Raw Papaya : ಹಸಿ ಪಪ್ಪಾಯ ಸೇವಿಸಿದರೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ಪಪ್ಪಾಯಿ ಅಥವಾ ಪರಂಗಿ ಹಣ್ಣು ಎಲ್ಲರಿಗೂ ಚಿರಪರಿಚಿತ. ಹಾಗೆಯೇ ಇದರ ಆರೋಗ್ಯ ಲಾಭಗಳು ಅಪರಿಮಿತ. ಪಪ್ಪಾಯ ಹಣ್ಣು ಹೇರಳವಾದ ವಿಟಮಿನ್‌ಗಳಿಂದ ಸಮೃದ್ಧವಾಗಿರುತ್ತದೆ. ಅದೇ ರೀತಿ ಹಸಿ ಪಪ್ಪಾಯಿಯು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಪಪ್ಪಾಯ ಕಾಯಿಯಲ್ಲಿ ಪೊಟ್ಯಾಸಿಯಮ್, ಫೈಬರ್, ಮೆಗ್ನೀಸಿಯಮ್ ಮತ್ತು ಕನಿಷ್ಠ ಕ್ಯಾಲೋರಿಗಳ ಜೊತೆಗೆ ವಿಟಮಿನ್ ಸಿ, ಬಿ ಮತ್ತು ಇ ನಂತಹ ಪ್ರಮುಖ ಪೋಷಕಾಂಶಗಳು ಅಡಕವಾಗಿದೆ. ಪಪ್ಪಾಯಿ ಕಾಯಿಯನ್ನು ಸೇವಿಸುವುದರಿಂದ ಈ ಎಲ್ಲಾ ಆರೋಗ್ಯ ಲಾಭಗಳು ನಿಮ್ಮದಾಗುತ್ತದೆ. ಹಾಗಾದರೆ, ಇಲ್ಲಿದೆ ನೋಡಿ ಪಪ್ಪಾಯ ಕಾಯಿಯ ಅದ್ಭುತ ಆರೋಗ್ಯ ಖಜಾನೆಗಳು.
ಜೀರ್ಣಕ್ರಿಯೆ ಹೆಚ್ಚಿಸಲು:- ಇಂದಿನ ಆಧುನಿಕ ಜೀವನಶೈಲಿಯಿಂದಾಗಿ ಹಲವಾರು ಮಂದಿ ಜೀರ್ಣಕ್ರಿಯೆ, ಹೊಟ್ಟೆಯ ಸಮಸ್ಯೆಗೆ ಸಂಬಂದಿಸಿದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹಾಗಾಗಿ, ಹಸಿ ಪಪ್ಪಾಯಿಯನ್ನು ತಿನ್ನುವುದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ನಿಮ್ಮ ದೇಹವನ್ನು ಸಂಪೂರ್ಣವಾಗಿ ಶುಚಿಗೊಳಿಸುತ್ತದೆ. ಇದು ಪಪೈನ್ ನಂತಹ ಕಿಣ್ವಗಳನ್ನು ಹೊಂದಿರುತ್ತದೆ, ಇದು ಜೀರ್ಣಕ್ರಿಯೆಗಾಗಿ ಗ್ಯಾಸ್ಟ್ರಿಕ್ ಆಮ್ಲಗಳ ಸ್ರವಿಸುವಿಕೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಈ ಪೋಷಕಾಂಶವು ನಮ್ಮ ಕರುಳಿನ ಬ್ಯಾಕ್ಟೀರಿಯಾಕ್ಕೆ ಸಹಾಯ ಮಾಡುತ್ತದೆ ಮತ್ತು ಹೊಟ್ಟೆಯನ್ನು ಟಾಕ್ಸಿನ್ ಮುಕ್ತವಾಗಿಡುತ್ತದೆ.
ತೂಕ ಇಳಿಕೆಗೆ:- ಜನರ ಜಂಜಾಟದ ಜೀವನದಲ್ಲಿ ಕೆಲವರು ಅತಿಯಾದ ತೂಕವನ್ನು ಪಡೆಯುತ್ತಾರೆ. ಹಸಿ ಪಪ್ಪಾಯಿಯು ಸಕ್ರಿಯ ಕಿಣ್ವಗಳ ಹೆಚ್ಚಿನ ಸಾಂದ್ರತೆಯನ್ನು ಹೊಂದಿರುತ್ತದೆ. ಪಪೈನ್ ಮತ್ತು ಚೈಮೊಪೈನ್ ಪಪ್ಪಾಯಿಯಲ್ಲಿ ಕಂಡುಬರುವ ಎರಡು ಶಕ್ತಿಶಾಲಿ ಕಿಣ್ವಗಳಾಗಿವೆ. ಈ ಎರಡೂ ಕಿಣ್ವಗಳು ಆಹಾರದಲ್ಲಿ ಕಂಡುಬರುವ ಕೊಬ್ಬುಗಳು, ಪ್ರೋಟೀನ್ಗಳು ಮತ್ತು ಕಾರ್ಬೋಹೈಡ್ರೇಟ್ಗಳ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ದೇಹದಲ್ಲಿನ ಅನಗತ್ಯ ಕೊಬ್ಬನ್ನು ಕಡಿಮೆ ಮಾಡಿ ದೇಹದ ತೂಕ ಇಳಿಕೆಗೆ ಸಹಕಾರಿಯಾಗಿದೆ. ಇದರ ಜೊತೆಗೆ ಹೊಸ ಜೀವಕೋಶಗಳ ಅಭಿವೃದ್ಧಿಗೆ, ಚರ್ಮದ ಸಮಸ್ಯೆಗಳು ಹಾಗೂ ಗಂಟುಗಳ ನೋವನ್ನು ಶಮನಗೊಳಿಸಲು ಸಹಕಾರಿಯಾಗಿದೆ.
