ಅಜ್ಮೀರ್ ಷರೀಫ್ ದರ್ಗಾದಲ್ಲಿ ವಿವಾದತ್ಮಕ ಘೋಷಣೆ ಆರೋಪ
ರಾಜಸ್ಥಾನದ ಅಜ್ಮೀರ್ನಲ್ಲಿರುವ ಪವಿತ್ರ ಸೂಫಿ ದರ್ಗಾವಾಗಿರುವ ಅಜ್ಮೀರ್ ಷರೀಫ್ ದರ್ಗಾದಲ್ಲಿ ಉರುಸ್ ಸಂಧರ್ಭದಲ್ಲಿ ಹೊಡೆದಾಟ ನಡೆದಿದೆ ಎಂದು ತಿಳಿದು ಬಂದಿದೆ. ವಿವಾದಾತ್ಮಕ ಘೋಷಣೆಯನ್ನು ಕೂಗಿರುವುದರಿಂದ ಘರ್ಷಣೆ ಸಂಭವಿಸಿದ್ದು, ಈ ಘರ್ಷಣೆಯಲ್ಲಿ ಹಲವರಿಗೆ ಗಾಯಗಳಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮಾಹಿತಿಯ ಪ್ರಕಾರ, ಖ್ವಾಜಾ ಮೊಯಿನುದ್ದೀನ್ ಚಿಶ್ತಿಯ ದರ್ಗಾದಲ್ಲಿ 811 ನೇ ಉರುಸ್ ಉತ್ಸವ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಬರೇಲ್ವಿ ಸಮುದಾಯದ ಕೆಲವರು ಅಜ್ಮೀರ್ ಷರೀಫ್ ದರ್ಗಾದೊಳಗೆ ಘೋಷಣೆಗಳನ್ನು ಕೂಗಿದ್ದಾರೆ ಎನ್ನಲಾಗಿದೆ. ಇದು ದರ್ಗಾದ ಖಾದೀಮ್ ಗಳ ಆಕ್ರೋಶಕ್ಕೆ ಕಾರಣವಾಯಿತಲ್ಲದೇ, ಇದರ ಪರಿಣಾಮ ಘೋಷಣೆ ಕೂಗುತ್ತಿದ್ದವರೊಂದಿಗೆ ವಾಗ್ವಾದ ನಡೆದಿದೆ. ಪರಿಸ್ಥಿತಿಯನ್ನು ಸುಧಾರಿಸಲು ಪೊಲೀಸರ ಮಧ್ಯಪ್ರವೇಶದಿಂದ ಸಾಧ್ಯವಾಯಿತು. ಘರ್ಷಣೆ ಆರಂಭವಾದ ತಕ್ಷಣ ದರ್ಗಾದ ಠಾಣಾಧಿಕಾರಿ ಅಮರ್ ಸಿಂಗ್ ಭಾಟಿ ಸ್ಥಳಕ್ಕೆ ಆಗಮಿಸಿ ಎರಡೂ ಕಡೆಯವರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
ಖಾದೀಮ್ ಗಳ ಆರೋಪದ ಪ್ರಕಾರ, ಬರೇಲ್ವಿ ಸಮುದಾಯದವರು ದರ್ಗಾದಲ್ಲಿ ಘೋಷಣೆಗಳನ್ನು ಕೂಗುತ್ತಿದ್ದರು. ಈ ಘೋಷಣೆಯನ್ನು ನಾವು ವಿರೋಧಿಸಿದ್ದೇವೆ ಎಂದಿದ್ದಾರೆ. ಇನ್ನೊಂದೆಡೆ, ಖಾದೀಮ್ ಗಳು ದರ್ಗಾದ ಜನ್ನತಿ ದರ್ವಾಜಾ ಬಳಿ ಘೋಷಣೆ ಕೂಗುತ್ತಿದ್ದವರ ಜತೆ ಘರ್ಷಣೆ ನಡೆಸಿದ್ದಾರೆ ಎಂದು ಕೂಡಾ ಹೇಳಲಾಗುತ್ತಿದೆ. ಈ ಹಿನ್ನಲೆ ಪೊಲೀಸ್ ಠಾಣೆಯಲ್ಲಿ ಯಾವುದೇ ರೀತಿಯ ದೂರನ್ನು ದಾಖಲಿಸಿಲ್ಲ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೊಡೆದಾಟದ ವಿಡಿಯೋ ಮಾತ್ರ ವೈರಲ್ ಆಗುತ್ತಿದ್ದು, ವೀಡಿಯೊದಲ್ಲಿ ದೊಡ್ಡ ಪ್ರಮಾಣದ ಸಂಖ್ಯೆಯಲ್ಲಿ ಜನರು ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದು ಕಂಡು ಬಂದಿದೆ.
ಪ್ರತಿ ವರ್ಷದಂತೆ ಈ ವರ್ಷವು ಕೂಡ ಅಜ್ಮೀರ್ ಷರೀಫ್ ದರ್ಗಾದಲ್ಲಿ ಪ್ರಸಿದ್ಧ ಸೂಫಿ ಸಂತರಲ್ಲಿ ಒಬ್ಬರಾದ ಚಿಶ್ತಿಯ ಪುಣ್ಯತಿಥಿಯಂದು ಉರುಸ್ ಅನ್ನು ಆಯೋಜಿಸಲಾಗುತ್ತದೆ. ಚಿಶ್ತಿಯನ್ನು ‘ಗರೀಬ್ ನವಾಜ್’ ಎಂಬ ಹೆಸರಿನಲ್ಲು ಕರೆಯುತ್ತಾರೆ. ಉರುಸ್ ಸಮಯದಲ್ಲಿ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಜ್ಮೀರ್ ಶರೀಫ್ ದರ್ಗಾಕ್ಕೆ ಆಗಮಿಸುತ್ತಾರೆ.