K S Eshwarappa : ಸಿದ್ದರಾಮಯ್ಯನವ್ರೇ ನಿಮಗೆ ಒಳ್ಳೆಯದಾಗಲಿ, ಆದ್ರೆ ರಾಜಕೀಯವಾಗಿ ಹಾಳಾಗಿ ಹೋಗಿ! ಸಿದ್ದು ವಿರುದ್ಧ ಗುಡುಗಿದ ಈಶ್ವರಪ್ಪ
K.S.Eshwarappa :ಸಿದ್ದರಾಮಯ್ಯನವರಿಗೆ (Siddaramaiah) ಒಳ್ಳೆಯದಾಗಲಿ, ಆದರೆ ರಾಜಕೀಯವಾಗಿ ಸಿದ್ದರಾಮಯ್ಯ ಹಾಳಾಗಿ ಹೋಗಲಿ ಎಂದು ಬಿಜೆಪಿ (BJP) ನಾಯಕ ಈಶ್ವರಪ್ಪ (K.S.Eshwarappa) ದೇವರಲ್ಲಿ ಬೇಡಿಕೊಂಡಿದ್ದಾರೆ.
ರಾಜಕೀಯ ರಂಗದಲ್ಲಿ ದೊಡ್ಡ ದೊಡ್ಡ ಘಟಾನು ಘಟಿಗಳು ಇರುವುದು ಎಲ್ಲರಿಗೂ ಗೊತ್ತಿದೆ. ಕೆಲವರು ದಶಕಗಳಿಂದ ರಾಜಕೀಯದಲ್ಲಿದ್ದು, ತುಂಬಾ ಅನುಭಾವಿಗಳಾಗಿದ್ದು, ತಮ್ಮದೇ ಒಂದು ಪ್ರಭಾವೀ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಅಂಥವರ ಕುರಿತು ಇತರ ರಾಜಕೀಯ ನಾಯಕರು ಟೀಕಿಸುವುದು, ವ್ಯಂಗ್ಯವಾಡುವುದು ಬಿಡಿ ಮಾತನಾಡಲೂ ಕೂಡ ಹೆದರುತ್ತಾರೆ. ಇಂಥಹ ವ್ಯಕ್ತಿತ್ವ ಹೊಂದಿದವರ ಸಾಲಿನಲ್ಲಿ ಕರ್ನಾಟಕದ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಒಬ್ಬರು. ಆದರೆ ಈ ಸಿದ್ಧುಗಾಗಲೀ ಅಥವಾ ಇನ್ನಾವುದೇ ನಾಯಕರಿಗಾಗಲೀ ಕೊಂಚವೂ ಹೆದರದೇ ಅತೀ ಧೈರ್ಯದಿಂದ ಮಾತನಾಡುತ್ತಾ ಅವರ ಕಾಲೆಳೆಯೋ ಪ್ರತ್ನ ಮಾಡೋ ಏಕೈಕ ಹಿರಿಯ ರಾಜಕಾರಣಿ ಎಂದರೆ ಅದು ಬಿಜೆಪಿ ಶಾಸಕ, ನಾಯಕ ಈಶ್ವರಪ್ಪನವರು.
