

CM Siddaramaiah: ಕಳೆದ ಕೆಲ ದಿನಗಳಿಂದ ಬೆಂಗಳೂರು (Bengaluru) ಸೇರಿದಂತೆ ರಾಜ್ಯಾದ್ಯಂತ ಭಾರೀ ಮಳೆಯಾಗಿದೆ. ಈ ಹಿನ್ನೆಲೆ ಬೆಂಗಳೂರಿನಲ್ಲಿ ಮಳೆಯಾದಾಗ ಅಂಡರ್ ಪಾಸ್ ನಲ್ಲಿ ಸಂಚಾರ ಬಂದ್ ಮಾಡಿ ಎಂದು BBMP ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಸೂಚನೆ ನೀಡಿದ್ದಾರೆ. ಜೊತೆಗೆ ಕೆಲವು ಮಾಹಿತಿ ನೀಡಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸುದ್ಧಿಗಾರರೊಂದಿಗೆ ಮಾತನಾಡಿದ ಸಿಎಂ, “ಮುಂಗಾರು ಪೂರ್ವ ಮಳೆಗೆ ಇದುವರೆಗೆ 52 ಮಂದಿ ಬಲಿಯಾಗಿದ್ದಾರೆ. ಮೃತಪಟ್ಟವರ ಕುಟುಂಬದವರಿಗೆ ತಲಾ 5 ಲಕ್ಷ ಪರಿಹಾರ ನೀಡಲಾಗಿದೆ ಎಂದರು. ಇನ್ನು ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೇ ನಾನು ಕೇವಲ ಸೂಚನೆ ಕೊಡೋದಿಲ್ಲ. ಎಚ್ಚರಿಕೆ ಕೊಡ್ತಾ ಇದ್ದೇನೆ. ಸೂಚನೆಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡದಿದ್ದರೆ ಕಠಿಣ ಕ್ರಮಕ್ಕೆ ಸಿದ್ದರಾಗಿ” ಎಂದು ಹೇಳಿದರು.
ಮುಖ್ಯಮಂತ್ರಿಗಳ ಸೂಚನೆ ಹೀಗಿದೆ: ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಸಾಕಷ್ಟು ಮನೆಗಳು ಉರುಳಿವೆ. ಹಲವರು ಗಾಳಿ, ಮಳೆ, ಸಿಡಿಲಿನ ಹಿನ್ನೆಲೆ ಸಾವನ್ನಪ್ಪಿದ್ದಾರೆ. ಇಂತಹ ಅನಾಹುತಗಳನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಇನ್ನೇನು ಬಿತ್ತನೆಗಳು ಆರಂಭವಾಗುತ್ತದೆ. ಕೃಷಿ ಅಧಿಕಾರಿಗಳು ಬಿತ್ತನೆ ಚಟುವಟಿಕೆಗೆ ಅಗತ್ಯವಿರುವ ಬೀಜ, ಗೊಬ್ಬರ, ಕೀಟನಾಶಕಗಳನ್ನು ಒದಗಿಸಬೇಕು ಎಂದು ಹೇಳಿದರು.
ಜೋರಾದ ಗಾಳಿ, ಮಳೆಗೆ ಮರಗಳು ಬಿದ್ದರೆ, ಅದರಲ್ಲೂ ರಸ್ತೆಗಳಲ್ಲಿ ಬಿದ್ದರೆ ವಾಹನ ಸಂಚಾರಕ್ಕೆ ತೊಂದರೆ ಆಗದಂತೆ ಕೂಡಲೇ ತೆರವು ಗೊಳಿಸಬೇಕು. ವಿದ್ಯುಚ್ಚಕ್ತಿ ಕಂಬಗಳು ಬಿದ್ದು ಹೋದರೆ, ಟ್ರಾನ್ಹಾರ್ಮರ್, ಸೇತುವೆಗಳು ಹಾಳಾಗಿದ್ದರೆ, ಶಾಲಾ ಕೊಠಡಿಗಳು ಶಿಥಿಲ ಆಗಿದ್ದರೆ ಈಗಲೇ ಅನಾಹುತ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಮುನ್ನೆಚ್ಚರಿಕೆ ತೆಗೆದುಕೊಂಡರೆ ಅನಾಹುತಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಕಚೇರಿಯಲ್ಲೇ ಕುಳಿತು ಕೆಲಸ ಮಾಡಿದರೆ ಏನೂ ಪ್ರಯೋಜನವಿಲ್ಲ. ಫೀಲ್ಡ್ ಗೆ ಹೋಗಬೇಕು. ಅನಾಹುತವಾದ ಸ್ಥಳಗಳಿಗೆ ಭೇಟಿ ನೀಡಿದರೆ ಪರಿಸ್ಥಿತಿಯ ಅರಿವಾಗುತ್ತದೆ.
