ಗ್ರಾ.ಪಂ.ನೌಕರರಿಗೆ ಸರ್ಕಾರಿ ನೌಕರರಂತೆ ವೇತನ ಶ್ರೇಣಿ ನಿಗದಿಪಡಿಸಲು ಅಸಾಧ್ಯ -ಕೋಟ

ಬೆಂಗಳೂರು : ರಾಜ್ಯದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಲ್‌ ಕಲೆಕ್ಟರ್‌, ಕ್ಲಕ್‌, ಡಾಟಾ ಎಂಟ್ರಿ ಆಪರೇಟರ್‌, ಸ್ವಚ್ಚತಾಗಾರ ,ಜವಾನ ಸೇರಿದಂತೆ ಅಂದಾಜು 30 ಸಾವಿರ ನೌಕರರನ್ನು “ಸಿ’ ಮತ್ತು “ಡಿ’ ದರ್ಜೆ ನೌಕರರೆಂದು ಪರಿಗಣಿಸಿ, ಸರ್ಕಾರಿ ನೌಕರರಂತೆ ವೇತನ ಶ್ರೇಣಿ ನಿಗದಿಪಡಿಸಲು ಆಡಳಿತಾತ್ಮಕವಾಗಿ ಸಾಧ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ವಿಧಾನ ಪರಿಷತ್ತಿನಲ್ಲಿ ಸದಸ್ಯ ಮಂಜುನಾಥ್‌ ಭಂಡಾರಿ ಅವರು ಕೇಳಿದ ಪ್ರಶ್ನೆಗೆ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಈ ಉತ್ತರ ನೀಡಿದ್ದಾರೆ.

ಭಂಡಾರಿ ಅವರು ,ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆಯ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಸರ್ಕಾರಿ ನೌಕರರೆಂದು ಪರಿಗಣಿಸುವ ಕುರಿತು ಕೇಳಿದ ಪ್ರಶ್ನೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಉತ್ತರ ನೀಡಿದರು.

ಕೋಟ ಶ್ರೀನಿವಾಸ ಪೂಜಾರಿ ಅವರು ವಿವರಣೆ ನೀಡಿ, ಸ್ಥಳೀಯ ಗ್ರಾಮ ಪಂಚಾಯತ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದೆ. ಆದರೆ ಅವರು ಸ್ಥಳೀಯ ಗ್ರಾಮ ಪಂಚಾಯತ್ ನೌಕರರಾಗಿದ್ದು, ಅವರನ್ನು ಸರ್ಕಾರಿ ನೌಕರರಂತೆ ವೇತನ ಶ್ರೇಣಿ ನಿಗದಿಪಡಿಸಲು ಆಡಳಿತಾತ್ಮಕವಾಗಿ ಸಾಧ್ಯವಿಲ್ಲ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಂಜುನಾಥ್‌ ಭಂಡಾರಿ, ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್‌ ಸೇರಿದಂತೆ ಇನ್ನಿತರ ನೌಕರರಿಗೆ ಹಲವು ತಿಂಗಳಿಂದ ಸರ್ಕಾರ ವೇತನ ಪಾವತಿ ಮಾಡಿಲ್ಲ. ಕನಿಷ್ಟ ವೇತನಕ್ಕೆ ಗರಿಷ್ಟ ಕೆಲಸ ಮಾಡುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಸರ್ಕಾರ ಈ ನೌಕರರ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಎಂದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಈಗಾಗಲೇ ಗ್ರಾಮ ಪಂಚಾಯತ್ ನೌಕರರಿಗೆ ಕಾರ್ಮಿಕ ಇಲಾಖೆ ಕಾಲಕಾಲಕ್ಕೆ ನಿಗದಿಪಡಿಸುವ ಕನಿಷ್ಟ ವೇತನ ಮತ್ತು ತುಟ್ಟಿಭತ್ಯೆಯನ್ನು ಗ್ರಾಮ ಪಂಚಾಯತ್ ನೀಡುತ್ತಿದೆ.

ಅನಿರೀಕ್ಷಿತ ಸಂದರ್ಭಗಳಲ್ಲಿ ಅಪಘಾತಕ್ಕೀಡಾದಾಗ ಅವಲಂಬಿತ ಕುಟುಂಬದ ಸದಸ್ಯರಿಗೆ ಆರ್ಥಿಕ ಭದ್ರತೆ ನೀಡುವ ದೃಷ್ಟಿಯಿಂದ ಜನ್‌ಧನ್‌ ಯೋಜನೆಯಡಿ ವಿಮಾ ಪಾಲಿಸಿಗಳನ್ನು ಕಡ್ಡಾಯಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಗ್ರಾಮ ಪಂಚಾಯತ್ ನೌಕರರು ಸೇವೆಯಲ್ಲಿರುವಾಗ ಮರಣ ಹೊಂದಿದಲ್ಲಿ ಅವರ ಅವಲಂಬಿತರು ಅನುಕಂಪದ ಆಧಾರದ ಮೇಲೆ ನೇಮಕಾತಿ ಹೊಂದಲು ಆರ್ಹರಿದ್ದಲ್ಲಿ ಪಂಚಾಯತ್ ಗಳಲ್ಲಿ ಖಾಲಿಯಿರುವ ಹುದ್ದೆಗೆ ಬೇರೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುವುದರ ಬದಲು ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಅವಲಂಬಿತರನ್ನು ಜಿಲ್ಲಾ ಪಂಚಾಯತ್ ಸಿಇಒ ಅವರ ಅನುಮೋದನೆ ಪಡೆದು ಅನುಕಂಪದ ಮೇಲೆ ನೇಮಿಸಲು ಅಗತ್ಯ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

Leave A Reply

Your email address will not be published.