Mangaluru: ಲೇಡಿಹಿಲ್ ಹಿಟ್& ರನ್ ಪ್ರಕರಣ; ವಿವಿಧ ಆಯಾಮದಲ್ಲಿ ತನಿಖೆಗೆ ಇಳಿದ ಖಾಕಿ ಪಡೆ!!!
mangaluru news ladyhill hit and run case police started investigation in multi pronged latest news
Mangaluru: ನಗರದ ಲೇಡಿಹಿಲ್ ಬಳಿ ಬುಧವಾರ ಮಧ್ಯಾಹ್ನ ನಡೆದ ಹಿಟ್ ಆಂಡ್ ರನ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಘಟನೆಯ ಸ್ಥಳ, ಸಿಸಿ ಕೆಮರಾ ಆಧರಿಸಿ, ಕಾರಿನ ತಾಂತ್ರಿಕ ಸಮಸ್ಯೆ, ಚಾಲಕನ ನಿರ್ಲಕ್ಷ್ಯದ ಚಾಲನೆ ಕಾರಣವೇ ಎನ್ನುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.
ಐವರು ಯುವತಿಯರು ಲೇಡಿಹಿಲ್ ಬಳಿ ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಹಿಂದಿನಿಂದ ಅತೀ ವೇಗವಾಗಿ ಬಂದು ಕಾರು ಡಿಕ್ಕಿ ಹೊಡೆದಿದ್ದು, ಈ ಘಟನೆಯಲ್ಲಿ ಸುರತ್ಕಲ್ ಸಮೀಪದ ಕಾನ ಬಾಳ ಬಳಿಯ ನಿವಾಸಿ ರೂಪಶ್ರೀ (23) ಅವರು ಸ್ಥಳದಲ್ಲೇ ಮೃತಪಟ್ಟಿದ್ರು. ನಂತರ ಕಾರು ಚಾಲಕ ಕಮಲೇಶ್ ಬಲದೇವ್‌ನ ನಿರ್ಲಕ್ಷ್ಯದ ಚಾಲನೆಯೇ ಈ ಘಟನೆಗೆ ಕಾರಣ ಎಂದು ಆರೋಪ ಮಾಡಲಾಗಿತ್ತು.
ವೈದ್ಯಕೀಯ ತಪಾಸಣೆ ಸಂದರ್ಭ ಆರೋಪಿ ಮದ್ಯ ಸೇವಿಸಿರುವುದಕ್ಕೆ ಯಾವುದೇ ಪುರಾವೆ ದೊರಕಿರಲಿಲ್ಲ. ಕಾರಿನ ಎಂಜಿನ್ ಓವರ್ ಹೀಟ್ ಆಗಿ ನಿಯಂತ್ರಣ ತಪ್ಪಿದೆ ಎಂದು ವಿಚಾರಣೆ ವೇಳೆ ಆರೋಪಿ ಕಾರು ಚಾಲಕ ಹೇಳಿದ್ದು, ಈ ನಿಟ್ಟಿನಲ್ಲಿ ಕಾರಿನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದೆಯೇ ಎಂದು ಆರ್‌ಟಿಓ ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ನೀಡಲಿದ್ದಾರೆ ಎಂದು ಪೊಲೀಸ್ ಆಯುಕ್ತರು ಮಾಧ್ಯಮವೊಂದಕ್ಕೆ ಹೇಳಿದ್ದಾರೆ.
ಅಪಘಾತ ಸಂದರ್ಭದಲ್ಲಿ ಕಾರು ಚಾಲಕ ಮೊಬೈಲ್ ಬಳಕೆ ಮಾಡುತ್ತಿದ್ದನೇ ಎನ್ನುವ ದೃಷ್ಟಿಕೋನದಲ್ಲಿ ಕೂಡಾ ತನಿಖೆ ಮಾಡಲಾಗುತ್ತಿದೆ. ಒಂದು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಕಾರಿನ ಸ್ಟಿಯರಿಂಗ್ ಮೇಲಿನ ನಿಯಂತ್ರಣ ಕಳೆದುಕೊಂಡು ಕಾರು ಎಡಕ್ಕೆ ಚಲಿಸಿ ಫುಟ್‌ಪಾತ್ ಮೇಲೆ ಬಂದಿರುವ ಸಾಧ್ಯತೆಯೂ ಇದೆ. ಈ ಕಾರಣದಿಂದ ಅಪಘಾತ ಸ್ಥಳಕ್ಕಿಂತ ಹಿಂದಿನ ಸಿಸಿ ಕೆಮರಾ ಫುಟೇಜ್‌ಗಳನ್ನು ಪಡೆದು ಪರಿಶೀಲನೆ ನಡೆಸಲಾಗುತ್ತಿದೆ.