ಹೌದು, ಈ ಸಿದ್ಧು ಮತ್ತು ಈಶ್ವರಪ್ಪ ಜೋಡಿ ರಾಜಕೀಯ ರಂಗದಲ್ಲಿ ಕೆಲವೊಮ್ಮೆ ಬಲು ಮಜವಾಗಿರುತ್ತದೆ. ಅದರಲ್ಲೂ ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪಗಳನ್ನು ಮಾಡಿಕೊಂಡು ಆರ್ಭಟಿಸೋದು ನೋಡಬೇಕು. ಒಮ್ಮೊಮ್ಮೆ ಇದು ಸ್ನೇಹದ ದ್ಯೋತಕವಾಗಿದ್ದರೆ, ಮತ್ತೊಮ್ಮೆ ರಾಜಕೀಯ ಪ್ರೇರಿತವೂ ಆಗಿರತ್ತೆ. ಇನ್ನು ಈಶ್ವರಪ್ಪ ಕುರಿತು ಸಿದ್ಧು ಕೆಲವೊಮ್ಮೆ ತಣ್ಣನೆ ಮನೋಭಾವ ಹೊಂದೋದನ್ನು ನಾವು ಕೆಲವು ಕಾರ್ಯಕ್ರಮಗಳಲ್ಲಿ ನೋಡಿದ್ದೇವೆ. ಈಶ್ವರಪ್ಪ ಬಗ್ಗೆ ತಮ್ಮ ಅಭಿಪ್ರಾಯ ಏನು ಅಂದ್ರೆ ‘ಏ ಅವ್ನಬಗ್ಗೆ ನಾನು ಮಾತಾಡೋಲ್ಲಪ್ಪ, ಬೇರೆ ಕೇಳಿ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಈಶ್ವರಪ್ಪ ಮಾತ್ರ ಸಿದ್ದು ವಿಚಾರವಾಗಿ ಮಾತನಾಡಲು ಏನಾದರೂ ಅವಕಾಶ ಸಿಕ್ಕಿತು ಎಂದರೆ ಹಿಗ್ಗಾ, ಮುಗ್ಗಾ ಬೆವರಿಳಿಸಿ ಬಿಡುತ್ತಾರೆ. ಅದು ವಿಧಾನಸಭೆಯಲ್ಲಾಗಲಿ ಅಥವಾ ಯಾವುದಾದರೂ ಬಹಿರಂಗವಾದ ಕಾರ್ಯಕ್ರಮಗಳಲ್ಲಾಗಲಿ. ಈ ತರದ ಎಷ್ಟೋ ಸನ್ನಿವೇಶಗಳನ್ನು ನಾವು ಕಾಣಬಹುದು.
ಅಂತೆಯೇ, ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ (Vijaya Sankalpa Yatra) ಉಡುಪಿಗೆ ಬಂದಿದ್ದು ಕಾರ್ಕಳ ಮತ್ತು ಉಡುಪಿ (Udupi) ವಿಧಾನಸಭಾ ಕ್ಷೇತ್ರದಲ್ಲಿ ರ‍್ಯಾಲಿ ಮತ್ತು ಸಭೆಗಳನ್ನು ನಡೆಸಿದೆ. ಈ ಸಂಬಂಧ ಮಣಿಪಾಲದಲ್ಲಿ (Manipal) ಪತ್ರಿಕಾಗೋಷ್ಠಿ ನಡೆಸಿದ ಈಶ್ವರಪ್ಪ ಮಾಜಿ ಮುಖ್ಯಮಂತ್ರಿ ಹಾಗೂ ಒಂದು ರೀತಿಯಲ್ಲಿ ತಮ್ಮ ರಾಜಕೀಯ ದೋಸ್ತು ಸಿದ್ದರಾಮಯ್ಯನವರಿಗೆ ಮಾತಲ್ಲೇ ಕುಟುಕಿ ‘ಸಿದ್ದರಾಮಯ್ಯ (Siddaramaiah) ನಿನಗೆ ಒಳ್ಳೆಯದಾಗಲಿ, ಆದರೆ ರಾಜಕೀಯವಾಗಿ ಹಾಳಾಗಿ ಹೋಗು’ ಎಂದು ಕಾಲೆಳೆದಿದ್ದಾರೆ.
ಈ ಸಂಬಂಧ ಮಾತನಾಡುತ್ತಾ ಸಿದ್ದರಾಮಯ್ಯ ಉಡುಪಿ ಕೃಷ್ಣ ಮಠಕ್ಕೆ (Krishna Math) ಬಾರದಿರುವ ಬಗ್ಗೆ ಗಮನ ಸೆಳೆದ ಅವರು, ಮುಖ್ಯಮಂತ್ರಿ ಆಗಿದ್ದ ಸಂದರ್ಭ ಸಿದ್ದರಾಮಯ್ಯನವರು ಬಹಳ ಸಲ ಉಡುಪಿಗೆ ಬಂದರು. ಆದರೆ ಒಮ್ಮೆಯೂ ಕೃಷ್ಣ ಮಠಕ್ಕೆ ಭೇಟಿ ನೀಡಲಿಲ್ಲ. ಭಕ್ತ ಕನಕದಾಸರ ಪುತ್ಥಳಿ ಕೃಷ್ಣ ಮಠದಲ್ಲಿದೆ. ಕನಕನಿಗೂ ಕೃಷ್ಣನಿಗೂ ವಿಶೇಷವಾದ ಸಂಬಂಧವಿದೆ. ಮುಖ್ಯಮಂತ್ರಿ ಆಗಿದ್ದಾಗ ಸಿದ್ದರಾಮಯ್ಯ ಕೃಷ್ಣ ಮಠಕ್ಕೆ ಬರಲಿಲ್ಲ. ನೀವು ಎಲ್ಲಾ ಕಡೆ ದೇವಸ್ಥಾನಕ್ಕೆ ಹೋಗುತ್ತೀರಿ, ಆದರೆ ಕೃಷ್ಣ ಮಠಕ್ಕೆ ಬರುವುದಿಲ್ಲ. ಕೃಷ್ಣನ ಶಾಪದಿಂದಲೇ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿರಿ. ಇನ್ನಾದರೂ ಕೃಷ್ಣಮಠಕ್ಕೆ ಬನ್ನಿ, ನಿಮಗೆ ಒಳ್ಳೆಯದಾಗುತ್ತದೆ ಎಂದರು.
