Pension scheme: ಸರಕಾರದಿಂದ ಮತ್ತೊಂದು ಪಿಂಚಣಿ ಯೋಜನೆ ಜಾರಿಗೆ !ಏನಿದರ ಪ್ರಯೋಜನ?
ನಿವೃತ್ತಿಯ ನಂತರದ ಜೀವನಕ್ಕಾಗಿ ಹೂಡಿಕೆ ಮಾಡಲು ಬಯಸುವವರಿಗೆ ಇರುವ ಉತ್ತಮ ಆಯ್ಕೆಗಳಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ ಒಂದಾಗಿದ್ದು, ಉದ್ಯೋಗವನ್ನು ಆರಂಭಿಸಿದ ತಕ್ಷಣ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ, ನಿವೃತ್ತಿಯ ಸಮಯದಲ್ಲಿ ದೊಡ್ಡ ಮೊತ್ತವನ್ನು ಪಡೆಯಬಹುದು.ಭಾರತ ಸರ್ಕಾರವು ತನ್ನ ನಾಗರಿಕರಿಗೆ 2003 ರಲ್ಲಿ ಹೊಸ ಪಿಂಚಣಿ ಯೋಜನೆಯನ್ನು ಪರಿಚಯಿಸಿದ್ದು, ಈ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ 2004 ರಲ್ಲಿ ಜಾರಿಗೆ ತರಲಾಗಿದೆ.
ಹೊಸ ಪಿಂಚಣಿ ಯೋಜನೆಯನ್ನು (ಎನ್ಪಿಎಸ್) ಸ್ಥಗಿತಗೊಳಿಸಿ ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವಂತೆ ದೇಶಾದ್ಯಂತ ನೌಕರರು ಅನೇಕ ದಿನಗಳಿಂದ ಬೇಡಿಕೆ ಇಡುತ್ತಿರುವುದಲ್ಲದೆ ಒತ್ತಡ ಕೂಡ ಹೇರಿದ್ದಾರೆ. ಸದ್ಯ ಕಾಂಗ್ರೆಸ್ ಸರ್ಕಾರವಿರುವ ಕೆಲವು ರಾಜ್ಯಗಳು ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವುದಾಗಿ ಘೋಷಿಸಿವೆ. ಛತ್ತೀಸ್ಗಢ, ರಾಜಸ್ಥಾನ, ಹಿಮಾಚಲ ಪ್ರದೇಶ ಮತ್ತು ಪಂಜಾಬ್ನಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳು ಹಳೆಯ ಪಿಂಚಣಿ ಜಾರಿಗೊಳಿಸುವುದಾಗಿ ಆಶ್ವಾಸನೆ ನೀಡುತ್ತಿದ್ದು, ಸದ್ಯ ಈ ಕುರಿತು ಆರ್ ಬಿಐ ಪ್ರತಿಕ್ರಿಯೆ ನೀಡಿದ್ದು ಕಷ್ಟ ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು, ಹಳೆಯ ಪಿಂಚಣಿಯನ್ನು ಒಂದು ವೇಳೆ ಜಾರಿಗೊಳಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಿಸಬೇಕಾಗಬಹುದು ಎಂಬ ಎಚ್ಚರಿಕೆಯನ್ನ ಆರ್ ಬಿಐ ನೀಡಿದೆ. ಈ ನಡುವೆ ಕೂಡ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸರ್ಕಾರ ಹೊಸ ಪಿಂಚಣಿ ಯೋಜನೆ ಜಾರಿಗೆ ತರುವ ಸಿದ್ಧತೆ ನಡೆಸುತ್ತಿದೆ.
