Haveri: ರಾಣಿಬೆನ್ನೂರಿನ ಈ ರತಿ-ಮನ್ಮಥರನ್ನು ನಗಿಸಿ, 4 ಲಕ್ಷ ಬಹುಮಾನ ನಿಮ್ಮದಾಗಿಸಿ

Rati Manmatha :ಪ್ರತಿಯೊಂದು ಪ್ರದೇಶದಲ್ಲೂ ಹಬ್ಬ ಹರಿದಿನಗಳಿಗಾಗಿ ಒಂದೊಂದು ರೀತಿಯ ವಿಶೇಷ ಸಂಪ್ರದಾಯಗಳನ್ನು ಆಚರಿಸುವುದನ್ನು ನಾವು ನೋಡಿದ್ದೇವೆ. ಇವುಗಳಲ್ಲಿ ಕೆಲವು ವಿಚಿತ್ರ ಆಚರಣೆಗಳೂ ಇರುತ್ತವೆ. ಅದರಲ್ಲೂ ದೀಪಾವಳಿ, ಹೋಳಿ ಹಬ್ಬಗಳಲ್ಲಂತೂ ಇದು ಸ್ವಲ್ಪ ಜೋರೆಂದೆ ಹೇಳಬಹುದು. ಅಂತಯೆ ಈ ಹೋಳಿ ಹಬ್ಬದ ಸಂದರ್ಭದಲ್ಲಿ ಕರ್ನಾಟಕದ ಹಾವೇರಿ(Haveri) ಜಿಲ್ಲೆಯ ರಾಣಿಬೆನ್ನೂರಿ(Ranibennur)ನಲ್ಲಿ ನಡೆಯುವ ರತಿ-ಮನ್ಮಥ(Rati Manmatha)ರನ್ನು ನಗಿಸುವ ಕಾರ್ಯಕ್ರಮದ ಬಗ್ಗೆ ನೀವು ತಿಳಿದಿರಲೇ ಬೇಕು ಅಲ್ವಾ? ಅಂದಹಾಗೆ ಈ ವರ್ಷವೂ ಈ ನಗಿಸುವ ಕಾರ್ಯಕ್ರಮ ಈ ಭಾರೀಯೂ ನಡೆಯಲಿದ್ದು, ನಗಿಸಿದವರಿಗೆ ಸಿಗುವ ಬಹುಮಾನ ಎಷ್ಟು ಗೊತ್ತಾ?

ಹೌದು, ರಾಣಿಬೆನ್ನೂರಿನಲ್ಲಿ ಸುಮಾರು 65 ವರ್ಷಗಳಿಂದ ಜೀವಂತ ರತಿ-ಮನ್ಮಥರನ್ನು ನಗಿಸುವ ಕಾರ್ಯಕ್ರಮವನ್ನು ಏರ್ಪಡಿಸುತ್ತಾ ಬಂದಿದ್ದಾರೆ. ಆದರೆ ಈ ವರೆಗೂ ಯಾರು ಅವರನ್ನು ನಗಿಸುವಲ್ಲಿ ಯಶಸ್ವಿಯಾಗಿಲ್ಲ. ಅಂತೆಯೇ ಈ ಸಲವೂ ಮಾ. 7ರಂದು ಸಂಜೆ 7.30ರಿಂದ ರಾತ್ರಿ 12ರ ವರೆಗೆ ನಗರದ ದೊಡ್ಡಪೇಟೆ(Doddapete) ರಾಮಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಜೀವಂತ ರತಿ ಮನ್ಮಥರನ್ನು ಕುಳ್ಳರಿಸಲಾಗುತ್ತದೆ. ಅವರನ್ನು ನಗಿಸುವ ಸ್ಪರ್ಧೆಯಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಅಲ್ಲದೆ ಈ ಭಾರಿಯ ಬಹುಮಾನದ ಮೊತ್ತ ಕೇಳಿದ್ರೆ ನೀವೇ ಆಶ್ಚರ್ಯ ಪಡ್ತೀರಾ!