ಸೋಂಕನ್ನು ಶಮನಗೊಳಿಸುತ್ತದೆ : ಹಸಿ ಪಪ್ಪಾಯಿಯು ಚರ್ಮ ಮತ್ತು ದೇಹದ ಉರಿಯೂತದ ಸ್ಥಿತಿಯನ್ನು ಕಡಿಮೆ ಮಾಡುತ್ತದೆ. ಇದು ಧೂಮಪಾನಿಗಳ ಶ್ವಾಸಕೋಶಗಳು ಉರಿಯೂತದಿಂದ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ ಮುಟ್ಟಿನ ಸಮಯದಲ್ಲಿ ಕಾಡುವ ಸೆಳೆತವನ್ನು ಉಪಶಮನ ಮಾಡುತ್ತದೆ, ಗಂಟಲಿನ ಸೋಂಕುಗಳು ಮತ್ತು ಉಸಿರಾಟದ ಸೋಂಕುಗಳು ಸೇರಿದಂತೆ ದೇಹದಾದ್ಯಂತ ಉರಿಯೂತವನ್ನು ಕಡಿಮೆ ಮಾಡಲು ಉತ್ತಮ ಮದ್ದು ಎನ್ನಬಹುದು.
ಮಲಬದ್ಧತೆ:- ಆಹಾರದಲ್ಲಿ ಬದಲಾವಣೆಯಾದರೆ ಕೆಲವೊಮ್ಮೆ ಮಲಬದ್ಧತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಪಪ್ಪಾಯಿಯ ಕಾಯಿಯಲ್ಲಿ ನಾರಿನಂಶವಿದ್ದು ಮಲಬದ್ಧತೆಯನ್ನು ತಡೆಯುತ್ತದೆ. ಪಪ್ಪಾಯಿಯು ಕರುಳಿನ ಚಲನೆಯನ್ನು ನಿಯಂತ್ರಿಸುತ್ತದೆ ಏಕೆಂದರೆ ಇದು ಪರಾವಲಂಬಿ ಮತ್ತು ಅಮೀಬಿಕ್ ವಿರೋಧಿ ಸ್ವಭಾವವನ್ನು ಹೊಂದಿದೆ . ಇದರಿಂದಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಕೂಡ ಕಾಡುವುದಿಲ್ಲ.
ಗಾಯ ನಿವಾರಿಸಲು:- ಪಪ್ಪಾಯ ಕಾಯಿಗಳು ಫೈಟೊಕೆಮಿಕಲ್ ಘಟಕಗಳು ಮತ್ತು ಇಮ್ಯುನೊಮಾಡ್ಯುಲೇಟರಿ ಗುಣಲಕ್ಷಣಗಳನ್ನು ಹೊಂದಿವೆ. ಆದ್ದರಿಂದ, ಹಸಿರು ಪಪ್ಪಾಯಿಯ ಸಾರಗಳು ಚರ್ಮದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಗಾಯವನ್ನು ಬೇಗನೆ ಗುಣಪಡಿಸಲು ಸಹಕಾರಿಯಾಗಿದ್ದು, ಗಾಯಕ್ಕೆ ಸೋಂಕು ತಗುಲದಂತೆ ತಡೆಯುತ್ತದೆ. ಪಪ್ಪಾಯಿಯಲ್ಲಿ ಪ್ರೋಟಿಯೇಸ್ ಕಿಣ್ವಗಳು ಹೇರಳವಾಗಿ ಕಂಡುಬರುವುದರಿಂದ, ಹಣ್ಣುಗಳು ಡಿ-ಸ್ಲೋಲಿಂಗ್ ಗುಣಲಕ್ಷಣಗಳನ್ನು ಹೊಂದಿದ್ದು ಅದು ಗಾಯಗಳನ್ನು ತ್ವರಿತವಾಗಿ ಗುಣಪಡಿಸುತ್ತದೆ. ಇದರ ಜೊತೆಗೆ, ಹಸಿ ಪಪ್ಪಾಯಿಯು ಮೆಗ್ನೀಸಿಯಮ್, ಪೊಟ್ಯಾಸಿಯಮ್, ವಿಟಮಿನ್ ಎ, ಸಿ, ಇ ಮತ್ತು ಬಿ ನಂತಹ ಅಗತ್ಯವಾದ ಪೋಷಕಾಂಶಗಳನ್ನು ಹೊಂದಿರುತ್ತದೆ, ಇದನ್ನು ವಿವಿಧ ಚರ್ಮದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಬಳಸಬಹುದು.
ಕೂದಲ ಬೆಳವಣಿಗೆ:- ಪಪ್ಪಾಯ ಖನಿಜಗಳು,ಜೀವಸ್ವತಗಳು ಮತ್ತು ಕಿಣ್ವಗಳ ಒಂದು ಉತ್ತಮ ಮೂಲವಾಗಿದೆ.ಇದು ಕೂದಲು ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಅಲ್ಲದೇ ಕೂದಲನ್ನು ಹೊಳಪಿನಂತೆ ಮಾಡುತ್ತದೆ.