Crime News: ಠಾಣೆಗೆ ಕರೆಸಿ ಥಳಿತದ ಆರೋಪ, ಮನನೊಂದ ಗಂಡ ʼಕ್ಷಮಿಸು ಬಿಡು ಹೆಂಡತಿʼ ಎಂದು ವಾಟ್ಸಪ್‌ ಮೆಸೇಜ್‌ ಕಳುಹಿಸಿ ಆತ್ಮಹತ್ಯೆ ಮಾಡಿದ!

Bengaluru crime news men send WhatsApp message to wife before suicide

Bengaluru: ವೈಯಾಲಿಕಾವಲ್‌ ಠಾಣೆ ಇನ್ಸ್‌ಪೆಕ್ಟರ್‌ ಥಳಿಸಿದರು ಎಂದು ಆರೋಪ ಮಾಡಿದ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ತಲಘಟ್ಟಪುರದಲ್ಲಿ ಬುಧವಾರ ನಡೆದಿದೆ(Bengaluru crime news).

ರಘುವನಹಳ್ಳಿಯ ಬಿಸಿಎಂ ಲೇಔಟ್‌ ನಿವಾಸಿ ವಿ ನಾಗರಾಜ್‌ (47) ಎಂಬುವವರೇ ಮೃತರು. ವಾಟ್ಸಪ್‌ ಸಂದೇಶವೊಂದನ್ನು ತನ್ನ ಹೆಂಡತಿಗೆ ಕಳುಹಿಸಿ, ಮನೆಯಲ್ಲಿ ನೇಣು ಬಿಗಿದುಕೊಂಡು ನಾಗರಾಜ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಮನೆಗೆ ಮರಳಿದಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಗರಾಜು ಹಾಗೂ ವಿನುತಾ ದಂಪತಿಗೆ 14 ವರ್ಷದ ಮಗ ಇದ್ದಾನೆ. ನಾಗರಾಜು ಅವರು ಈ ಹಿಂದೆ ಬಾಷ್‌ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು, ಎರಡು ವರ್ಷಗಳ ನಂತರ ಸ್ವಯಂ ನಿವೃತ್ತಿ ಹೊಂದಿ, ನಂತರ ಡಾಕ್ಯುಮೆಂಟ್‌ ವೆರಿಫಿಕೇಶನ್‌ ಕೆಲಸ ಮಾಡುತ್ತಿದ್ದರು. ಸಾಲದ ವಿಚಾರವಾಗಿ ವೈಯಾಲಿಕಾವಲ್‌ ಠಾಣೆಗೆ ನಾಗರಾಜ್‌ ವಿರುದ್ಧ ನಟರಾಜ್‌ ದೂರು ನೀಡಿದ್ದ ಕಾರಣ, ಇನ್ಸ್‌ಪೆಕ್ಟರ್‌ ಠಾಣೆಗೆ ಕರೆಯಿಸಿದ್ದು, ನಾಗರಾಜ್‌ ಅವರಿಗೆ ಬಾಯಿಗೆ ಬಂದಂತೆ ಬೈದು ಥಳಿಸಿದ್ದರು ಎಂದು ಆರೋಪಿಸಲಾಗಿದೆ.

ನಂತರ ನಾಗರಾಜ್‌ ಅವರ ಸ್ನೇಹಿತ ಚಕ್ರಪಾಣಿ ಬಿಡಿಸಿಕೊಂಡು ಬಂದಿದ್ದು, ಬುಧವಾರ ಕೂಡಾ ನಾಗರಾಜ್‌ಗೆ ಇನ್ಸ್‌ಪೆಕ್ಟರ್‌ ಬರುವಂತೆ ಸೂಚಿಸಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ನಾಗರಾಜ್‌ ತನ್ನ ಪತ್ನಿಬಳಿ ಈ ಕುರಿತು ಹೇಳಿದ್ದರು. ವಿನುತಾ ಅವರು ಪತಿಗೆ ಧೈರ್ಯದ ಮಾತುಗಳನ್ನು ಹೇಳಿ ಸಮಾಧಾನ ಮಾಡಿ, ಹೆದರಬೇಡಿ, ವಿಚಾರಣೆಗೆ ಹೋಗಿ ಎಂದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆದರೆ ಮರುದಿನ ಕೆಲಸಕ್ಕೆ ಹೋಗಿದ್ದ ಹೆಂಡತಿಗೆ ಹತ್ತು ಗಂಟೆಯ ಸಮಯದಲ್ಲಿ “ದಯವಿಟ್ಟು ನನ್ನ ಕ್ಷಮಿಸು, ಬೈ ಟೇಕ್‌ ಕೇರ್‌ ಜಗನ್‌ ನೋಡ್ಕೋ” ಎಂದು ವಾಟ್ಸಪ್‌ನಲ್ಲಿ ಮರಣ ಪತ್ರ ಕಳುಹಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂದೇಶ ನೋಡಿದ ಪತ್ನಿ ಕೂಡಲೇ ಮನೆಗೆ ಬಂದಿದ್ದಾರೆ. ಆದರೆ ಮನೆಗೆ ಬಂದಾಗ ಗಂಡ ನೇಣಿಗೆ ಶರಣಾಗಿರುವುದು ಕಂಡು ಬಂದಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ನಾಗರಾಜ್‌ ಅವರ ಆತ್ಮಹತ್ಯೆ ಸಂಬಂಧ ವೈಯಾಲಿಕಾವಲ್‌ ಠಾಣೆ ಇನ್ಸ್‌ಪೆಕ್ಟರ್‌ ಹೆಸರು ಉಲ್ಲೇಖ ಆಗಿದೆ ಎಂದು ವರದಿಯಾಗಿದೆ. ಯಾವ ಕಾರಣಕ್ಕಾಗಿ ನಾಗರಾಜ್‌ರನ್ನು ಠಾಣೆಗೆ ಪಿಐ ಕರೆಸಿದ್ದರು ಎಂದು ವಿಚಾರಣೆ ನಡೆಸಲಾಗುತ್ತದೆ, ಇದರ ಬಳಿಕ ಸೂಕ್ತ ಕ್ರಮ ಜರುಗಿಸುತ್ತೇನೆ ಎಂದು ಕೇಂದ್ರ ವಿಭಾಗ ಡಿಸಿಪಿ ಶೇಖರ್‌ ಟೆಕ್ಕಂಣ್ಣನವರ್‌ ತಿಳಿಸಿದ್ದಾರೆ ಎಂದು ಮಾಧ್ಯಮವೊಂದು ಪ್ರಕಟ ಮಾಡಿದೆ.

ಇದನ್ನೂ ಓದಿ: Liquor Sale Ban: ಇಂದು ಹಲವೆಡೆ ಮದ್ಯ ನಿಷೇಧ; ಕಾರಣ ಇಲ್ಲಿದೆ!

Leave A Reply

Your email address will not be published.