ರಸ್ತೆಗಳು ಸಂಪೂರ್ಣ ಕೆಸರುಮಯವಾಗಿದೆ. ಈ ಯುವಕರು ಇಂತಹ ರಸ್ತೆಯಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ತಮ್ಮ ಪುಂಡಾಟಿಕೆ ಮೆರೆದಿದ್ದು, ಒಬ್ಬ ವೀಲಿಂಗ್ ಮಾಡಿದರೆ, ಇನ್ನೋರ್ವ ಅದನ್ನು ವೀಡಿಯೋ ಮಾಡಿದ್ದಾನೆ.
ಇವರ ಈ ಹುಚ್ಚಾಟಗಳನ್ನು ನೋಡಿ ಬೇಸತ್ತ ಇತರ ಪ್ರವಾಸಿಗರು, ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಪೊಲೀಸರು ಪುಂಡಾಟ ಮೆರೆದ ಯುವಕರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವೀಡಿಯೋಗಳನ್ನು ಗಮನಿಸಿ ತನಿಖೆ ಮಾಡಿದ್ದಾರೆ.
ಆರೋಪಿಗಳು ಬೈಕ್‌ಗಳಿಗೆ ಮಾರ್ಪಡಿಸಿದ ಸೈಲೆನ್ಸರ್ಗಳನ್ನು ಅಳವಿಡಿಸಿ ಐದು ಕಿ.ಮೀ. ರಸ್ತೆಯಲ್ಲಿ ಎಕ್ಸಲೇಟರ್ ಹೆಚ್ಚಿಸಿದ್ದು, ಕರ್ಕಶ ಶಬ್ದ ಮಾಡಿ ಪದೇ ಪದೇ ಬೈಕ್ ವೀಲಿಂಗ್ ಮಾಡುತ್ತ, ಸಂಪೂರ್ಣ ರಸ್ತೆ ಹಾಳು ಮಾಡಿದ್ದಲ್ಲದೇ, ಸ್ಥಳೀಯರಿಗೆ ಕಿರಿಕಿರಿ ಉಂಟು ಮಾಡಿದ್ದರು. ಈ ಹುಚ್ಚಾಟವನ್ನು ನೋಡಿದ ಸ್ಥಳೀಯರು ಸಿಟ್ಟು ಗೊಂಡಿದ್ದರು. ಯಾರು ಹೇಳಿದರೂ ಕೇಳದೇ, ತಮ್ಮ ಮೊಂಡುತನ ಪ್ರದರ್ಶನ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಇವರ ರೀಲ್ಸ್ ಹುಚ್ಚಿಗೆ ರಸ್ತೆ ಸಂಪೂರ್ಣ ಕೆಸರುಗದ್ದೆಯಾಗಿದೆ.
ದುಡುಕು, ನಿರ್ಲಕ್ಷ್ಯತನ, ಸಾರ್ವಜನಿಕ ರಸ್ತೆಯಲ್ಲಿ ವೀಲಿಂಗ್ ಮಾಡಿ ಸಾರ್ವಜನಿಕ ಉಪದ್ರವ ಮಾಡಿದ ಆರೋಪದ ಮೇಲೆ ಬೆಳ್ತಂಗಡಿ ಉಜಿರೆ ನಿವಾಸಿಗಳಾದ ಗಿರೀಶ್, ಗಣೇಶ್ ಭಂಡಾರಿ, ಪ್ರವೀಣ್, ರೋಹಿತ್, ಗಣೇಶ್ ಬಂಧಿತ ವ್ಯಕ್ತಿಗಳು. ಆರೋಪಿಗಳ ವಿರುದ್ಧ ಕಲಂ 281, 292 ಬಿಎನ್‌ಎಸ್ ಅಡಿ ಪ್ರಕರಣ ದಾಖಲಾಗಿದೆ.