ಯಲ್ಲಾಪುರದಲ್ಲಿ ಹೊಸ ಪ್ರಭೇದದ ಏಡಿ ಪತ್ತೆ! ವಿನೂತನ ಏಡಿಗೆ ಮಗಳ ಹೆಸರನ್ನೇ ನಾಮಕರಣ ಮಾಡಿದ ತಜ್ಞ!!

ಪ್ರಕೃತಿಯಲ್ಲಿ ಪ್ರತಿ ನಿತ್ಯ ಒಂದೊಂದು ಕೌತುಕಗಳು ನಡೆಯುತ್ತಿರುತ್ತವೆ. ಕೆಲವು ನಮ್ಮ ಗಮನಕ್ಕೆ ಬಂದರೆ ಇನ್ನು ಕೆಲವು ಹಾಗೇ ಉಳಿದುಬಿಡುತ್ತದೆ. ಇದೀಗ ಇಂತಹ ಒಂದು ಘಟನೆ ಬೆಳಕಿಗೆ ಬಂದಿದ್ದು, ಹೊಸ ಜಾತಿಯ ಸಿಹಿ ನೀರಿನ ಏಡಿಯೊಂದು ಮಧ್ಯ ಪಶ್ವಿಮ ಘಟ್ಟದ ಭಾಗವಾದ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಪತ್ತೆಯಾಗಿದೆ. ಅಲ್ಲದೆ ಇದನ್ನು ಪತ್ತೆ ಹಚ್ಚಿದ ಕೂಡಲೇ ಆ ತಂಡವು ಏಡಿಗೆ ಹೆಸರನ್ನು ಕೂಡ ದಯಪಾಲಿಸಿದ್ದಾರೆ. ಆದರೆ ವಿಶೇಷ ಎಂಬಂತೆ ಅದನ್ನು ಸಂಶೋಧನೆ ಮಾಡಿದ ತಜ್ಞ, ತನ್ನ ಮಗಳ ಹೆಸರನ್ನೇ ಏಡಿಗೆ ನಾಮಕರಣ ಮಾಡಿದ್ದಾರೆ.

ಹೌದು, ನಿಸರ್ಗ ತಜ್ಞ ಗೋಪಾಲಕೃಷ್ಣ ಹೆಗಡೆ, ಅರಣ್ಯ ಇಲಾಖೆಯ ಸಿಬ್ಬಂದಿ ಪರಶುರಾಮ ಭಜಂತ್ರಿ ಮತ್ತು ಪುಣೆಯ ಪ್ರಾಣಿ ಸರ್ವೇಕ್ಷಣಾಲಯದ ಸಮೀರಕುಮಾರ ಪಾಟಿ ತಂಡ ಈ ವೇಲಾ ಪ್ರಭೇದದ ಹೊಸ ಜಾತಿಯ ಸಿಹಿನೀರಿನ ಏಡಿಯನ್ನು ಪತ್ತೆ ಹಚ್ಚಿದ್ದು, ಇದಕ್ಕೆ ‘ವೇಲಾ ಬಾಂಧವ್ಯ'(Vela bandhavya) ಎಂದು ಹೆಸರಿಟ್ಟಿದ್ದಾರೆ.

ಅಂದಹಾಗೆ, ಬಾರೆಯಲ್ಲಿ ಪತ್ತೆಯಾಗಿರುವ ಈ ಏಡಿಗೆ ಇಟ್ಟಿರುವ ಹೆಸರು ವಿಶೇಷವಾಗಿದ್ದು, ಈ ಏಡಿಯನ್ನು ಗುರುತು ಮಾಡಿರುವ ಗೋಪಾಲಕೃಷ್ಣ ಹೆಗಡೆಯವರ ಮಗಳ ಹೆಸರು ಬಾಂಧವ್ಯ ಹೆಗಡೆಯವರ ಹೆಸರೇ ಈ ಏಡಿಗಿರಿಸಲಾಗಿದೆ. ಬಾಂಧವ್ಯ ಬಾರೆಯ ಸರ್ಕಾರಿ ಶಾಲೆಯಲ್ಲಿ ಐದನೇ ತರಗತಿ ಓದುತ್ತಿದ್ದು, ಅವರದ್ದೇ ತೋಟದಲ್ಲಿ ಈ ಏಡಿ ಪತ್ತೆಯಾಗಿರುವ ಕಾರಣ ಅವರ ಮಗಳ ಹೆಸರನ್ನೇ ಏಡಿಗೆ ನಾಮಕರಣ ಮಾಡಲಾಗಿದೆ.