ಅಲ್ಲದೆ, ಸಿದ್ದರಾಮಯ್ಯನವರು ಮಠಗಳಿಗೆ ಹಣವನ್ನು ಕೊಡುತ್ತಾರೆ, ಮುಖ್ಯಮಂತ್ರಿ ಆಗಿದ್ದಾಗ ನನಗೂ ಹಣ ಕೊಟ್ಟಿದ್ದಾರೆ. ನನ್ನ ಕ್ಷೇತ್ರದಲ್ಲಿರುವ ದೇವಸ್ಥಾನ ಹಾಗೂ ಮಠಗಳಿಗೂ ಸಿದ್ದರಾಮಯ್ಯ ಕೊಡುಗೆಗಳನ್ನು ಕೊಟ್ಟಿದ್ದರು. ನಾನು ಮಂತ್ರಿಯಾಗಿದ್ದಾಗ ಅವರ ಬೇಡಿಕೆಗಳಿಗೂ ಸ್ಪಂದಿಸಿದ್ದೇನೆ. ನಮ್ಮಿಬ್ಬರ ನಡುವೆ ಸ್ನೇಹವಿದೆ. ನಾವಿಬ್ಬರೂ ಚೆನ್ನಾಗಿದ್ದೇವೆ. ಪಕ್ಷದ ವಿಚಾರ ಬಂದಾಗ, ಅವರು ಮೋದಿಯನ್ನು (Narendra Modi) ಟೀಕೆ ಮಾಡಿದಾಗ ನಾನು ಯಾವ ಭಾಷೆ ಬಳಸಿದ್ದೇನೆ ಎಂದು ನಿಮಗೆ ಗೊತ್ತು. ಮೋದಿಯನ್ನು ನರಹಂತಕ ಎಂದು ಕರೆದರೆ ಸುಮ್ಮನೆ ಬಿಡುತ್ತೇವಾ ಎಂದು ಹಾರೈಕೆಯ ಜೊತೆ ಸಿದ್ದರಾಮಯ್ಯನವರ ಕಿವಿ ಹಿಂಡಿದರು.
ಸಿದ್ದರಾಮಯ್ಯನವರ ಮೇಲೆ ಪ್ರೀತಿಯಿಂದ, ಅವರಿಗೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಈ ಮಾತು ಹೇಳುತ್ತಿದ್ದೇನೆ. ರಾಜಕೀಯ (Politics) ಉದ್ದೇಶದಿಂದ ಈ ರೀತಿ ಹೇಳಲಿಲ್ಲ. ಪ್ರೀತಿ ಇಲ್ಲದೇ ಇದ್ದರೆ ರಾಜಕೀಯ ಮಾಡಲು ಸಾಧ್ಯವಿಲ್ಲ. ದೇಶದ್ರೋಹ ಹಾಗೂ ಧರ್ಮ ದ್ರೋಹಿಗಳನ್ನು ದ್ವೇಷಿಸಬೇಕು ಎಂದರು.
ಇದನ್ನೂ ಓದಿ : ಭಾರತದಲ್ಲಿ ಬಿಡುಗಡೆಯಾಯಿತು Redmi Fire TV! ಬೆಲೆ 15 ಸಾವಿರ ರೂಪಾಯಿಗಿಂತ ಕಡಿಮೆ!!!