ಹೆಣ್ಣು ಜಗದ ಕಣ್ಣು!! ನಾರಿಯರ ನೆನಪಿಸುವ ಈ ದಿನದ ಬಗ್ಗೆ ನಿಮಗೆಷ್ಟು ಗೊತ್ತು?

Women’s Day: ಭಾರತೀಯ ಸಂಸ್ಕತಿಯಲ್ಲಿ (Indian Culture) ಹೆಣ್ಣು ಮಕ್ಕಳಿಗೆ ವಿಶೇಷ ಸ್ಥಾನಮಾನವಿದೆ. “ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ”ಎಂದು ಹಿರಿಯರು ಹೆಣ್ಣಿನ ಬಗ್ಗೆ ಉಲ್ಲೇಖಿಸಿದ್ದಾರೆ.ಹೆಣ್ಣು (Women) ಸಮಾಜದ ಕಣ್ಣು ಎಂಬ ಮಾತು ಹೆಚ್ಚು ಪ್ರಚಲಿತ. ಬದುಕಿನ ಎಲ್ಲಾ ಸವಾಲುಗಳನ್ನು ಎದುರಿಸಿ ನಿಲ್ಲುವ ಸಹನೆಯ ಸಂಕೇತ. ಅದೆಷ್ಟೇ ಕಷ್ಟಗಳು ಬಂದರೂ ಮನೆಯವರ ಹಿತಕ್ಕಾಗಿ ತನ್ನೆಲ್ಲ ಸುಖವನ್ನು ಮುಡಿಪಿಡುವ ಜೀವ.

ಹೆಣ್ಣು ನಾಲ್ಕು ಗೋಡೆಗಳ ನಡುವೆಗಳ ನಡುವೆ ಬಂಧಿಯಾಗಿ ಜಗತ್ತಿನ ಆಗು ಹೋಗುಗಳ ಬಗ್ಗೆ ಗಮನ ನೀಡಲು ಅವಕಾಶ ನೀಡದ ಕಾಲ ಒಂದಿತ್ತು. ಆದರೆ, ಇಂದು ಕಾಲ ಬದಲಾಗಿದೆ. ಹೆಣ್ಣು ತನ್ನೊಳಡಗಿದ ಪ್ರತಿಭೆಯನ್ನು ಅನಾವರಣಗೊಳಿಸಿ ಎಲ್ಲ ಕ್ಷೇತ್ರದಲ್ಲಿಯೂ ತನ್ನ ಛಾಪು ಮೂಡಿಸುತ್ತ ಬರುತ್ತಿದ್ದಾಳೆ. ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ಆಳಬಲ್ಲದು ಎಂದು ನಿರೂಪಿಸಿದ ದೃಷ್ಟಾಂತ ಕೂಡ ನಮ್ಮ ಮುಂದೆ ಇದೆ. ಮಗಳಾಗಿ, ಪತ್ನಿಯಾಗಿ, ತಾಯಿಯಾಗಿ, ಸ್ನೇಹಿತೆಯಾಗಿ ಜೀವನದ ಪ್ರತಿ ಘಟ್ಟದಲ್ಲಿಯು ಮನೆಯ ಬೆಳಕಾಗಿ ಪ್ರಜ್ವಲಿಸುವ ನಂದಾದೀಪ ಹೆಣ್ಣು. ನಮ್ಮ ಸಮಾಜ ಆಧುನಿಕತೆಗೆ ಅದೆಷ್ಟೇ ತೆರೆದುಕೊಂಡಿದ್ದರೂ ಕಾಲ ಎಷ್ಟೇ ಬದಲಾದರೂ ಕೂಡ ಹೆಣ್ಣಿನ ಮೇಲೆ ನಡೆಯುತ್ತಿರುವ ಶೋಷಣೆ, ತಾರತಮ್ಯ, ದೌರ್ಜನ್ಯ ಕಡಿಮೆಯಾಗಿಲ್ಲ ಎಂಬುದು ಅಷ್ಟೇ ಸತ್ಯ.

ದೇಶದಾದ್ಯಂತ ಮಾರ್ಚ್ 8 ರಂದು ಅಂತರಾಷ್ಟ್ರೀಯ ಮಹಿಳಾ ದಿನ(International Women’s Day) ವನ್ನು ಆಚರಿಸಲಾ ಗುತ್ತದೆ. ಲಿಂಗ ಸಮಾನತೆ, ಜೊತೆಗೆ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಮಹತ್ವ ನೀಡುವ ನಿಟ್ಟಿನಲ್ಲಿ ಈ ದಿನವನ್ನು ಮಹಿಳಾ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಇದರ ಜೊತೆಗೆ ಎಲ್ಲ ಅಡೆತಡೆಗಳ ಮಧ್ಯೆಯೂ ಸಾಧನೆಯ ಮೆಟ್ಟಿಲನ್ನು ಏರಿದ ಮಹಿಳಾ ಮಣಿಗಳನ್ನು ಪ್ರೋತ್ಸಾಹಿಸಿ ಗೌರವ ಸಲ್ಲಿಸಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಪ್ರೇರಣೆ ನೀಡುವ ವಿಶೇಷ ದಿನವಾಗಿದೆ.

