ಕಿಚ್ಚ ಸುದೀಪ್ – ಡಿಕೆಶಿ ಮುಚ್ಚಿದ ಬಾಗಿಲ ಗುಪ್ತ್ ಗುಪ್ತ್ ಮಾತುಕತೆ : ಕಿಚ್ಚ ಕಾಂಗ್ರೆಸ್ ಸೇರೋದು ಪಕ್ಕಾ ? – Photo Viral !
ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಉಳಿದಿದ್ದು, ಚುನಾವಣಾ ಕಣದಲ್ಲಿ ಹೊಸ ಹೊಸ ಆಟಗಾರರು ಪ್ರತ್ಯಕ್ಷವಾಗುತ್ತಿದ್ದಾರೆ. ಆಡಳಿತ ನಡೆಸುತ್ತಿರುವ ಬಿಜೆಪಿ ಒಂದು ಕಡೆ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಮತ್ತೊಂದು ಕಡೆ ಕಾಂಗ್ರೆಸ್ ಶತಾಯಗತಾಯ ಬಿಜೆಪಿಯ ಕೈಯಿಂದ ಅಧಿಕಾರವನ್ನು ಕಸಿದುಕೊಳ್ಳಲು ಹೊಂಚು ಹಾಕಿ ಕುಳಿತಿದೆ. ಯಥಾಪ್ರಕಾರ ಜೆಡಿಎಸ್ ಮ್ಯಾಜಿಕ್ ನಂಬರ್ ಅನ್ನು ಗಳಿಸಿಕೊಂಡು ಕಿಂಗ್ ಮೇಕರ್ ಆಗಲು ಹವಣಿಸುತ್ತಿದೆ.
ಬಿಜೆಪಿಯ ಕೈಯಿಂದ ಅಧಿಕಾರವನ್ನು ಕಿತ್ತುಕೊಳ್ಳಲು ಹೊರಟ ಕಾಂಗ್ರೆಸ್ ತನ್ನ ಪರ ಪ್ರಚಾರ ಮಾಡಲು ಮತ್ತು ಒಂದಷ್ಟು ಮತಗಳನ್ನು ಸೆಳೆಯಲು ನಟ ಕಿಚ್ಚ ಸುದೀಪ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎನ್ನುವ ಮಾತುಗಳು ಹಲವು ತಿಂಗಳುಗಳಿಂದ ಗುಸು-ಗುಸು ಸುದ್ದಿಯಾಗಿ ಹರಡುತ್ತಿದೆ. ಆದರೆ ಇದೀಗ ಅದಕ್ಕೆ ಬಲವಾದ ಮತ್ತು ಸ್ಪಷ್ಟವಾದ ಸಾಕ್ಷಿಗಳು ಲಭ್ಯವಾಗುತ್ತಿದೆ.
ನಿನ್ನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ನಟ ಕಿಚ್ಚ ಸುದೀಪ್ ಭೇಟಿಯಾಗಿದ್ದರು. ಕರ್ನಾಟಕದ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಕಿಚ್ಚ ಸುದೀಪ್ ಅವರು ಮುಚ್ಚಿದ ಬಾಗಿಲುಗಳ ಒಳಗೆ ಹಲವು ಗಂಟೆಗಳ ಸಮಲೋಚನೆ ನಡೆಸಿದ್ದಾರೆ. ಆನಂತರ ಅವರಿಬ್ಬರೂ ಒಟ್ಟಿಗೆ ಭೋಜನ ಸವಿದಿದ್ದಾರೆ. ಅವರಿಬ್ಬರ ಸಮ್ಮಿಲನದ ಈ ಫೋಟೋ ರಾಜ್ಯ ರಾಜಕೀಯದಲ್ಲಿ ಸಂಜನಾ ಸೃಷ್ಟಿಸಿದೆ. ಕಿಚ್ಚ ಸುದೀಪ್ ಅವರು ಕಾಂಗ್ರೆಸ್ ಸೇರುವುದು ಖಚಿತ ಎಂದು ಒಂದು ವರ್ಗ ಬಲವಾಗಿ ಹೇಳುತ್ತಿದ್ದರೆ, ಇನ್ನೊಂದಡೆ ಕಾಂಗ್ರೆಸ್ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಬದಲಿಗೆ ನಿನ್ನ ಭೇಟಿ ಒಂದು ಸೌಹಾರ್ದಕರ ಭೇಟಿ ಎಂದಿದೆ ಕಾಂಗ್ರೆಸ್ ಮೂಲಗಳು.
ಕಿಚ್ಚ ಕೈ ಪಾಳಯಕ್ಕೆ ಎಂಟ್ರಿ ಪಕ್ಕಾ ?
