Karkala Theme Park: ರಾತ್ರೋರಾತ್ರಿ ಕಾರ್ಕಳದ ಪರಶುರಾಮನ ಪ್ರತಿಮೆ ಮಾಯ
Karkala Theme Park Parashurama statue of Karkala disappeared overnight
Karkala Theme Park: ಇದೇ ವರುಷದ ಜನವರಿ 27 ರಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿರುವ, 100 ಅಡಿ ಎತ್ತರದ ಕುಂಜ ಬೆಟ್ಟದಲ್ಲಿರುವ ಉಡುಪಿ ಜಿಲ್ಲೆಯ ಅತೀ ಎತ್ತರದ ಪರಶುರಾಮನ ಮೂರ್ತಿ ಇರುವ ಥೀಂ ಪಾರ್ಕ್ (Karkala Theme Park) ಸುಮಾರು 15 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇದೀಗ ಥೀಂ ಪಾರ್ಕ್‌ನಲ್ಲಿ ತಲೆ ಎತ್ತಿದ್ದ ಪರಶುರಾಮನ ಪ್ರತಿಮೆ ರಾತ್ರೋರಾತ್ರಿ ಮಾಯವಾಗಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೂತನ ಥೀಂ ಪಾರ್ಕ್ ಉದ್ಘಾಟನೆಯಾದ ಬಳಿಕ ಸಿಡಿಲು ನಿರೋಧಕ ಅಳವಡಿಕೆ ಮತ್ತು ಇನ್ನಿತರ ಬಾಕಿ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಥೀಂ ಪಾರ್ಕ್ ಬಂದ್ ಮಾಡಿರುವ ವಿಚಾರವಾಗಿ, ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದರು. ಪರಶುರಾಮನ ಮೂರ್ತಿ ನಕಲಿ ಎನ್ನುವ ಮೂಲಕ ಹೊಸ ವಿವಾದ ಆರಂಭವಾಗಿತ್ತು. ಇದೀಗ ಕಳೆದ ರಾತ್ರಿ ಬೆಟ್ಟದ ಮೇಲಿನ ಮೂರ್ತಿ ಮಾಯ ಆಗಿದೆ.
ಸದ್ಯ ಸ್ಥಳಕ್ಕೆ ಬಂದು, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ ಪರಿಶೀಲನೆ ಮಾಡಿ, ಅಧಿಕಾರಿಗಳು ಸ್ಪಷ್ಟವಾದ ಮಾಹಿತಿ ನೀಡದ ಹಿನ್ನಲೆಯಲ್ಲಿ ವಿಚಾರಣೆಗೆ ಆದೇಶ ನೀಡಿದ್ದರು. ಸದ್ಯ ಕೆಲವು ದಿನಗಳಿಂದ ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾಮಗಾರಿ ನಡೆಸುತ್ತಿರುವುದರಿಂದ ಅನುಮಾನ ಇನ್ನಷ್ಟು ಹೆಚ್ಚಾಗಿತ್ತು. ಮೂರ್ತಿಯನ್ನು ಪೂರ್ತಿಯಾಗಿ ತೆರವು ಮಾಡಿದ್ದು, ಅನುಮಾನಕ್ಕೆ ಕಾರಣವಾಗಿದೆ.
ಇದೇ ವಿಚಾರವಾಗಿ ಕಾರ್ಕಳ ಕಾಂಗ್ರೆಸ್ ಸೋಮವಾರ ಪ್ರತಿಭಟನೆ ನಡೆಸಲಿದೆ. ನವೆಂಬರ್ ತಿಂಗಳ ಅಂತ್ಯಕ್ಕೆ ಕಂಚಿನ ಮೂರ್ತಿ ತಯಾರಿ ಪೂರ್ಣವಾಗಲಿದೆ. ಬೆಟ್ಟದ ಮೇಲಿನಿಂದ ಪರಶುರಾಮನ ಪ್ರತಿಮೆ ಕಣ್ಮರೆಯಾಗಿದ್ದು, ಕಾರ್ಕಳ ಕಾಂಗ್ರೆಸ್ ಪರಶುರಾಮನ ವಿಗ್ರಹ ನಕಲಿ ಎಂದಿದ್ದು, ಈ ಬಗ್ಗೆ ಮಾಜಿ ಸಚಿವ ಕಾರ್ಕಳ ಶಾಸಕ ಸುನಿಲ್ ಕುಮಾರ್ ಸ್ಪಷ್ಟನೆ ಕೊಡಬೇಕೆಂದು ಆಗ್ರಹಿಸಿದೆ.