Summer 2023 : ಬೇಸಿಗೆಯಲ್ಲಿ ಮಕ್ಕಳಿಗೆ ಕಾಡುವ ಆರೋಗ್ಯ ಸಮಸ್ಯೆ, ಪೋಷಕರೇ ಇಲ್ಲಿದೆ ಕೆಲವು ಮಾಹಿತಿ!
Health problem in summer : ಈಗಾಗಲೇ ಮಕ್ಕಳು ಬೇಸಿಗೆ ( Health problem Summer) ರಜೆಯ ಖುಷಿಯಲ್ಲಿ ಇದ್ದು, ಆಟವಾಡುವುದನ್ನು ಹೊರತು ಪಡಿಸಿ ಬೇರೆ ಯೋಚನೆ ಮಕ್ಕಳ ತಲೆಯಲ್ಲಿ ಇರುವುದಿಲ್ಲ. ತಮ್ಮ ಬೇಸಿಗೆ ರಜೆಯನ್ನು ಆನಂದಿಸಲು ತಮ್ಮ ಹೆಚ್ಚಿನ ಸಮಯವನ್ನು ಹೊರಗೆ ಕಳೆಯುತ್ತಾರೆ. ಬಿಸಿಲನ್ನೂ ಲೆಕ್ಕಿಸದೆ ಆಟವಾಡುತ್ತಾರೆ. ಈ ಬಿಸಿಲು ಮತ್ತು ಬಿಸಿ ವಾತಾವರಣವು ಮಕ್ಕಳ ಆರೋಗ್ಯವನ್ನು ಹಾಳುಮಾಡುತ್ತದೆ. ಮಾತ್ರವಲ್ಲದೆ ಅವರಲ್ಲಿ ಚರ್ಮದ ಸಮಸ್ಯೆಗಳನ್ನೂ ಉಂಟುಮಾಡುತ್ತದೆ. ಆಟದ ಭರದಲ್ಲಿ ಮಕ್ಕಳು ತಮ್ಮ ದಿನ ನಿತ್ಯ ಕಾರ್ಯ ಚಟುವಟಿಕೆ ಮೇಲೆ ಗಮನ ಹರಿಸುವುದಿಲ್ಲ. ಜೊತೆಗೆ ಅತಿಯಾದ ಬಿಸಿಲಿನ ಪ್ರಭಾವದಿಂದ ಮಕ್ಕಳಲ್ಲಿ ನಿರ್ಜಲೀಕರಣ, ತಾಪಾಘಾತ, ಹಾಗೂ ಶಾಖದ ದದ್ದುಗಳು ಉಂಟಾಗುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಪೋಷಕರು ಮಕ್ಕಳ ಆಹಾರ ಮತ್ತು ಆರೋಗ್ಯದ ಮೇಲೆ ಗಮನ ಹರಿಸುವುದು ಮುಖ್ಯವಾಗುತ್ತದೆ.
ಮುಖ್ಯವಾಗಿ ಖಗರ್‌ಪುರದ ಮದರ್‌ಹುಡ್ ಆಸ್ಪತ್ರೆಯ ಶಿಶುವೈದ್ಯ ಡಾ. ಸುರೇಶ್ ಬಿಜಾರ್‌ದಾ. ಪ್ರಕಾರ ‘ಚಳಿಗಾಲದಂತೆ ಬೇಸಿಗೆಕಾಲದಲ್ಲೂ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಮಕ್ಕಳನ್ನು ಕಾಡಬಹುದು. ಆ ಕಾರಣದಿಂದ ಪೋಷಕರು ಹೆಚ್ಚು ಜಾಗರೂಕರಾಗಿರಬೇಕು ಮತ್ತು ಮಗುವಿನ ಆರೋಗ್ಯದ ಮೇಲೆ ಗಮನ ಹರಿಸಬೇಕು’ ಎಂದು ತಿಳಿಸಿದ್ದಾರೆ.
ಇವರು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಆರೋಗ್ಯ ಸಮಸ್ಯೆಗಳು ಹಾಗೂ ಅವುಗಳ ನಿರ್ವಹಣೆಯ ಬಗ್ಗೆ ತಿಳಿಸಿದ್ದು, ಅವುಗಳು ಇಂತಿವೆ :
ಬೇಸಿಗೆ ಜ್ವರ:
5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಾಮಾನ್ಯವಾಗಿ ವರ್ಷವಿಡೀ ಈ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಾಗಿ ಮಕ್ಕಳನ್ನು ಸದಾ ಬಿಸಿಲಿಗೆ ಬಿಡಬಾರದು. ಸಂಜೆ ಅಥವಾ ಬೆಳಗ್ಗೆ ಹವಾಮಾನವು ತಂಪಾಗಿರುವಾಗ ಆಟವಾಡಲು ಅವರಿಗೆ ಅನುಮತಿಸಬೇಕು.
