KCET Exam 2023: ಸಿಇಟಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ‘ಕೆಇಎ’ಯಿಂದ ಮಹತ್ವದ ಸುತ್ತೋಲೆ!
Karnataka common entrance test KCET EXAM 2023 updates
							
KCET Exam 2023: ಯುಜಿಸಿಇಟಿ-2023ರ ಪ್ರವೇಶ ಪರಿಕ್ಷೆಗೆ ಸಲ್ಲಿಸಿದ್ದ ಅರ್ಜಿಯಲ್ಲಿ, ನಮೂದಿಸಿರುವ ಮಾಹಿತಿ ಕ್ಲೇಮ್‌ಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಅಭ್ಯರ್ಥಿಗಳಿಗೆ ಅಂತಿಮ ಅವಕಾಶವನ್ನು ನೀಡಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಭ್ಯರ್ಥಿಗಳಿಗೆ ಮಹತ್ವ ಸುತ್ತೋಲೆ ಹೊರಡಿಸಿದೆ.

ಯುಜಿಸಿಇಟಿ-2023 ಪ್ರವೇಶ ಪರಿಕ್ಷೆಗೆ ನೋಂದಾಯಿಸಿಕೊಂಡಿದ್ದ ಅಭ್ಯರ್ಥಿಗಳು, ಯುಜಿಸಿಇಟಿ 2023ರ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ದಾಖಲಿಸಿರುವ ಮಾಹಿತಿ / ಕ್ಲೇಮ್‌ಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಅಂತಿಮ ಅವಕಾಶವನ್ನು ನೀಡಿದ್ದು ದಿನಾಂಕ 21-05-2023 ರಿಂದ 24-05-2023 ರ ವರೆಗೆ ಅಂತಿಮ ಅವಕಾಶ ನೀಡಲಾಗುವುದು ಎಂದು ತಿಳಿಸಿದೆ.
ಸಿಇಟಿ-2023 (KCET Exam 2023) ರ ಫಲಿತಾಂಶ ಘೋಷಣೆಯ ನಂತರ ಯಾವುದೇ ಸಂದರ್ಭದಲ್ಲಿಯೂ ಅರ್ಜಿಯಲ್ಲಿನ ಮಾಹಿತಿಯನ್ನು ತಿದ್ದುಪಡಿ ಮಾಡಿಕೊಳ್ಳಲು ಅಥವಾ ಮೀಸಲಾತಿಯನ್ನು ಕ್ಲೇಮ್ ಮಾಡಲು ಅವಕಾಶವಿರುವುದಿಲ್ಲ ಹಾಗೂ ಅರ್ಜಿಯಲ್ಲಿನ ಮಾಹಿತಿಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ನೀಡುವಂತೆ ಸಲ್ಲಿಸುವ ಮನವಿಗಳನ್ನು ಪುರಸ್ಕರಿಸುವುದಿಲ್ಲ ಎಂದು ಕೆಇಎ ಸೂಚಿಸಿದೆ.
ಆದ್ದರಿಂದ ಅಭ್ಯರ್ಥಿಗಳಿಗೆ ಮತ್ತು ಪೋಷಕರಿಗೆ ಅರ್ಜಿಗಳಲ್ಲಿ ತಾವು ಮಾಡಿರುವ ಕ್ಲೇಮ್‌ಗಳನ್ನು / ಮಾಹಿತಿಯನ್ನು ತಪ್ಪದೇ ಕಡ್ಡಾಯವಾಗಿ ಪರಿಶೀಲಿಸಿಕೊಳ್ಳಲು ಸೂಚಿಸಿದೆ.
ಮುಖ್ಯವಾಗಿ ಪ್ರವರ್ಗ ಮೀಸಲಾತಿ, ವಾರ್ಷಿಕ ಆದಾಯ, ಹೈದರಾಬಾದ್ ಕರ್ನಾಟಕ ಮೀಸಲಾತಿ 371(j), ಕನ್ನಡ ಮಾಧ್ಯಮ, ಗ್ರಾಮೀಣ ಪ್ರದೇಶದ ವ್ಯಾಸಂಗ, ವಿಶೇಷ ಕ್ಯಾಟಗರಿ, ಕೃಷಿಕರ ಕೋಟ ಇತ್ಯಾದಿಗಳ ಬಗ್ಗೆ ನಮೂದಿಸಿರುವ ಕ್ಲೇಮ್‌ಗಳನ್ನು ಪರಿಶೀಲಿಸುವಂತೆ ತಿಳಿಸಿದೆ.
