Police officer leave letter: 30 ದಿನ ರಜ ಕೊಡಿ, ನಿಮ್ಮ ಕಿರಿಕಿರಿ, ಒತ್ತಡ ನಿಭಾಯಿಸುವ ಶಾಂತಿ ಮಂತ್ರ ಕಲಿತು ಬರುತ್ತೇನೆ: ಪೊಲೀಸ್ ಅಧಿಕಾರಿಯ ಲೀವ್ ಲೆಟರ್ ವೈರಲ್
Latest Karnataka news Ballari Police officer's leave letter goes viral 30 days leave for learn Shanti mantra

Police officer leave letter: ಒಂದು ತಿಂಗಳ ಸುದೀರ್ಘ ರಜೆ ಕೋರಿ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಮೇಲಾಧಿಕಾರಿಗೆ ಬರೆದ ವಿಶಿಷ್ಟ ಲೀವ್ ಲೆಟರ್ ಈಗ ವೈರಲ್ ಆಗಿದೆ. ರಜೆ ಕೇಳಿದ ತಮ್ಮಮೊದಲ ಪತ್ರಕ್ಕೆ ಸಕಾರಾತ್ಮಕ ಸ್ಪಂದನೆ ದೊರೆಯದಿದ್ದಕ್ಕೆ ಎರಡನೇ ಬಾರಿ ತಮ್ಮ ಮೇಲಾಧಿಕಾರಿಗಳಿಗೆ ಬರೆದ ಈ ವಿಶೇಷ ರಜಾ ಪತ್ರ(Police officer leave letter) ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆ ಪೊಲೀಸ ಅಧಿಕಾರಿ ಮೊದಲಿಗೆ ತನಗೆ ವೈಯಕ್ತಿಕ ಕಾರಣಕ್ಕೆ ರಜೆ ಕೋರುತ್ತಿದ್ದೇನೆ ಎಂದು ಉಲ್ಲೇಖಿಸಿ ಲೀವ್ ಲೆಟರ್ ಬರೆದಿದ್ದರು. ಆದರೆ ಅದಕ್ಕೆ ಪೂರಕ ಸ್ಪಂದನೆ ಬರದೇ ಇದ್ದು ಅವರಿಗೆ ರಜೆ ಸಿಕ್ಕಿರಲಿಲ್ಲ. ಆಗ ಆ ಪೊಲೀಸ ಅಧಿಕಾರಿ ವಿಶಿಷ್ಟವಾಗಿ ಪತ್ರ ಬರೆದಿದ್ದಾರೆ. ತಮ್ಮ ಎರಡನೇ ಪತ್ರದಲ್ಲಿ ರಜೆಗೆ ಕಾರಣ ಏನೆಂದು ವಿವರಿಸಿರುವುದು ಇದೀಗ ಗಮನ ಸೆಳೆದಿದೆ. ಅದು ಸ್ವಲ್ಪ ತಮಾಷೆಯ ಜತೆಗೆ, ಈಗ ಪೊಲೀಸ್ ಇಲಾಖೆಯ ಅಧಿಕಾರಿಗಳು ಒಳಗಾಗುವ ಒತ್ತಡ ಕಿರಿಕಿರಿ ಮತ್ತು ಸರಿಯಾಗಿ ಸಿಗದ ರಜಾ ಸ್ಥಿತಿಗಳ ವಸ್ತುಸ್ಥಿತಿಯನ್ನು ತೆರೆದಿಟ್ಟಿದೆ. ಎನ್ನಲಾಗುತ್ತಿದೆ.
ಅಂದಹಾಗೆ, ಈ ಪತ್ರವನ್ನು ಬಳ್ಳಾರಿ ತೋರಣಗಲ್ಲು ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕರು ಬಳ್ಳಾರಿಯ ಪೊಲೀಸ್ ಅಧೀಕ್ಷಕರಿಗೆ ಬರೆದಿದ್ದಾರೆ ಎನ್ನಲಾಗಿದೆ. ಆ ಪೊಲೀಸ್ ಅಧಿಕಾರಿ ಬರೆದ ಪತ್ರದ ಸಾರಾಂಶ ಈ ಕೆಳಕಂಡಂತಿದೆ.
