Karnataka Polls: 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ !
Karnataka polls: ಕರ್ನಾಟಕ ವಿಧಾನಸಭೆಯಲ್ಲಿ ಚುನಾವಣೆಯ (election) ಸಿದ್ಧತೆ ಭರದಿಂದ ಸಾಗುತ್ತಿದ್ದು, ಬರುವ ಮೇ ತಿಂಗಳಿನಲ್ಲಿ ನಡೆಯಬೇಕಾಗಿರುವ ಚುನಾವಣೆಯಲ್ಲಿ ಜನರ ಆಯ್ಕೆ ಯ ಪಾತ್ರವು ಪ್ರಮುಖವಾಗಿದೆ. ಸದ್ಯ ಮತದಾನದಿಂದ ಯಾರೂ ವಂಚಿತರಾಗಬಾರದು ಎಂಬ ಉದ್ದೇಶದಿಂದ 80 ವರ್ಷಕ್ಕೂ ಹೆಚ್ಚು ವಯಸ್ಸಿನವರು ಹಾಗೂ ಅಂಗವಿಕಲರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸುವ ಹೊಸ ನಿರ್ಧಾರ ಮಾಡಲಾಗಿದೆ.
ಪ್ರಸ್ತುತ, ಭಾರತೀಯ ಚುನಾವಣಾ ಪ್ರಾಧಿಕಾರವು ಸುವಿಧಾ ಪೋರ್ಟಲ್ (Suvidha portal) ಹಾಗೂ ಸಕ್ಷಮ ಆಪ್ ಅನ್ನು ಅನುಷ್ಠಾನಗೊಳಿಸಿದ್ದು ಮತದಾರರು ಹಾಗೂ ಅಭ್ಯರ್ಥಿಗಳು ಇದರ ಬಳಕೆಯನ್ನು ಮಾಡಬಹುದಾಗಿದೆ.
ಪ್ರಮುಖವಾಗಿ ಕರ್ನಾಟಕದಲ್ಲಿ ಪ್ರಸ್ತುತ 12.15 ಲಕ್ಷ ಸಂಖ್ಯೆಗಳಷ್ಟು ಎಂಬತ್ತು ಮೀರಿದ ವಯೋಮಾನದವರು ಹಾಗೂ 5.5 ಲಕ್ಷದಷ್ಟು ವಿಕಲ ಚೇತನರು ತಮ್ಮ ಮನೆಯಿಂದಲೇ ಕುಳಿತು ಮತ ಚಲಾವಣೆ ಮಾಡುವ ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಮುಖ್ಯ ಚುನಾವಣಾ ಅಧಿಕಾರಿಯಾದ ರಾಜೀವ್ ಕುಮಾರ್ (Rajiv Kumar) ಅವರು ಮತದಾನದ ಕುರಿತು, “80 ವರ್ಷಕ್ಕೂ ಹೆಚ್ಚು ವಯಸ್ಸಿನವರು ಹಾಗೂ ಅಂಗವಿಕಲರು ನಿಗದಿಪಡಿಸಲಾಗಿರುವ 12D ಅರ್ಜಿಯನ್ನು ತುಂಬಿ ಮನೆಯಿಂದಲೇ ಮತದಾನದ (Vote) ಹಕ್ಕನ್ನು ಚಲಾಯಿಸಬಹುದಾಗಿದೆ ಎಂದು ತಿಳಿಸಿದ್ದಾರೆ. ಅದಲ್ಲದೆ ಈ ಪ್ರಕ್ರಿಯೆಯು ಪಾರದರ್ಶಕವಾಗಿರಲಿದೆ ಹಾಗೂ ಮತಗಟ್ಟೆ ಅಧಿಕಾರಿಗಳು ಉಪಸ್ಥಿತರಿರುವುದರಿಂದ ಗೌಪ್ಯತೆಯನ್ನೂ ಸಹ ಕಾಪಾಡಿ ಕೊಳ್ಳಲಾಗುವುದು. ಚುನಾವಣಾ ದಿನಾಂಕ ನಿಗದಿಯಾದ ಐದು ದಿನಗಳಲ್ಲೇ ಈ ಅರ್ಜಿಗಳನ್ನು ಲಭ್ಯವಾಗುವಂತೆ ಮಾಡಲಾಗುವುದು” ಎಂದು ಹೇಳಿದರು.
ಅದಲ್ಲದೆ “ಇದೇ ಮೊದಲ ಬಾರಿಗೆ ನಾವು 12.15 ಲಕ್ಷ ಸಂಖ್ಯೆಗಳಷ್ಟು ಎಂಬತ್ತು ಮೀರಿದ ವಯೋಮಾನದವರಿಗೆ ಹಾಗೂ 5.5 ಲಕ್ಷದಷ್ಟು ವಿಕಲ ಚೇತನರಿಗೆ ಈ ಸೌಲಭ್ಯ ಕಲ್ಪಿಸುತ್ತಿದ್ದು ಅವರೆಲ್ಲರೂ ಈ ಸೌಲಭ್ಯದ ಲಾಭ ಪಡೆಯುತ್ತ ಮನೆಯಿಂದಲೇ ತಮ್ಮ ಮತ ಹಾಕಬಹುದಾಗಿದೆ. ಜೊತೆಗೆ ಇನ್ನು ವಿವಿಧ ಕಾರಣಾಂತರಗಳಿಂದ ಮತಗಟ್ಟೆಗೆ ಬಾರಲಾರದವರು ಮತಗಟ್ಟೆ ಅಧಿಕಾರಿಗಳ ಉಪಸ್ಥಿತಿಯೊಂದಿಗೆ ಮನೆಯಿಂದಲೇ ಮತದಾನದ ಹಕ್ಕನ್ನು ಚಲಾಯಿಸಬಹುದಾಗಿದೆ” ಎಂದು ಹೇಳಿದರು.