ಕೆಮ್ಮು :
ಬಿಸಿಲಿನ ತಾಪ ನೀಗಿಸಿಕೊಳ್ಳಲು ಮಕ್ಕಳು ತಂಪುಪಾನೀಯಗಳನ್ನು ಅಥವಾ ಐಸ್‌ಕ್ರೀಂ ನ್ನು ಹೆಚ್ಚು ಸೇವಿಸಲು ಇಷ್ಟಪಡುತ್ತಾರೆ. ಇದರಿಂದ ಅವರಲ್ಲಿ ಗಂಟಲು ಕಟ್ಟುವ ಸಮಸ್ಯೆ ಉಂಟಾಗಬಹುದು. ಆ ಕಾರಣಕ್ಕೆ ಇಂತಹ ಪದಾರ್ಥಗಳ ಸೇವನೆಯನ್ನು ಮಿತಗೊಳಿಸುವುದು ಉತ್ತಮ.
ನೀರಿನಿಂದ ಹರಡುವ ರೋಗಗಳು :
ಮಕ್ಕಳಿಗೆ ಸರಿಯಾಗಿ ಕುದಿಸಿ ಆರಿಸಿದ ನೀರನ್ನೇ ಕುಡಿಯಲು ಕೊಡಿ. ಹೊರಗಡೆ ಹೋಗುವಾಗ ಮನೆಯಿಂದ ನೀರಿನ ಬಾಟಲಿ ತೆಗೆದುಕೊಂಡು ಹೋಗುವುದನ್ನು ಮರೆಯದಿರಿ. ಯಾಕೆಂದರೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಸಾಮಾನ್ಯ. ಕಲುಷಿತ ನೀರಿನ ಕಾರಣದಿಂದ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ತಲೆದೋರುವ ಸಾಧ್ಯತೆ ಹೆಚ್ಚಿದೆ. ಕಲುಷಿತ ನೀರಿನ ಕಾರಣದಿಂದ ಟೈಫಾಯಿಡ್, ಅತಿಸಾರ, ಕಾಲರಾ, ಕಾಮಾಲೆ ಹಾಗೂ ಭೇದಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಕೀಟ ಕಡಿತ:
ಬೇಸಿಗೆಯಲ್ಲಿ ಸೊಳ್ಳೆಗಳ ಕಾಟ ಹೆಚ್ಚು. ಇದಲ್ಲದೆ ಮಕ್ಕಳು ಒಮ್ಮೊಮ್ಮೆ ಕೀಟಗಳ ಕಡಿತಕ್ಕೂ ಒಳಗಾಗುತ್ತಾರೆ. ಕೀಟ ಕಚ್ಚಿದ ಜಾಗದಲ್ಲಿ ತುರಿಕೆ ಮತ್ತು ಊತವೂ ಕಾಣಿಸುತ್ತದೆ. ಹಾಗಾಗಿ ಸಾಧ್ಯವಾದರೆ, ಮೈ ಪೂರ್ತಿ ಮುಚ್ಚುವ ಬಟ್ಟೆಯ ಜೊತೆಗೆ ಮಾರುಕಟ್ಟೆಯಲ್ಲಿ ಸಿಗುವ ಬಾಡಿ ಲೋಷನ್ ಲೇಪನ ಮಾಡುವುದು ಇನ್ನೂ ಒಳ್ಳೆಯದು.
ಕಾಂಜಂಕ್ಟಿವಿಟಿಸ್ :
ಕಣ್ಣಿನ ಕಾಂಜಂಕ್ಟಿವಾದಲ್ಲಿ ಉರಿಯೂತ ಕಾಣಿಸಿಕೊಳ್ಳುವುದಕ್ಕೆ ಕಾಂಜಂಕ್ಟಿವಿಟಿಸ್ ಎಂದು ಕರೆಯುತ್ತಾರೆ. ಇದರಿಂದ ಕಣ್ಣು ಕೆಂಪಾಗುವುದು, ತುರಿಕೆ ಹಾಗೂ ಕಣ್ಣಿನ ಉರಿಯೂತ ಉಂಟಾಗಬಹುದು. ಈ ಸಮಸ್ಯೆ ಮಕ್ಕಳಲ್ಲಿ ಕಾಣಿಸಿಕೊಂಡಾಗ ವೈದ್ಯರು ಸೂಚಿಸಿದ ಐ ಡ್ರಾಪ್ ಅನ್ನೇ ಬಳಸಬೇಕು. ಈ ಸಮಸ್ಯೆ ಇರುವವರು ಕಣ್ಣನ್ನು ಉಜ್ಜಬಾರದು, ತಮ್ಮ ವಸ್ತುಗಳನ್ನು ಇತರರೊಂದಿಗೆ ಹಂಚಿಕೊಳ್ಳಬಾರದು. ಯಾಕೆಂದರೆ ಇದು ಸಾಂಕ್ರಾಮಿಕ ರೋಗವಾಗಿದೆ.
ಮೂತ್ರನಾಳದ ಸೋಂಕು :
ಮಕ್ಕಳು ಸಾಕಷ್ಟು ನೀರು ಕುಡಿಯದೆ ಇದ್ದಲ್ಲಿ ಮೂತ್ರಪಿಂಡಗಳು, ಮೂತ್ರಕೋಶ ಮತ್ತು ಮೂತ್ರನಾಳ ಸೇರಿದಂತೆ ಮೂತ್ರಕೋಶ ವ್ಯವಸ್ಥೆಯ ಯಾವುದೇ ಭಾಗದಲ್ಲಿ ಸೋಂಕು ಉಂಟಾಗಬಹುದು.