ಹೀಗಿದ್ದರೂ ಕೂಡ, ಮಹಿಳಾ ದಿನಾಚರಣೆ ಎಂಬ ಬೋರ್ಡ್ ಅಡಿಯಲ್ಲಿ ಮಾರ್ಚ್ 8 ರಂದು ಒಂದು ದಿನದ ಮಟ್ಟಿಗೆ ಎಲ್ಲೆಡೆ ಮಹಿಳೆಯನ್ನು ಹೊಗಳಿ ಕೊಂಡಾಡಿ ಭಾಷಣ ಮಾಡುವ ಪ್ರಹಸನ ನಡೆದು ಮಹಿಳಾ ದಿನಾಚರಣೆ( women’s day)ಒಂದು ದಿನದ ಮಟ್ಟಿಗೆ ಸೀಮಿತವಾಗುತ್ತಿರುವುದಂತು ವಿಪರ್ಯಾಸ. ಅಷ್ಟೆ ಏಕೆ, ಹೆಣ್ಣಿನ ಬಗ್ಗೆ ಪ್ರವಚನ ಹೇಳೋ ಎಷ್ಟೋ ಮಂದಿ ಹೆಣ್ಣು ಮಗು ಹುಟ್ಟಿದರೆ ಹೊರೆ ಎಂಬಂತೆ ನೋಡುವುದು ಇದೆ. ಇದರ ನಡುವೆಯೂ ಸರಿಸುಮಾರು 45 ವರ್ಷಗಳಿಂದ ಮಹಿಳಾ ದಿನಾಚರಣೆಯನ್ನು ಆಚರಣೆ ನಡೆಯುತ್ತಾ ಬರುತ್ತಿದೆ. ಆದರೆ, ಈ ಮಹಿಳಾ ದಿನಾಚರಣೆಯ ಆಚರಣೆಯ ಮಹತ್ವವೇನು? ಈ ಆಚರಣೆ ಹುಟ್ಟಿಕೊಂಡಿದ್ದು ಹೇಗೆ ಎಂಬ ಬಗ್ಗೆ ನಾವು ಎಂದಾದರೂ ಯೋಚಿಸಿದ್ದೇವೆಯೇ?

1908 ರಲ್ಲಿ ಅಮೆರಿಕದಲ್ಲಿ ಕಾರ್ಮಿಕರ ಆಂದೋಲನವು ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಪಡೆಯುವ ನಿಟ್ಟಿನಲ್ಲಿ ದೊಡ್ಡ ಮಟ್ಟದಲ್ಲಿ ನಡೆದು ಎಲ್ಲರ ಚಿತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು. ದುಡಿಯುವ ಮಹಿಳೆಯರು ಅವರ ಹಕ್ಕಿನ ಪರವಾಗಿ ಧ್ವನಿಯೆತ್ತಿ ಸುಮಾರು 15,000 ಮಹಿಳೆಯರು ನ್ಯೂಯಾರ್ಕ್ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ದರು. ಈ ವೇಳೆ ತಮ್ಮ ಕೆಲಸದ ಅವಧಿಯನ್ನು ಕಡಿಮೆ ಮಾಡಿ ವೇತನದ ಶ್ರೇಣಿಯನ್ನು ಹೆಚ್ಚಿಸುವ ಜೊತೆಗೆ ಮಹಿಳೆಯರಿಗೂ ಮತದಾನದ ಹಕ್ಕನ್ನು ನೀಡಬೇಕೆಂದು ಬೇಡಿಕೆಯಿಟ್ಟಿದ್ದರು. ಹೀಗಾಗಿ, ಒಂದು ವರ್ಷದ ಮಾರ್ಚ್‌ನಲ್ಲಿ ಅಮೆರಿಕದ ಕೋಪನ್ ಹ್ಯಾಗನ್‌ನಲ್ಲಿ ನಡೆದ ಸಮಾಜವಾದಿ ಅಂತಾರಾಷ್ಟ್ರೀಯ ಸಭೆಯಲ್ಲಿ, ಈ ಮೆರವಣಿಗೆಯನ್ನು ಸಮಾಜವಾದಿ ಪಕ್ಷದ ಅಮೆರಿಕವು ರಾಷ್ಟ್ರೀಯ ಮಹಿಳಾ ದಿನವೆಂದು ಘೋಷಿಸಿತು.