ಈ ಭಾರಿ ರತಿ ಮನ್ಮಥರನ್ನು ನಗಿಸಿದರೆ ಬರೋಬ್ಬರಿ 4 ಲಕ್ಷ ರೂಪಾಯಿ ನಿಮ್ಮದಾಗಲಿದೆ. ಕೊಟ್ರೇಶ ಕೆಂಚಪ್ಪನವರ, ಅನಿಲ ಸಿದ್ದಾಳಿ, ಬಸವರಾಜ ರೊಡ್ಡನವರ ಹಾಗೂ ಅಜ್ಜಪ್ಪ ಜಂಬಗಿ ಅವರು ತಲಾ 1 ಲಕ್ಷ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ ಈ ಬಹುಮಾನದ ಹಣ ಪ್ರತೀ ವರ್ಷವೂ ಹಾಗೆ ಉಳಿಯುತ್ತಿದೆ. ಯಾಕಂದ್ರೆ, ನಗಿಸಿದವರಿಗೆ ವಿವಿಧ ಸಂಘ-ಸಂಸ್ಥೆಗಳು ಲಕ್ಷಕ್ಕೂ ಅಧಿಕ ನಗದು ಬಹುಮಾನ ನೀಡುವುದಾಗಿ ತಿಳಿಸಿದರೂ ಕಳೆದ 65 ವರ್ಷಗಳಿಂದ ಯಾರೊಬ್ಬರೂ ಜೀವಂತ ರತಿ ಕಾಮಣ್ಣರನ್ನು ನಗಿಸಿದ ಉದಾಹರಣೆಗಳಿಲ್ಲ! ನಿಜಕ್ಕೂ ಇದೊಂದು ದಾಖಲೆಯಾಗಿ ಮುಂದುವರಿದಿದೆ.

ಇವರನ್ನು ನಗಿಸಲು ಹಾಗೂ ಇವರ ಮರ್ಮವನ್ನು ಅರಿಯಲು ಸ್ಥಳೀಯರು ಮಾತ್ರವಲ್ಲದೆ ರಾಜ್ಯದ ವಿವಿಧ ಮೂಲೆಗಳಿಂದ ಸಾಕಷ್ಟುಜನ ಇಲ್ಲಿಗೆ ಆಗಮಿಸಿ ಬರಿಗೈಯಲ್ಲಿ ಹಿಂದಿರುಗುವಂತಾಗಿದೆ. ವಿವಿಧ ಪ್ರದೇಶಗಳ ಯುವಕರು ಬ್ಯಾಂಡು ಬಾರಿಸುತ್ತ ಇಲ್ಲಿಗೆ ಬಂದು ಹೋಗುವುದನ್ನು ಕಂಡರೆ ಇಲ್ಲಿ ಒಂದು ಜಾತ್ರೆ ನಡೆದಿದೆಯೇನೋ ಎಂದೆನೆಸುತ್ತದೆ. ಜನರನ್ನು ನಿಯಂತ್ರಿಸುವ ಸಲುವಾಗಿ ಬಿಗಿಯಾದ ಪೊಲೀಸ್‌ ಬಂದೋಬಸ್ತ್ ಮಾಡಲಾಗುತ್ತದೆ. ಇನ್ನು ಈ ವರ್ಷದ ಜೀವಂತ ರತಿ ಮನ್ಮಥರ ಪ್ರದರ್ಶನ ವೀಕ್ಷಿಸಲು ಹಾವೇರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ದಾವಣಗೆರೆ ಡಿಐಜಿ ಆಗಮಿಸುತ್ತಿರುವುದು ವಿಶೇಷವಾಗಿದೆ.

ಆಶ್ಚರ್ಯ ಏನಪ್ಪಾ ಅಂದ್ರೆ ಕಳೆದ 24 ವರ್ಷಗಳಿಂದ ಕಾಮನ ವೇಷವನ್ನು ಗದಿಗೆಪ್ಪ ರೊಡ್ಡನವರ(Gadigeppa Roddanavara) ಹಾಗೂ 33 ವರ್ಷಗಳಿಂದ ರತಿ ವೇಷವನ್ನು ಕುಮಾರ ಹಡಪದ(Kumara Hadapada) ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದ್ದಾರೆ. ಉಳಿದ ದಿನಗಳಲ್ಲಿ ಇವರಿಬ್ಬರೂ ಸಾಕಷ್ಟುಹಾಸ್ಯಪ್ರಜ್ಞೆ ಹೊಂದಿದ್ದು ರತಿ ಮನ್ಮಥರಾದಾಗ ಪರಕಾಯ ಪ್ರವೇಶ ಮಾಡಿದಂತೆ ನಗೆಯ ಲವಲೇಶವೂ ತಮ್ಮ ಹತ್ತಿರ ಸುಳಿಯದಂತೆ ಕುಳಿತುಕೊಳ್ಳುವ ರೀತಿ ಸಾರ್ವಜನಿಕರಿಗೆ ಕುತೂಹಲದ ಜತೆಗೆ ಅಚ್ಚರಿ ಉಂಟು ಮಾಡುತ್ತದೆ. ಇದರ ನಿಗೂಢತೆ ರಹಸ್ಯವಾಗಿಯೇ ಉಳಿದಿದ್ದು ಜನರನ್ನು ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ.

