

Challenging Star Darshan: ಬೆಂಗಳೂರು: ಅತ್ತ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್(Kiccha Sudeep) ಬಿಜೆಪಿ ನಾಯಕರ ನಿರ್ದೇಶನದ ಮೇರೆಗೆ ಹಲವು ಕ್ಷೇತ್ರಗಳಲ್ಲಿ ಭರ್ಜರಿ ರೋಡ್ ಶೋ, ಪ್ರಚಾರ ನಡೆಸುತ್ತಿದ್ದರೆ, ಇತ್ತ ಡಿ ಬಾಸ್ ಚುನಾವಣಾ ಅಂಕಣಕ್ಕೆ ಧುಮುಕಲು ರೆಡಿಯಾಗಿದ್ದಾರೆ. ಕಿಚ್ಚ ಸುದೀಪ್ ಹೋದ ಕಡೆಗಳಲ್ಲೆಲ್ಲ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿ ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಈ ಮಧ್ಯೆ ಇದೀಗ ಮತ್ತೊಬ್ಬ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್( Challenging Star Darshan) ತೂಗುದೀಪ ಕದನ ಕಣಕ್ಕೆ ಎಂಟ್ರಿಯಾಗಿದೆ. ಚಾಲೆಂಜಿಂಗ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ದರ್ಶನ್ ಇಂದು ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದಾರೆ. ಅವರ ಕಾರ್ಯಕ್ರಮದ ವಿವರಗಳನ್ನು ಕೂಡಾ ರಾಜ್ಯ ಬಿಜೆಪಿ ಬಿಡುಗಡೆ ಮಾಡಿದೆ. ದರ್ಶನ್ ಚಾಲೆಂಜ್ ಗೆ ವಿರೋಧಿ ಪಾಳಯದಲ್ಲಿ ನಡುಕ ಉಂಟಾಗಿದೆ.
ಇವತ್ತು ಬಿಜೆಪಿ ರಾಜ್ಯ ಘಟಕ ನಟ ದರ್ಶನ್ ಅವರ ಇವತ್ತಿನ ಪ್ರಚಾರದ ಶೆಡ್ಯೂಲ್ ಬಿಡುಗಡೆ ಮಾಡಿತ್ತು. ಅದರ ಪ್ರಕಾರ ಬೆಳಿಗ್ಗೆ ಕೋಲಾರದ ಕೆಜಿಎಫ್ ಕ್ಷೇತ್ರ, ಬಂಗಾರಪೇಟೆ, ಕೋಲಾರ ಕ್ಷೇತ್ರ ಮತ್ತು ಕೋಲಾರ ಜಿಲ್ಲೆಯ ಮಾಲೂರು ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಕೆಲವು ಕಡೆಗಳಲ್ಲಿ ಪ್ರಚಾರ ರೋಡ್ ಶೋ ಇನ್ನೂ ನಡೆಯುತ್ತಿದೆ.
ಅತ್ತ ಶಿವರಾಜ್ ಕುಮಾರ್ ಪತ್ನಿ ಕಾಂಗ್ರೆಸ್ ಸೇರಿದ್ದು, ನಟ ಶಿವರಾಜ್ ಕುಮಾರ್ ಕಾಂಗ್ರೆಸ್ ಪರ ಪ್ರಚಾರ ಕೈಗೊಳ್ಳಲಿದ್ದಾರೆ. ಈಗಾಗಲೇ ವಿಜಯ ರಾಘವೇಂದ್ರ ತಮ್ಮ ಬಾಮೈದ ರಕ್ಷಿತ್ ಶಿವರಾಂನ ಪರ ಫೀಲ್ಡ್ ಗೆ ಇಳಿದು ಆಗಿದೆ. ರಾಘು ಅವರು ಬೆಳ್ತಂಗಡಿಯ ಕಾಂಗ್ರೆಸ್ ಯುವ ನೇತಾರ ರಕ್ಷಿತ್ ಶಿವರಾಂ ಅವರ ಪರವಾಗಿ ನಾಮಪತ್ರ ಸಲ್ಲಿಕೆಯ ದಿನ ಹಾಜರಿದ್ದು ಸಂಚಲನ ಮೂಡಿಸಿದ್ದರು. ನಟ ಜಗ್ಗೇಶ್, ನಟಿ ಮಾಳವಿಕಾ, ತಾರಾ, ಉಮಾಶ್ರೀ, ಶೃತಿ ಮುಂತಾದವರು ಈಗಾಗಲೇ ಆಯಾ ಪಕ್ಷಗಳಲ್ಲಿ ಗುರುತಿಸಿಕೊಂಡು ಚುನಾವಣಾ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಇನ್ನುಳಿದ 13 ದಿನಗಳಲ್ಲಿ ಇನ್ಯಾರು ಸ್ಟಾರ್ ನಟರು ಚುನಾವಣಾ ಕಣಕ್ಕೆ ಧುಮುಕುತ್ತಾರೋ ಕಾದು ನೋಡಬೇಕಿದೆ.