1975ರಲ್ಲಿ ಮೊದಲ ಬಾರಿಗೆ ವಿಶ್ವಸಂಸ್ಥೆ ಮಾರ್ಚ್ 8 ರಂದು ಅಧಿಕೃತವಾಗಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಣೆಗೆ ತಂದಿತು. ಆದರೆ, 1977 ರಲ್ಲಿ ಯು ಎನ್ ಜನರಲ್ ಅಸೆಂಬ್ಲಿಯು ಮಹಿಳೆಯರ ಹಕ್ಕುಗಳು ಮತ್ತು ಜಾಗತಿಕ ಶಾಂತಿಯನ್ನು ಬೆಂಬಲಿಸಲು ಮಾರ್ಚ್ 8 ಅನ್ನು ಅಂತರರಾಷ್ಟ್ರೀಯ ಮಹಿಳಾ ದಿನವೆಂದು ಘೋಷಣೆ ಮಾಡಿದೆ. ಇದರಿಂದ ಯುರೋಪ್​ನಲ್ಲಿ ಮಹಿಳಾ ದಿನಾಚರಣೆ ಒಂದು ಮಹತ್ವದ ದಿನವಾಗಿದೆ.

ವಿಶ್ವಸಂಸ್ಥೆ ಹಾಗೂ ಅದರ ಅಂಗ ಸಂಸ್ಥೆಗಳು ಮಹಿಳಾ ದಿನಾಚರಣೆಯನ್ನು ಉತ್ತೇಸುತ್ತಿದ್ದು, ಸುಸ್ಥಿರ ಅಭಿವೃದ್ಧಿ, ಶಾಂತಿ, ಸುರಕ್ಷತೆಯನ್ನು ಸಾಧಿಸಲು ಮಹಿಳೆಯರ ಭಾಗಿತ್ವವನ್ನು ಪುರುಷ ಸಮಾನವಾಗಿ ಉತ್ತೇಜನ ನೀಡುತ್ತಿದೆ. ಇದರ ಜೊತೆಗೆ ಲಿಂಗ ಸಮಾನತೆಯ ಪ್ರಾಮುಖ್ಯತೆಯ ಕುರಿತು ಅರಿವು ಮೂಡಿಸಲು ಕೂಡ ಮಹಿಳಾ ದಿನಾಚರಣೆ ಸಹಕಾರಿಯಾಗಿದೆ.1909 ರಲ್ಲಿ ನ್ಯೂಯಾರ್ಕ್ ನಲ್ಲಿ ನಡೆದ ಸಮಾಜವಾದಿ-ರಾಜಕೀಯ ಕಾರ್ಯಕ್ರಮ ಮಹಿಳಾ ದಿನಾಚರಣೆ ಮೂಲಕ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಜಾಗತಿಕವಾಗಿ ಹೊಸ ಆಯಾಮಕ್ಕೆ ಅವಕಾಶ ಕಲ್ಪಿಸಿ ಅಭಿವೃದ್ಧಿಶೀಲ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಮಹಿಳೆಗೆ ವಿಶೇಷ ಗೌರವ ನೀಡಲು ಅನುವು ಮಾಡಿಕೊಟ್ಟಿದೆ.

ಈ ಪರಿಕಲ್ಪನೆಯು ಎಲ್ಲಾ ದೇಶಗಳಿಗೆ ವ್ಯಾಪಿಸಿ, ಎಲ್ಲ ಕಡೆ ಪಸರಿಸಿ ಮಹಿಳೆಯರು ಲಿಂಗ ಸಮಾನತೆ ಕುರಿತು ಚರ್ಚೆ, ಬೇಡಿಕೆಗೆ ಅವಕಾಶ ನೀಡಿತು. ಕ್ಯೂಬಾ, ಅರ್ಮೇನಿಯಾ, ಮಂಗೋಲಿಯಾ, ರಷ್ಯಾ, ಉಗಾಂಡಾ ಮತ್ತು ಉಕ್ರೇನ್‌ನಂತಹ ದೇಶಗಳು ಈ ದಿನದಲ್ಲಿ ಸಾರ್ವಜನಿಕ ರಜಾದಿನವನ್ನಾಗಿ ಆಚರಿಸುತ್ತವೆ. ನಮ್ಮಲ್ಲಿಯೂ ಮಹಿಳಾ ದಿನಾಚರಣೆ ಪ್ರಯುಕ್ತ ವಿಶೇಷ ಮಹತ್ವ ನೀಡುವ ಕ್ರಮ ಅನುಕರಣೆಯಾಗಿದ್ದು, ಮಹಿಳೆ ಎಲ್ಲ ಕ್ಷೇತ್ರದಲ್ಲಿಯೂ ತನ್ನತನವನ್ನು ಪ್ರತಿಪಾಲಿಸಲು ಮುಖ್ಯವಾಗಿ ಮನೆಯವರ ಸಹಕಾರ,ಬೆಂಬಲ ಪ್ರೋತ್ಸಾಹ ಅತ್ಯಗತ್ಯ. ಹೆಣ್ಣನ್ನು ಹೊರೆ ಎಂದು ನೋಡುವ ಬದಲು ಅವಳ ಕನಸುಗಳಿಗೆ ರೆಕ್ಕೆ ಬಿಚ್ಚಿ ಹಾರಲು ಅನುವು ಮಾಡಿಕೊಟ್ಟರೆ ಸಮಾಜದಲ್ಲಿ ಆಕೆಯು ಕೂಡ ಸಾಧನೆಯ ಮಜಲನ್ನು ಏರಿ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ.

Leave A Reply

Your email address will not be published.