Puttur: ಗ್ರಾಮ ಪಂಚಾಯತ್ ಅಧ್ಯಕ್ಷೆ ಆದ ಮೇಲೆ ಓದಲು ಬಯಕೆ, ಇದೀಗ PUC ಪಾಸ್ !

Panchayath President passed PUC :ಪುತ್ತೂರು: ‘ ರಾಜಕೀಯ ಅನ್ನೋದು ಯಾವತ್ತೂ ಫುಲ್ ಟೈಮ್. ಅಲ್ಲಿ ಬಿಡುವೆಂಬುದೇ ಇರೊದಿಲ್ಲ.’ ಹಾಗಂತ ಯಾರು ಹೇಳಿದ್ದು ? ಇಲ್ನೋಡಿ, ತನ್ನ ಇಡೀ ದಿನದ ಬ್ಯುಸಿ ಕೆಲಸದ ಮಧ್ಯೆ ಮತ್ತು ಇಬ್ಬರು ಮಕ್ಕಳ ಜೊತೆ ಕುಟುಂಬವನ್ನು ನಿಭಾಯಿಸುವ ಜೊತೆಗೆ ಗ್ರಾಮ ಪಂಚಾಯತ್ ಅಧ್ಯಕ್ಷರೊಬ್ಬರು ಪಾರ್ಟ್ ಟೈಂ ನಲ್ಲಿ ಪಿಯುಸಿ ಬರೆದು ಉತ್ತೀರ್ಣರಾಗಿದ್ದಾರೆ (Panchayath President passed PUC).

ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ಭಟ್ ಖಾಸಗಿಯಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಇದೀಗ ಉತ್ತೀರ್ಣರಾಗಿದ್ದಾರೆ.
ಈಗ 38 ವರ್ಷ ಪ್ರಾಯದ ಈಕೆ 23 ವರ್ಷಗಳ ಹಿಂದೆ ಎಂಟನೇ ತರಗತಿ ಉತ್ತೀರ್ಣರಾದ ಬಳಿಕ ತಂದೆಯ ವಿಯೋಗ ಹಾಗೂ ಆರ್ಥಿಕ ಸಮಸ್ಯೆಯಿಂದಾಗಿ ಭಾರತಿಯವರು ತನ್ನ ವಿದ್ಯಾಭ್ಯಾಸವನ್ನು ಅಲ್ಲಿಗೇ ಮೊಟಕುಗೊಳಿಸಿದ್ದರು.

ನಂತರ ಕಾಸರಗೋಡಿನ ಬದಿಯಡ್ಕ ಚಾಂಗುಳಿ ವೆಂಕಟ್ರಮಣ ಭಟ್ ಅವರನ್ನು ವಿವಾಹವಾಗಿ ಪಾಣಾಜೆಯಲ್ಲಿ ಅವರು ವಾಸವಾಗಿದ್ದರು. ಈಗ ಎರಡು ವರ್ಷಗಳ ಹಿಂದೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅವರು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಜಯಿಯಾಗಿದ್ದರು. ನಂತರ ಸಾಮಾಜಿಕ ಕಾರ್ಯಗಳಲ್ಲಿ ಬ್ಯುಸಿ ಆಗಿರುತ್ತಿದ್ದರು.

ಹಾಗೆ, 8 ನೆಯ ಕ್ಲಾಸ್ ಓದಿದ ಮೇಲೆ ಮತ್ತೆ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಲು ಆಕೆ ಇಚ್ಚಿಸಿದ್ದಳು. ಅದರಂತೆ 2021-22ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಪುತ್ತೂರಿನ ನೆಲ್ಲಿಕಟ್ಟೆಯ ಕೋಟ ಶಿವರಾಮ ಕಾರಂತ ಪ್ರೌಢಶಾಲೆಯಲ್ಲಿ ಖಾಸಗಿಯಾಗಿ ಬರೆದು ಶೇ. 54 ಅಂಕ ಪಡೆದಿದ್ದರು. ಈಗ ಪುತ್ತೂರು ತಾಲೂಕಿನ ಕೊಂಬೆಟ್ಟು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಖಾಸಗಿಯಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಮುಂದೆಯೂ ಓದುವ ಇರಾದೆ ಹೊಂದಿರುವ ಇವರು ಪದವಿ ಶಿಕ್ಷಣ ಪಡೆಯುವ ಕನಸು ಹೊಂದಿದ್ದಾರೆ. ಸಾಧನೆಗೆ ಸಮಯದ ಕೊರತೆ ಅಡ್ಡಿಯಲ್ಲ ಅನ್ನೋದನ್ನು ಇವರು ತೋರಿಸಿಕೊಟ್ಟಿದ್ದಾರೆ.

ಇದನ್ನೂ ಓದಿ:Plants: ಯಾವುದೇ ಕಾರಣಕ್ಕೂ ಈ ಗಿಡಗಳನ್ನು ಮನೆಯ ಹತ್ತಿರ ನೆಡಬೇಡಿ, ಪಾಪಗಳು ಸುತ್ತಿಕೊಳ್ಳುತ್ತೆ!

Leave A Reply

Your email address will not be published.