ರಾಜ್ಯ ಚುನವಾಣೆಗಾಗಿ (Karnataka polls)ಯಾವ ರೀತಿ ಸಜ್ಜಾಗುತ್ತಿದೆ ಎಂಬುದರ ಬಗ್ಗೆ ವಿವರ ನೀಡಿದ ಚುನಾವಣೆ ಆಯುಕ್ತರುಗಳಾದ ಅನುಪ್ ಚಂದ್ರ ಪಾಂಡೆ ಹಾಗೂ ಅರುಣ ಗೋಯಲ್ ಅವರು, ರಾಜ್ಯದಲ್ಲಿ 58,282 ಮತಗಟ್ಟೆಗಳಿದ್ದು ಎಲ್ಲ ಮತಗಟ್ಟೆಗಳು ಸುಗಮವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ವಿವಿಧ ಮೂಲಸೌಕರ್ಯಗಳನ್ನು ಒದಗಿಸಲಾಗುವುದಾಗಿ ಹೇಳಿದರು.
ಇನ್ನು ರಾಜ್ಯವು 224 ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದ್ದು, ಇವುಗಳ ಪೈಕಿ 36 ಕ್ಷೇತ್ರಗಳು ಪರಿಶಿಷ್ಟ ಜಾತಿಗೆ ಮೀಸಲಾಗಿದ್ದರೆ 15 ಕ್ಷೇತ್ರಗಳು ಪ.ಪಂಗಡಕ್ಕೆ ಮೀಸಲಾಗಿವೆ. ಇನ್ನು ರಾಜ್ಯದಲ್ಲಿ ಮತ ಚಲಾಯಿಸುವವರ ಸಂಖ್ಯೆಯನ್ನು ಗಮನಿಸುವುದಾದರೆ ರಾಜ್ಯವು ಒಟ್ಟು 5,21,76,579 ಮತದಾರರನ್ನು ಹೊಂದಿದ್ದು ಇದರಲ್ಲಿ 2,62,42,561 ಸಂಖ್ಯೆಗಳಷ್ಟು ಮಹಿಳಾ ಮತದಾರರಿದ್ದರೆ 2,59,26,319 ರಷ್ಟು ಪುರುಷ ಮತದಾರರಿದ್ದಾರೆ ಹಾಗೂ 41,312 ರಷ್ಟು ತೃತೀಯ ಲಿಂಗಿ ಮತದಾರರಿದ್ದಾರೆ.
ಇದರಲ್ಲಿ 5,55,073 ರಷ್ಟು ವಿಕಲ ಚೇತನರು, 12,15,763 ರಷ್ಟು ಜನರು 80ರ ಪ್ರಾಯದವರು ಹಾಗೂ 16,976 ನೂರರ ಪ್ರಾಯವನ್ನು ದಾಟಿದ ಹಿರಿಯರು ನೋಂದಾಯಿತರಾಗಿದ್ದಾರೆ. ಸದ್ಯ ಈ ಬಾರಿ 9,17,241 ರಷ್ಟು ಜನರು ಮೊದಲ ಬಾರಿ ಮತದಾನಕ್ಕೆ ಮಾಡಲಿದ್ದಾರೆ.
ಪ್ರಮುಖವಾಗಿ ಎಲ್ಲ ರಾಜಕೀಯ ಪಕ್ಷಗಳಿಗೆ ಹಾಗೂ ಅಭ್ಯರ್ಥಿಗಳಿಗೆ ಈ ರೀತಿ ಮತದಾನಕ್ಕಾಗಿ ನೋಂದಣಿ ಮಾಡಿಸಿದ ಬಗ್ಗೆ ಮುಂಚಿತವಾಗಿಯೇ ಗಮನಕ್ಕೆ ತರಲಾಗುವುದು. ಈ ಮೂಲಕ ಯಾವುದೇ ಗೊಂದಲ ಸಂದೇಹ ಉಂಟಾಗದಂತೆ ಹಾಗೂ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ಕುಮಾರ್ ಅವರು ಭರವಸೆ ನೀಡಿದ್ದಾರೆ.
ಸದ್ಯ ನಗರ ಪ್ರದೇಶಗಳಲ್ಲಿನ 24063 ಮತಗಟ್ಟೆಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು 58,272 ಮತಗಟ್ಟೆಗಳಿವೆ ಎಂಬ ಮಾಹಿತಿ ದೊರೆತಿದ್ದು, ಈಗಾಗಲೇ ಭಾರತೀಯ ಚುನಾವಣಾ ಪ್ರಾಧಿಕಾರವು ಮತದಾನವು ಯಾವ ಅಡೆ-ತಡೆ, ಗೊಂದಲಗಳಿಲ್ಲದ ಸರಾಗವಾಗಿ ಸಾಗಬೇಕೆಂಬ ದೃಷ್ಟಿಯಿಂದ ಸುವಿಧಾ ಎಂಬ ವೆಬ್ ಪೋರ್ಟಲ್ ಹಾಗೂ ಸಕ್ಷಮ ಎಂಬ ಆಪ್ ಅನ್ನು ಅಭಿವೃದ್ಧಿಪಡಿಸಿ ಚಾಲನೆ ನೀಡಿದ್ದು, ಈ ಎರಡೂ ಸೌಲಭ್ಯಗಳನ್ನು ಮತದಾರರು ಹಾಗೂ ಅಭ್ಯರ್ಥಿಗಳು ಬಳಸಬಹುದಾಗಿದೆ.