” ಉಲ್ಲೇಖ-1 ರ ಪ್ರಕಾರ ನನಗೆ 30 ದಿನಗಳ ವೈಯಕ್ತಿಕ ಕಾರಣಗಳಿಗಾಗಿ ರಜೆ ಕೋರಿದ್ದೆ. ಉಲ್ಲೇಖ-2 ರ ಪ್ರಕಾರ ನೀವು 5 ದಿನಗಳ ರಜೆಯನ್ನು ಮಾತ್ರ ಮಂಜೂರು ಮಾಡಿದ್ದು, ಉಳಿದ 25 ದಿನಗಳ ರಜೆ ಮಂಜೂರು ಮಾಡಲು ತಮಗಿದ್ದ ತೊಂದರೆ, ತೊಡಕು, ಅಸಹಾಯಕತೆ ಅಥವಾ ಅನಿವಾರ್ಯತೆ ಬಗ್ಗೆ ನನಗೆ ತಿಳಿಸದೇ ಇರುವುದು ಆಶ್ಚರ್ಯವನ್ನುಂಟು ಮಾಡಿದೆ. ನೀವು ಒಂದು ವೇಳೆ ಕಣ್ತಪ್ಪಿನಿಂದ ಈ 5 ದಿನ (ಪರಿವರ್ತಿತ) ರಜೆ ಮಂಜೂರು ಮಾಡಿದ್ದೀರೋ ಅಥವಾ ಉದ್ದೇಶಪೂರ್ವಕವಾಗಿಯೇ ನನ್ನ ರಜೆಯನ್ನು ತಡೆ ಹಿಡಿದಿದ್ದೀರೋ, ಅಲ್ಲಾ ನನ್ನ ಖಾತೆಯಲ್ಲಿ ರಜೆಯೇ ಇಲ್ಲವೋ, ಇಂತಹಾ ಯಾವುದನ್ನೂ ನೀವು ನಮೂದಿಸದೇ ಮತ್ತೊಮ್ಮೆ ತಾವು ತಮ್ಮ ನಿರ್ಲಕ್ಷ್ಯ ಆಡಳಿತದ ವೈಖರಿಯನ್ನು ಪ್ರದರ್ಶಿಸಿದ್ದೀರಿ ಎಂದು ನನಗೆ ಅನ್ನಿಸುತ್ತಿದೆ ” ಎಂದು ಲಘು ವಿಡಂಬನೆ ಹಾಸ್ಯವಾಗಿ ಮತ್ತು ಖಾರವಾಗಿ ಆ ಅಧಿಕಾರಿ ಪತ್ರ ಬರೆದಿದ್ದಾರೆ.
“ನಾನು ನನ್ನ ವೈಯಕ್ತಿಕ ಕಾರಣಗಳಿಗಾಗಿ ರಜೆ ಕೋರಿದ್ದು, ಆ ಕಾರಣಗಳನ್ನು ವಿವರಿಸುವ ಅವಶ್ಯಕತೆ ಮತ್ತು ಅನಿವಾರ್ಯತೆ ಇಲ್ಲವೆಂದು ಈ ಮೊದಲು ಭಾವಿಸಿದ್ದೆನು. ಆದರೆ, ಈಗ ಆ ಕಾರಣಗಳನ್ನು ತಿಳಿಸುವ ಅನಿವಾರ್ಯತೆಯನ್ನು ತಾವು ಸೃಷ್ಟಿಸಿದ ಕಾರಣದಿಂದ, ನಿಮ್ಮಆಡಳಿತವು ತಾರತಮ್ಯ ನೀತಿ, ಕಿರುಕುಳ, ಸುಳ್ಳು, ಮೋಸದಿಂದ ಕೂಡಿದೆ. ಅಲ್ಲದೆ ನೀವು ನನ್ನ ಮಾನಸಿಕ ನೆಮ್ಮದಿಯನ್ನು ಸತತವಾಗಿ ಕದಡುತ್ತಾ ಬಂದಿದ್ದೀರಿ. ಒಂದು ವೇಳೆ ನಿಮ್ಮ ಈ ರೀತಿಯ ವರ್ತನೆಯು ಹೀಗೆಯೇ ಮುಂದುವರೆದಲ್ಲಿ ನಿಮ್ಮ ಕೆಳಗೆ ಕೆಲಸ ಮಾಡುವ ನಾನು ಕೆಲಸ ಮುಂದುವರೆಸಿದಲ್ಲಿ, ನನಗೆ ಮಾನಸಿಕ ಖಿನ್ನತೆಗೆ ಒಳಗಾಗುವ ಸಂಭವ ಇದೆ. ಹಾಗಾಗಿ ಕೆಲ ಸಮಯದ ಮಟ್ಟಿಗಾದರೂ ನಿಮ್ಮ ಕಿರುಕುಳದಿಂದ ದೂರವಾಗಿ ಮನಸ್ಸಿಗೆ ಶಾಂತಿ ಪಡೆಯಲು ನನಗೆ ಯೋಗ, ಧ್ಯಾನ, ಪ್ರಾರ್ಥನೆಯಂತಹ ನಮ್ಮ ಸಂಸ್ಕೃತಿಯ ಸಂಸ್ಕಾರಗಳನ್ನು ಬೆಳೆಸಿಕೊಳ್ಳುವ ಅವಶ್ಯಕತೆ ಇದೆ. ಹಾಗಾಗಿ 30 ದಿನಗಳ ರಜೆ ಕೊಡಿ ” ಎಂದಿದ್ದಾರೆ ಆ ಅಧಿಕಾರಿ.