ಇನ್ನು ರತಿ ಕಾಮಣ್ಣರನ್ನು ನಗಿಸಲು ಉತ್ಸಾಹದಿಂದ ಇಲ್ಲಿಗೆ ಬರುವ ಜನ ತಾವೇ ನಗೆಪಾಟಲಿಗೀಡಾಗುತ್ತಾರೆ. ಇಂತಹ ಪ್ರಸಂಗಗಳು ನೋಡುಗರಲ್ಲಿ ಮೋಜು ಉಂಟು ಮಾಡುತ್ತವೆ. ರತಿ ಮನ್ಮಥರು ಮಾತ್ರ ಇದಾವುದಕ್ಕೂ ತಲೆಕೆಡಿಸಿಕೊಳ್ಳದೆ ಪರಕಾಯ ಪ್ರವೇಶ ಮಾಡಿದಂತೆ ತಮ್ಮ ಪಾಡಿಗೆ ತಾವು ತದೇಕಚಿತ್ತದಿಂದ ಗಂಭೀರವಾಗಿ ಕುಳಿತುಕೊಂಡಿರುತ್ತಾರೆ. ರತಿ-ಮನ್ಮಥ (Rati-Manmatha)ರನ್ನು ನಗಿಸಲು ಜನರು ಮಾಡುವ ಕಸರತ್ತುಗಳು ತುಂಬಾ ವೈವಿಧ್ಯಮಯವಾಗಿರುತ್ತದೆ. ಆದರೆ ನಗಿಸಲು ಸಾಧ್ಯವಾಗುತ್ತಿಲ್ಲ.

‘ಕಾಮಣ್ಣ ಸ್ವಲ್ಪ ನಕ್ಕರ ನಗಪಾ, ಏನ ಚಿಂತಿ ಐತಿ ನಿನಗ? ಎಂಎಲ್‌ಎ ಟಿಕೆಟ್‌ ಚಿಂತಿ ಐತ್ಯೇನ್‌? ಯಾವ ಪಕ್ಷದ ಟಿಕೆಟ್‌ ಬೇಕ್‌ ಹೇಳ್‌, ಬೇಕಾದ್ರ ಎಲ್ಲಾರನ್ನೂ ಬಿಟ್ಟು ನೀನಗ್‌ ಹೇಳಿ ಕೊಡಸೂನಂತ! ಯವ್ವಾ ರತಿದೇವಿ ನೀನರ್‌ ಸ್ವಲ್ಪ ನಕ್ಕರ ನಗು, ಬಹುಮಾನದ ಹಣ ಪೂರಾ ನಿಮಗೆ ಕೊಡ್ತೇವಿ? ಸುಮ್ನಾ ಗಂಟು ಮಾರಿ ಹಾಕ್ಕೊಂಡ ಯಾಕ್‌ ಕುಂದರಿತಿ? ಕಾಮ ಮುತ್ತು ಕೊಡಬೇಕಾರ ಅವನ ಮೀಸಿ ನಿನಗ್‌ ಚುಚ್ಚಾಗಿಂಗಲ್ಲೇನ್‌? ಹನಿಮೂನ್‌ಗೆ ಸವಾರಿ ಎಲ್ಲಿಗೆ?’ ಎಂಬ ವೈವಿಧ್ಯಮಯ ಮಾತುಗಳು ಇಲ್ಲಿಗೆ ಆಗಮಿಸುವ ಜನರಿಂದ ಕೇಳಿ ಬರುತ್ತವೆ.

ಹಾಗಿದ್ರೆ ತಡವೇಕೆ ಮಾಡ್ತೀರಿ. ನಾಳೆನೇ ರಾಣಿಬೆನ್ನೂರಿಗೆ ಹೊರಡಿ. ರತಿ ಮನ್ಮಥರನ್ನು ನಗಿಸುವ ಸ್ಪರ್ಧೆಯಲ್ಲಿ ನೀವೂ ಭಾಗವಹಿಸಿ. ಈ ಭಾರಿಯಾದರೂ ಇವರನ್ನು ನಗಿಸಿ 4 ಲಕ್ಷ ನಿಮ್ಮದಾಗಿಸಿಕೊಳ್ಳಿ!

Leave A Reply

Your email address will not be published.