ವೆಬ್ ಸರ್ವಿಸ್ ಮೂಲಕ ಆರ್‌ಡಿ ಸಂಖ್ಯೆಯನ್ನು ಆಧರಿಸಿ ಜಾತಿ/ಆದಾಯ/ಹೈದರಾಬಾದ್ ಕರ್ನಾಟಕ ಮುಂತಾದ ಕ್ಲೇಮ್‌ಗಳನ್ನು ನಿರ್ಧರಿಸುವುದರಿಂದ, ಅಭ್ಯರ್ಥಿಗಳು ತಾವು ಪಡೆದುಕೊಂಡಿರುವ ಜಾತಿ ಪ್ರಮಾಣ ಪತ್ರ / ಆದಾಯದ ಪ್ರಮಾಣ ಪತ್ರ / ಹೈದರಾಬಾದ್ ಕರ್ನಾಟಕ ಪ್ರಮಾಣ ಪತ್ರದಲ್ಲಿ ನಮೂದಿತವಾಗಿರುವ ಆರ್‌ಡಿ ಸಂಖ್ಯೆಯನ್ನು ಸರಿಯಾಗಿ ದಾಖಲಿಸಿರುವ ಬಗ್ಗೆ ಖಾತ್ರಿಪಡಿಸಿಕೊಂಡು ಸರಿಯಾದ ಆರ್‌ಡಿ ಸಂಖ್ಯೆಯನ್ನು ನಮೂದಿಸುವಂತೆ ಸೂಚಿಸಿದೆ.
ಅದೇ ರೀತಿ ಕೃಷಿಕರ ಕೋಟದ ಮೀಸಲಾತಿ ಪಡೆಯಲೂ ಸಹ ಅಭ್ಯರ್ಥಿಗಳು ಕೃಷಿಕರ ಕೋಟದ ಮೀಸಲಾತಿ ಅಂಕಣದಲ್ಲಿ YES ಎಂದು ನಮೂದಿಸುವುದು ಕಡ್ಡಾಯವಾಗಿರುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಹಾಗೆಯೇ ಎನ್‌ಸಿಸಿ, ಕ್ರೀಡೆ, ಸಿಆರ್‌ಪಿಎಫ್, ಸಿಎಪಿಎಫ್, ಸೈನಿಕರು, ಮಾಜಿ ಸೈನಿಕರು, ಸ್ಕೌಟ್ಸ್ ಮತ್ತು ಗೈಡ್ಸ್, ವಿಶೇಷಚೇತನರು, ಮಾಜಿ ಸಿಎಪಿಎಫ್ ಮುಂತಾದ ವಿಶೇಷ ಪ್ರವರ್ಗಗಳಲ್ಲಿ ಅರ್ಹತೆ ಪಡೆಯಲೂ ಸಹ ತಮ್ಮ ವಿಶೇಷ ಪ್ರವರ್ಗದ ಮಾಹಿತಿಯನ್ನು ಅರ್ಜಿಯಲ್ಲಿ ನಮೂದಿಸಿರುವುದು ಅತ್ಯವಶ್ಯಕವಾಗಿರುತ್ತದೆ.
ಇನ್ನು ಒಂದರಿಂದ ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡಿ, ಅರ್ಜಿಯಲ್ಲಿ NO ಎಂದು ನಮೂದಿಸಿದ್ದಲ್ಲಿ ತಮಗೆ ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಪ್ರದೇಶದ ಮೀಸಲಾತಿ ಪಡೆಯಲು ಅರ್ಹತೆ ದೊರೆಯುವುದಿಲ್ಲ.
ಇದನ್ನೂ ಓದಿ: Liquor in Office: ಮದ್ಯಪ್ರಿಯರಿಗೆ ಗುಡ್ ನ್ಯೂಸ್: ಬಂತು ನೋಡಿ ಹೊಸ ರೂಲ್ಸ್, ಇನ್ಮುಂದೆ ಆಫೀಸ್ ನಲ್ಲೂ ‘ಎಣ್ಣೆ’ ಹಾಕಬಹುದು!
			