” ಒತ್ತಡದ ಪರಿಸ್ಥಿತಿಯಲ್ಲಿಯೂ ನಾನು ಕರ್ತವ್ಯ ಮಾಡುವುದು ಅನಿವಾರ್ಯವಾಗಿದ್ದಲ್ಲಿ ನನ್ನ ಒತ್ತಡ ನಿಭಾಯಿಸುವಿಕೆಯು ಮಿತಿಮೀರಿಹೋದಲ್ಲಿ, ಮುಂದೆ ಅದರಿಂದ ಯಾರಿಗೆ ಆಗಲಿ – ಸಾರ್ವಜನಿಕರಿಗಾಗಲಿ ಅಥವಾ ನಮ್ಮ ಸಿಬ್ಬಂದಿಗಾಗಲಿ ಅಥವಾ ನಿಮ್ಮೊಂದಿಗಾಗಲಿ – ಏನೇ ಅಚಾತುರ್ಯಗಳು ನಡೆದಲ್ಲಿ ಅದಕ್ಕೆ ತಮ್ಮದೇ ಜವಾಬ್ದಾರಿ ಎಂದು ಭಾವಿಸಿಕೊಳ್ಳಿ. ನಂತರದ ಎಲ್ಲ ಜವಬ್ದಾರಿಗಳನ್ನು ತಾವು ಹೊತ್ತುಕೊಂಡಿದ್ದಲ್ಲಿ ನಾನು ನಿಮ್ಮ ಒತ್ತಡದ ನಡುವೆಯೂ ಕೆಲಸ ಮಾಡಬಲ್ಲೆ. ಮುಂದೆ ಉಂಟಾಗುವ ಯಾವುದೇ ಅವಘಡಗಳಿಗೆ ನಾನು ಹೊಣೆಗಾರನಾಗಲಾರೆ. ಆದ್ದರಿಂದ ತಮ್ಮ ನಿರ್ಧಾರವನ್ನು ಬರುವ ಜೂನ್ 22 ರ ಒಳಗೆ ನನಗೆ ತಿಳಿಸಿದಲ್ಲಿ ಆ ಪ್ರಕಾರ ಕರ್ತವ್ಯಕ್ಕೆ ಬರುತ್ತೇನೆ. ಇಲ್ಲವಾದಲ್ಲಿ ನಾನು ಜೂ. 19 ರಿಂದ ರಜೆಯ ಮೇಲೆ ತೆರಳುತ್ತಿದ್ದು, ನನ್ನ ಉಲ್ಲೇಖಿತ-1 ರ ಮನವಿಯಂತೆ ನನಗೆ 30 ದಿನಗಳ ರಜೆ ಮಂಜೂರು ಮಾಡುತ್ತೀರಿ ಎಂಬ ನಂಬಿಕೆಯ ಮೇಲೆ ಹೊರಡುತ್ತಿದ್ದೇನೆ.” ಎಂದು ವಿಶಿಷ್ಟ ಸುದೀರ್ಘ ಲೀವ್ ಲೆಟರ್ ಬರೆದಿದ್ದಾರೆ ಆ ಅಧಿಕಾರಿ. ಅಲ್ಲದೆ, ಒತ್ತಡ ನಿಯಂತ್ರಿಸುವ ಶಾಂತಿ ಮಂತ್ರ ನಾನು ಕಲಿತರೂ ಮುಂದೆ ಮತ್ತೊಮ್ಮೆಕಷ್ಟವಾದಲ್ಲಿ ಮುಂದಿನ ಕಾರ್ಯಕ್ರಮ ‘ ಕಾಲಾಯ ತಸ್ಮೈ ನಮಃ ‘ಎಂದು ಪತ್ರವನ್ನು ಬರೆದಿದ್ದಾರೆ. ಇದೀಗ ಈ ಪತ್ರ ಭಾರೀ ವೈರಲ್ ಆಗಿದ್ದು, ಪೊಲೀಸ್ ಇಲಾಖೆಯಲ್ಲಿ ಈ ಲೀವ್ ಲೆಟರ್ ಸಂಚನಕ್ಕೆ ಮತ್ತು ಭಾರೀ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ಈ ರೀತಿ ನಿಮ್ಮ ಸಿಲ್ಕ್ ಸೀರೆ ಒಗೆದರೆ ವರ್ಷಾನುಗಟ್ಟಲೆ ಸೀರೆ ಹಾಳಾಗುವುದಿಲ್ಲ!