ಕಳೆದ ಕೆಲವು ವರ್ಷಗಳಿಂದ ಪ್ರವಾಹ ಬರುತ್ತಲಿದೆ. ಹವಾಮಾನ ಇಲಾಖೆ ಸಂಪರ್ಕ ಮುನ್ಸೂಚನೆ ಅರಿತು ಕೆಲಸ ಮಾಡಿ. ಪ್ರವಾಹ ನಿಯಂತ್ರಣಕ್ಕೆ ಅಗತ್ಯ ಸಲಕರಣೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳಿ, ಪ್ರವಾಹ ಬರುವ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ
ತೆಗೆದುಕೊಳ್ಳಿ. ಅನುದಾನ ಅಗತ್ಯವಿದ್ದಲ್ಲಿ ಮನವಿ ಸಲ್ಲಿಸಿ ಬಿಡುಗಡೆ ಮಾಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕರ್ತವ್ಯ ಲೋಪ ಆಗಬಾರದು. ನೆಪ ಹೇಳಿಕೊಂಡು ಪರಿಹಾರ ಕ್ರಮ ವಿಳಂಬ ಮಾಡುವಂತಿಲ್ಲ. ಬೇಜವಾಬ್ದಾರಿತನದಿಂದ ಅನಾಹುತಗಳಾದರೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು.
ಜಿಲ್ಲಾಧಿಕಾರಿಗಳು, ಸಿಇಓ ಗಳದ್ದು ಜವಾಬ್ದಾರಿಯುತ ಸ್ಥಾನ. ಜೊತೆಗೆ ಪೊಲೀಸ್ ವರಿಷ್ಠಾಧಿಕಾರಿಗಳ ಹೊಣೆಯೂ ಪ್ರಮುಖವಾದದ್ದು. ಇನ್ನು ಹೆಚ್ಚಿನ ಜಿಲ್ಲಾಧಿಕಾರಿಗಳು ತಾಲ್ಲೂಕುಗಳಿಗೆ ಭೇಟಿ ನೀಡಿರುವುದಿಲ್ಲ. ಇನ್ನು ಮುಂದೆ ಜಿಲ್ಲಾಧಿಕಾರಿಗಳು ಕಡ್ಡಾಯವಾಗಿ ಕ್ಷೇತ್ರ ಭೇಟಿ ಮಾಡಬೇಕು. ಕರ್ನಾಟಕದ ಜನತೆ ಬದಲಾವಣೆ ಬಯಸಿದ್ದಾರೆ. ಆಲಸ್ಯ ಬಿಟ್ಟು ಕೆಲಸ ಮಾಡಿ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವ ಸರ್ಕಾರ ಬಂದಿದೆ ಎಂಬ ಸಂದೇಶ ಹೋಗಬೇಕು. ಎಂದು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆಯ ಜೊತೆಗೆ ಖಡಕ್ ಎಚ್ಚರಿಕೆ ನೀಡಿದರು.
ಇದನ್ನೂ ಓದಿ:List of Anniversaries for 2023-24: ಸರ್ಕಾರದಿಂದ 2023-24ನೇ ಸಾಲಿನ ಜಯಂತಿಗಳ ಪಟ್ಟಿ ಬಿಡುಗಡೆ!













