PM Kisan: ಪಿಎಂ ಕಿಸಾನ್ ಫಲಾನುಭವಿ ರೈತರಿಗೆ ಬಿಗ್ ಶಾಕ್- 81,000 ರೈತರು ಯೋಜನೆಯಿಂದ ಔಟ್ !!
PM Kissan: ಈಗಾಗಲೇ 2018ರಲ್ಲಿ ಕೇಂದ್ರ ಸರಕಾರ ಜಾರಿಗೆ ತಂದ ಪಿಎಂ ಕಿಸಾನ್ (PM Kisan) ಯೋಜನೆಯಡಿ ರೈತರಿಗೆ ಪ್ರೋತ್ಸಾಹ ಧನವಾಗಿ ಪ್ರತಿ ವರ್ಷ ಮೂರು ಕಂತುಗಳಲ್ಲಿ 6,000 ರೂ. ಈ ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಕಳುಹಿಸಲಾಗುತ್ತಿತ್ತು. ಆದರೆ ಇದೀಗ ಪಿಎಂ ಕಿಸಾನ್ ಯೋಜನೆ ಫಲಾನುಭವಿಗಳಾದ 81 ಸಾವಿರಕ್ಕೂ ಅಧಿಕ ರೈತರನ್ನು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಿಂದ ಕೈಬಿಡಲಾಗಿದೆ.
ಹೌದು, ಉತ್ತಮ ಆರ್ಥಿಕ ಸ್ಥಿತಿ, ತೆರಿಗೆ ಪಾವತಿ ಮಾಡುವ ಬಿಹಾರದ 81,595 ರೈತರನ್ನು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಿಂದ ಕೇಂದ್ರ ಸರ್ಕಾರ ಅನರ್ಹಗೊಳಿಸಿದೆ. ಜೊತೆಗೆ ಈವರೆಗೂ ಅವರು ಪಡೆದುಕೊಂಡು ಹಣವನ್ನು ಮರಳಿಸಲು ಸೂಚಿಸಲಾಗಿದೆ. ಕೆಲ ರೈತರು ಹಣವನ್ನು ಸರ್ಕಾರಕ್ಕೆ ವಾಪಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಮಾಹಿತಿ ಪ್ರಕಾರ, ಬಿಹಾರದಲ್ಲಿ 81,595 ರೈತರಲ್ಲಿ 45,879 ರೈತರು ಆದಾಯ ತೆರಿಗೆ ಪಾವತಿದಾರರಾಗಿದ್ದಾರೆ. ಉಳಿದ 35,716 ರೈತರು ಇತರ ಕಾರಣಗಳಿಂದ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಿಂದ ಹೊರಬಿದ್ದಿದ್ದಾರೆ. ಅರ್ಹ ರೈತರಲ್ಲದಿದ್ದರೂ ಸರ್ಕಾರದ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ. ಸಂಬಂಧಪಟ್ಟ ಬ್ಯಾಂಕ್ಗಳ ಮೂಲಕ ಫಲಾನುಭವಿಗಳಿಂದ ಹಣವನ್ನು ಮರಳಿ ಸಂಗ್ರಹಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸೂಚಿಸಲಾಗಿದೆ ಎಂದು ರಾಜ್ಯ ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸದ್ಯ ಅನರ್ಹಗೊಂಡ ರೈತರ ಆರ್ಥಿಕ ಸ್ಥಿತಿಯನ್ನು ಪರಿಶೀಲಿಸಲಾಗಿದ್ದು, ಅವರು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ನಿಯಮಗಳಡಿ ಬರುವುದಿಲ್ಲ. ಆದ್ದರಿಂದ ಫಲಾನುಭವಿಗಳಾಗಲು ಅವರು ಅನರ್ಹರಾಗಿದ್ದಾರೆ. ಹೀಗಾಗಿ ಅವರನ್ನು ಸರ್ಕಾರದ ಯೋಜನೆಯ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಹೆಚ್ಚುವರಿ ಕೃಷಿ ನಿರ್ದೇಶಕ ಧನಂಜಯ್ ಪತಿ ತ್ರಿಪಾಠಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅದಲ್ಲದೆ ಈ ಯೋಜನೆಯಡಿ ಈಗಾಗಲೇ ಆರ್ಥಿಕ ಲಾಭ ಪಡೆದಿರುವ ರೈತರಿಂದ ಮರುಪಾವತಿ ಪ್ರಕ್ರಿಯೆ ಆರಂಭಿಸುವಂತೆ ಕೇಂದ್ರ ಸರ್ಕಾರ ಕೃಷಿ ಇಲಾಖೆಗೆ ಸೂಚಿಸಿದೆ. ಮತ್ತು ಅಧಿಕಾರಿಗಳು ಆದ್ಯತೆಯ ಆಧಾರದ ಮೇಲೆ ಮರುಪಾವತಿಯನ್ನು ಸಂಗ್ರಹಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ತಿಳಿಸಲಾಗಿದೆ. ಫಲಾನುಭವಿಗಳಿಗೆ ಹಣ ಹಿಂತಿರುಗಿಸಲು ನೋಟಿಸ್ ಕಳುಹಿಸುವಂತೆ ಸೂಚಿಸಲಾಗಿದೆ ಎಂದರು.