ಆಂಧ್ರ ಸರ್ಕಾರ ಈ ಹೊಸ ಯೋಜನೆಗೆ ಗ್ಯಾರಂಟೀಡ್ ಪೆನ್ಶನ್ ಸ್ಕೀಮ್ ಎಂದು ನಾಮಕರಣ ಮಾಡಿದ್ದು, ಈ ಪಿಂಚಣಿ ಯೋಜನೆಯಲ್ಲಿ ಹೊಸ ಪಿಂಚಣಿ ಮತ್ತು ಹಳೆ ಪಿಂಚಣಿ ಯೋಜನೆ ಎರಡರ ನಿಬಂಧನೆಗಳನ್ನು ಸೇರಿಸಲಾಗಿದೆ. ಆದರೆ ಈ ಯೋಜನೆಯ ಕುರಿತಂತೆ ಹಣಕಾಸು ಸಚಿವಾಲಯಕ್ಕೆ ಯಾವುದೇ ಪ್ರಸ್ತಾವನೆಯನ್ನು ರವಾನೆ ಮಾಡಿಲ್ಲ ಎನ್ನಲಾಗಿದ್ದು, ಆದರೆ, ಸರ್ಕಾರ ಈ ದಿಸೆಯಲ್ಲಿ ಕಾರ್ಯ ಪ್ರವೃತ್ತವಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಅಂದರೆ ಹೊಸ ಪಿಂಚಣಿ ವ್ಯವಸ್ಥೆಯಲ್ಲಿ ದೀರ್ಘಾವಧಿಯ ಹೂಡಿಕೆ ಯೋಜನೆ ಅಡಿಯಲ್ಲಿ, ನಿವೃತ್ತಿಯ ಬಳಿಕ , ಉದ್ಯೋಗಿ ಒಂದೇ ಬಾರಿಗೆ ದೊಡ್ಡ ಮೊತ್ತದ ಹಣವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಹೂಡಿಕೆ ಮಾಡುವ ವ್ಯಕ್ತಿಗೆ 80-CCD (1B) ಅಡಿಯಲ್ಲಿ 50,000 ರೂಪಾಯಿ ರಿಯಾಯಿತಿ ಲಭ್ಯವಾಗುತ್ತದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80-ಸಿ ಅಡಿಯಲ್ಲಿ 1.5 ಲಕ್ಷದವರೆಗೆ ರಿಯಾಯಿತಿ ದೊರೆಯಲಿದೆ.
ಗ್ಯಾರಂಟೀಡ್ ಪೆನ್ಶನ್ ಸ್ಕೀಮ್ ಅಥವಾ ಜಿಪಿಎಸ್ ಅಡಿಯಲ್ಲಿ, ಉದ್ಯೋಗಿ ತನ್ನ ಮೂಲ ವೇತನದ 10 ಪ್ರತಿಶತವನ್ನು ಪ್ರತಿ ತಿಂಗಳು ಠೇವಣಿ ಮಾಡಿದ್ದಲ್ಲಿ ನಿವೃತ್ತಿಯ ಬಳಿಕ ವೇತನದ 33 ಪ್ರತಿಶತವನ್ನು ಪಿಂಚಣಿಯಾಗಿ ಪಡೆಯಬಹುದು. 10 ಶೇ.ದಷ್ಟನ್ನು ರಾಜ್ಯ ಸರ್ಕಾರವು ಜಿಪಿಎಸ್ನಲ್ಲಿ ಠೇವಣಿ ಮಾಡಲಿದೆ. ಇದರಲ್ಲಿ ಎರಡನೇ ನಿಬಂಧನೆಯು ಉದ್ಯೋಗಿ ತನ್ನ ವೇತನದ ಶೇಕಡಾ 14 ರಷ್ಟು ಠೇವಣಿ ಇಟ್ಟರೆ, ನಿವೃತ್ತಿಯ ನಂತರ ಶೇಕಡಾ 40 ರಷ್ಟು ಪಿಂಚಣಿ ಪಡೆಯುವ ಸಂಭವವಿದೆ.
ಆಂಧ್ರಪ್ರದೇಶದಲ್ಲಿ ಚರ್ಚೆಯಲ್ಲಿರುವ ಈ ಪಿಂಚಣಿ ಯೋಜನೆ ಜಾರಿಗೆ ಸದ್ಯ ಕೇಂದ್ರ ಸರ್ಕಾರ ಯಾವುದೇ ಅನುಮತಿ ನೀಡಿಲ್ಲ ಎನ್ನಲಾಗಿದ್ದು, ಕೇಂದ್ರ ಸರ್ಕಾರದ ಅಧಿಕಾರಿಗಳು ಕೂಡ ಈ ಪಿಂಚಣಿ ಯೋಜನೆಯ ಕುರಿತು ಕೌತುಕದಿಂದ ಎದುರು ನೋಡುತ್ತಿದೆ. ಅಭಿಪ್ರಾಯಪಟ್ಟಿದ್ದಾರೆ. ಇದರ ಜೊತೆಗೆ ಈ ಕುರಿತು ಹೆಚ್ಚಿನ ಮಾಹಿತಿಯ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು, ಹಳೆಯ ಪಿಂಚಣಿ ಯೋಜನೆಯಡಿ, ಉದ್ಯೋಗಿ ಕೊನೆಯ ವೇತನದ 50 ಪ್ರತಿಶತದಷ್ಟನ್ನು ಪಿಂಚಣಿ ರೂಪದಲ್ಲಿ ಪಡೆಯುತ್ತಿದ್ದು ಪಿಂಚಣಿಯಾಗಿ ಪಡೆಯುವ ಸಂಪೂರ್ಣ ಮೊತ್ತವನ್ನು ಸರ್ಕಾರವೇ ಪಾವತಿ ಮಾಡುತ್ತದೆ ಎನ್ನಲಾಗಿದೆ.