ನಿಸರ್ಗ ತಜ್ಞ ಗೋಪಾಲಕೃಷ್ಣ ಹೆಗಡೆಯವರ ಯಲ್ಲಾಪುರ ತಾಲೂಕಿನ ಬಾರೆಯಲ್ಲಿರುವ ತೋಟದಲ್ಲಿ ಈ ಏಡಿ ಪತ್ತೆಯಾಗಿದ್ದು, ವೇಲಾ ಕುಲಕ್ಕೆ ಸೇರಿದ ನಾಲ್ಕನೇ ಪ್ರಭೇದ ಇದಾಗಿದೆ. ವೇಲಾ ಕುಲದ ಕರ್ಲಿ, ಪುಲ್ವಿನಾಟ, ವಿರೂಪ ಎಂಬ ಮೂರೂ ಪ್ರಭೇದಗಳು ಕೇರಳದ ಕರಾವಳಿಯಲ್ಲಿ ಈ ಮೊದಲು ಪತ್ತೆಯಾಗಿದ್ದು, ನಾಲ್ಕನೇ ಪ್ರಭೇದ ಈ ವೇಲಾ ಬಾಂಧವ್ಯ ಆಗಿದೆ.

ಹಳದಿ ಮತ್ತು ಕೇಸರಿ ಮಿಶ್ರಿತ ಮೈಬಣ್ಣದ ಈ ಏಡಿಯು ಮಳೆಗಾಲದಲ್ಲಿ ತೋಟ, ಗದ್ದೆಗಳಲ್ಲಿ ಕಾಣಸಿಗುತ್ತವೆ. ಸಮತಟ್ಟಾದ ಜಾಗದ ಮಣ್ಣಿನಲ್ಲಿ ಸುಮಾರು ಒಂದರಿಂದ ಒಂದೂವರೆ ಅಡಿಯಷ್ಟು ಆಳದಲ್ಲಿ ರಂಧ್ರ‌ ಕೊರೆದು ಇದು ವಾಸ ಮಾಡುತ್ತದೆ. ಸುಮಾರು ನಾಲ್ಕು ಇಂಚು ಅಗಲ, ಮೂರೂವರೆ ಇಂಚು ಉದ್ದವಿರುವ ಈ ಏಡಿಯ ತಲೆಯಿಂದ ಬೆನ್ನಿನ ಮೇಲೆ ಕಪ್ಪು ಬಣ್ಣದ ಪತಂಗದಂಥ ಆಕಾರವಿದೆ.

ಈ ಬಗ್ಗೆ ಮಾತನಾಡಿದ ಗೋಪಾಲಕೃಷ್ಣ ಹೆಗಡೆ, ಈ ಏಡಿ ಮಳೆಗಾಲ ಶುರುವಾಗಿ ಮೊದಲ 15- 20 ದಿನಗಳಲ್ಲಿ ಕಾಣಿಸಿಕೊಳ್ಳುತ್ತವೆ. ಈ ಏಡಿಯನ್ನ ಆಹಾರಕ್ಕಾಗಿಯೂ ಬೇಟೆಯಾಡಲಾಗುತ್ತದೆ. ಹೀಗಾಗಿ ಪ್ರಭೇದವನ್ನ ಸಂರಕ್ಷಿಸುವ ಕಾರ್ಯವೂ ಆಗಬೇಕಿದೆ ಎನ್ನುವ ಅವರು, ಸದ್ಯ ನಮ್ಮ ತಂಡ ಈ ಹೊಸ ಪ್ರಭೇದದ ಏಡಿಯನ್ನ ಪತ್ತೆ ಮಾಡಿರುವ ವರದಿ ನ್ಯೂಜಿಲೆಂಡ್ ನ ಸೈಂಟಿಫಿಕ್ ಜರ್ನಲ್ ಝೂಟ್ಯಾಕ್ಸಾದಲ್ಲಿ ಪ್ರಕಟವಾಗಿದ್ದು, ಇನ್ನಷ್ಟು ಅಧ್ಯಯನ ನಡೆಯಬೇಕಿದೆ ಎಂದು ತಿಳಿಸಿದ್ದಾರೆ.

Leave A Reply

Your email address will not be published.