ಈ ಹಿಂದೆ ಕೂಡಾ ಕಿಚ್ಚ ಸುದೀಪ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಆಮೇಲೆ ಸ್ವಲ್ಪ ಸಮಯದ ನಂತರ ಆ ಸುದ್ದಿಗಳು ತಣ್ಣಗಾಗಿದ್ದವು. ಇದೀಗ ಖಾಸಗಿ ಹೋಟೆಲ್ ನಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಕಿಚ್ಚ ಸುದೀಪ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಒಟ್ಟಿಗೆ ಊಟ ಮಾಡಿದ್ದಾರೆ. ಈ ವೇಳೆ ಮಹತ್ವದ ಮಾತುಕತೆಗಳು ನಡೆದಿವೆ. ಕಿಚ್ಚ ಸುದೀಪ್ ಅವರು ಕಾಂಗ್ರೆಸ್ ಅನ್ನು ಸೇರುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ಒಂದು ವೇಳೆ ಕಾಂಗ್ರೆಸ್ ಸೇರದೆ ಇದ್ದರೂ, ಕಾಂಗ್ರೆಸ್ ನ ಚುನಾವಣಾ ಪ್ರಚಾರ ಸಭೆಗಳಿಗೆ ಬರುವಂತೆ ಕಿಚ್ಚ ಸುದೀಪ್ ಗೆ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸುದೀಪ್ ಅವರು ಪೂರಕವಾಗಿ ಸ್ಪಂದಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಕಿಚ್ಚ ಸುದೀಪ್ ಅವರು ಕಾಂಗ್ರೆಸ್ಸಿಗೆ ಬಂದರೆ ಯಾರಿಗೆ ಲಾಭ ಯಾರಿಗೆ ನಷ್ಟ ?
ಒಂದು ವೇಳೆ ಕಾಂಗ್ರೆಸ್ ಗೆ ಸುದೀಪ್ ಆಗಮಿಸಿದ ಪಕ್ಷದಲ್ಲಿ
ತನ್ನತ್ತ ವಾಲ್ಮೀಕಿ ಮತಗಳನ್ನು ಸೆಳೆಯಲು ಅನುಕೂಲವಾಗುತ್ತದೆ ಎಂಬ ಲೆಕ್ಕಚಾರದಲ್ಲಿ ಕಾಂಗ್ರೆಸ್ ಇದೆ. ಸುದೀಪ್ ಅವರನ್ನು ಕಾಂಗ್ರೆಸ್ ಗೆ ಆಹ್ವಾನಿಸಲಾಗಿದೆ ಎನ್ನಲಾಗುತ್ತಿದೆ. ಆದರೆ ಕಿಚ್ಚನ ನಿರ್ಧಾರ ಕುತೂಹಲ ಮೂಡಿಸಿದೆ. ಒಂದು ವೇಳೆ ಕಿಚ್ಚ ಸುದೀಪ್ ಅವರು ಕಾಂಗ್ರೆಸ್ ಪಾಳಯಕ್ಕೆ ಸೇರಿದರೆ ಅದರಿಂದ ಕಾಂಗ್ರೆಸ್ ಪಕ್ಷಕ್ಕೆ ಲಾಭ ಇದೆ. ಆದ್ರೆ ಇದರಿಂದ ಸುದೀಪ್ ಅವರಿಗೆ ದೊಡ್ಡ ಮಟ್ಟದ ನಷ್ಟ ಆಗಲಿದೆ. ಕಿಚ್ಚ ಸುದೀಪ್ ಅವರನ್ನು ಎಲ್ಲಾ ಪಕ್ಷದ ಎಲ್ಲಾ ರಾಜಕೀಯ ಐಡಿಯಾಲಜಿ ಇರುವ ಜನರು ಪ್ರೀತಿಸುತ್ತಾರೆ. ಆದರೆ ರಾಜಕೀಯ ಬೇರೆ, ಸಿನಿಮಾ ಅಭಿಮಾನ ಬೇರೆ ಬೇರೆ ಎಂಬುದನ್ನು ಕರ್ನಾಟಕದ ಮತದಾರ ಆಗಾಗ ತೀರ್ಪು ನೀಡಿದ್ದಾನೆ. ಆಂಧ್ರ ಮತ್ತು ತಮಿಳುನಾಡಿನಲ್ಲಿ ಸಿನಿಮಾ ನಟರನ್ನು ಆರಾಧ್ಯ ದೇವರಂತೆ ಪೂಜಿಸಿಕೊಂಡು ಬಂದು ಅಧಿಕಾರಕ್ಕೆ ಕಳಿಸಿದ ಹಾಗೆ ಕರ್ನಾಟಕದಲ್ಲಿ ಸಾಧ್ಯವಿಲ್ಲ. ಅಭಿಮಾನಿ ನಟನನ್ನು ಕನ್ನಡಿಗರು ಸಾರಾಸಗಟಾಗಿ ಸ್ವೀಕಾರಮಾಡುತ್ತಾರೆ ಎನ್ನುವ ನಂಬಿಕೆ ಯಾರಿಗೂ ಇಲ್ಲ. ಹಲವು ಅಂಶಗಳ ಮೇಲೆ ನಡೆಯುವ ಚುನಾವಣೆಯಲ್ಲಿ ಮತ್ತೆ ಮೋದಿ ಅಲೆ ಎದ್ದು ಕಿಚ್ಚ ಸುದೀಪ್ ಗೆ ಹಿನ್ನೆಡೆಯಾದರೆ ಸುದೀಪ್ ತೀವ್ರ ಮುಖಭಂಗ ಅನುಭವಿಸಲಿದ್ದಾರೆ. ಆಗ ಈಗಿರುವ ಸ್ಟಾರ್ ಪಟ್ಟಕ್ಕೆ ಸಂಚಕಾರ ಬಂದರೂ ಬಂದೀತು ಎನ್ನುವುದು ಒಂದು ತರ್ಕ.