ಫುಡ್ ಪಾಯಿಸನಿಂಗ್ :
ಬಿಸಿಲು ಹಾಗೂ ಆದ್ರ್ರ ವಾತಾವರಣವು ಆಹಾರವನ್ನು ಕಲುಷಿತಗೊಳಿಸುವ ಬ್ಯಾಕ್ಟಿರಿಯಾಗಳ ಬೆಳವಣಿಗೆಗೆ ಕಾರಣವಾಗುತ್ತವೆ. ಇದರಿಂದ ಮಗುವಿನಲ್ಲಿ ಹೊಟ್ಟೆನೋವು, ವಾಕರಿಕೆ, ಅತಿಸಾರ ಹಾಗೂ ವಾಂತಿಯಂತಹ ರೋಗಲಕ್ಷಣಗಳು ಕಾಣಿಸಬಹುದು. ಆ ಕಾರಣಕ್ಕೆ ಸಾಧ್ಯವಾದಷ್ಟು ರಸ್ತೆ ಬದಿಯ ಹಾಗೂ ಬೇಯಿಸದ ಆಹಾರ ಸೇವನೆಯನ್ನು ಕೊಡದಿರುವುದು ಉತ್ತಮ.
ಶಾಖಾಘಾತ :
ಮಕ್ಕಳು ಒಮ್ಮೆಲೆ ಅತಿಯಾದ ಬಿಸಿಲಿಗೆ ಒಡ್ಡಿಕೊಳ್ಳುವುದು ಕೂಡ ಶಾಖಾಘಾತಕ್ಕೆ ಕಾರಣವಾಗಬಹುದು. ಇದರಿಂದ ಜ್ವರದಂತಹ ಸಮಸ್ಯೆಗಳಿಂದ ಬಳಲಬಹುದು ಮಾತ್ರವಲ್ಲ ಕೆಲವೊಮ್ಮೆ ಇದು ಮಾರಣಾಂತಿಕವಾಗಬಹುದು. ಆ ಕಾರಣಕ್ಕೆ ಸುಡುವ ಬಿಸಿಲಿನಲ್ಲಿ ಅಂದರೆ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4ವರೆಗೆ ಹೊರಗಡೆ ಹೋಗುವುದಕ್ಕೆ ಕಡಿವಾಣ ಹಾಕಬೇಕು.
ದದ್ದುಗಳು :
ಬೇಸಿಗೆಯಲ್ಲಿ ಬೆವರುಸಾಲೆ, ದದ್ದು ತುರಿಕೆಯಂತಹ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಈ ಸಮಸ್ಯೆಗೆ ವೈದ್ಯರ ಸೂಚಿಸಿದ ಆಯಿಟ್‌ಮೆಂಟ್ ಬಳಕೆ ಅವಶ್ಯ.
ಒಟ್ಟಿನಲ್ಲಿ ಅತಿಯಾದ ಬಿಸಿಲು ಮಕ್ಕಳಲ್ಲಿ ನಿರ್ಜಲೀಕರಣ ಸಮಸ್ಯೆ ಉಂಟಾಗುವಂತೆ ಮಾಡಬಹುದು. ಇನ್ನು ಎಲೆಕ್ಟೋಲೈಟ್ ಸಮತೋಲನವನ್ನು ಕಾಪಾಡಿಕೊಳ್ಳಲು ಸಾಕಷ್ಟು ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಇದರೊಂದಿಗೆ ಎಳನೀರು, ಮಜ್ಜಿಗೆ, ನಿಂಬೆಹಣ್ಣಿನ ಪಾನಕವನ್ನು ನಿಮ್ಮ ಮಗುವಿಗೆ ನೀಡಿ. ಕರ್ಬೂಜ, ಕಲ್ಲಂಗಡಿ, ಸೌತೆಕಾಯಿಯನ್ನು ತಿನ್ನಲು ಕೊಡಿ. ಈ ಹಣ್ಣು ಅಥವಾ ಹಣ್ಣಿನ ಪಾನೀಯಗಳೊಂದಿಗೆ ಅತಿಯಾಗಿ ಸಕ್ಕರೆ ಸೇರಿಸುವುದಕ್ಕೆ ಕಡಿವಾಣ ಹಾಕಿ. ಜೊತೆಗೆ ಮನೆಯಲ್ಲೇ ತಯಾರಿಸಿದ ಆಹಾರ ನೀಡುವುದರಿಂದ ಮಕ್ಕಳ ಆರೋಗ್ಯವನ್ನು ಸುಧಾರಿಸಲು ಸಾಧ್ಯ.
ಇದನ್ನೂ ಓದಿ: Karnataka Rain: ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಏಪ್ರಿಲ್ 5 ರವರೆಗೆ ಮಳೆ !!