ಉಡುಪಿ Viral Video | ಬಾನೆತ್ತರಕ್ಕೆ ಚಿಮ್ಮಿದ ಸುಳಿಗಾಳಿ, ಪ್ರಾಕೃತಿಕ ವೈಚಿತ್ರ್ಯಕ್ಕೆ ಜನ ನಿಬ್ಬೆರಗು
ಅಪರೂಪದ ಪ್ರಾಕೃತಿಕ ವಿದ್ಯಮಾನ ಒಂದಕ್ಕೆ ಉಡುಪಿ ಜಿಲ್ಲೆ ಇವತ್ತು ಸಾಕ್ಷಿಯಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳದ ಗಾಂಧಿ ಮೈದಾನದಲ್ಲಿ ವಿಚಿತ್ರ ಸುಳಿಗಾಳಿ ಕಾಣಿಸಿಕೊಂಡಿದ್ದು ಅದು ಜನರ ಆಕರ್ಷಣೆಗೆ ಒಳಗಾಗಿತ್ತು. ಇದೀಗ ಅದರ ವಿಡಿಯೋ ವೈರಲ್ ಆಗಿದೆ.
ಮೈದಾನದ ಮಧ್ಯೆ ಧೂಳಿನ ಗುಂಪು ಕಟ್ಟಿಕೊಂಡು ಕಟ್ಟಿಕೊಂಡು ಗಿರ ಗಿರ್ರನೆ ಸುಳಿ ತಿರುಗಿದೆ. ಸುಳಿಗಾಳಿ ಈ ಬಾರಿ ವಿಚಿತ್ರವಾಗಿ ತಿರುಗುವ ವಿದ್ಯಮಾನ ಕಂಡು ಜನ ಆಶ್ಚರ್ಯದಿಂದ ನಿಂತಿ ನೋಡಿದ್ದಾರೆ.
ಕಾರ್ಕಳದ ಗಾಂಧಿ ಮೈದಾನದಲ್ಲಿ ಯುವಕರು ಕ್ರಿಕೆಟ್ ಆಡುತ್ತಿದ್ದರು.ಆಗ ಏಕಾಏಕಿ ಸುಳಿಗಾಳಿ ಎದ್ದಿದೆ. ಇದ್ದಕ್ಕಿದ್ದಂತೆ ಮೈದಾನದ ಮಧ್ಯೆಯೇ ಸುಳಿಗಾಳಿ ಕಾಣಿಸಿದ್ದು ಅಲ್ಲಿಂದ ಧೂಳಿನ ಸುರುಳಿ ಸುತ್ತುಲು ಪ್ರಾರಂಭವಾಗಿದೆ. ಸಾಮಾನ್ಯವಾಗಿ ಸುಳಿಗಾಳಿಯ ಎತ್ತರ ಕಡಿಮೆ ಇದ್ದರೆ, ಇವತ್ತು ಧೂಳಿನೊಂದಿಗೆ ಗಿರಕಿ ಸುತ್ತಿದ ಗಾಳಿ ಬಾನೆತ್ತರಕ್ಕೆ ಚಿಮ್ಮಲಾರಂಭಿಸಿದೆ. ತನ್ನ ಜತೆಗೆ ಮೈದಾನದಲ್ಲಿದ್ದ ಕಸವನ್ನಿ ಕೂಡಾ ಹೊತ್ತು ಗಾಳಿ ಸುಮಾರು ಇನ್ನೂರ ಐವತ್ತು ಅಡಿ ಎತ್ತರಕ್ಕೆ ಅನಕೊಂಡ ಸಿನಿಮಾದ ಹಾವಿನಂತೆ ಲಂಬವಾಗಿ ಮೇಲೇರಿದ್ದು ವಿಶೇಷ.
ಈ ಅತ್ಯಪರೂಪದ ಪ್ರಾಕೃತಿಕ ವೈಚಿತ್ರ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಅಲ್ಲಿ ಕ್ರಿಕೆಟ್ ಆಡುತ್ತಿದ್ದ ಹುಡುಗರು ಮತ್ತು ದಾರಿಹೋಕರು ತಮ್ಮ ಕೆಲಸ ಮರೆತು ನಿಂತು ಸುಳಿಗಾಳಿ ವೀಕ್ಷಿಸಿದರು. ಚಲಿಸುತ್ತಿದ್ದ ವಾಹನಗಳು ಅಲ್ಲೇ ರಸ್ತೆಯ ಬದಿಯಲ್ಲಿ ಪಾರ್ಕ್ ಮಾಡಿ ಈ ವಿದ್ಯಮಾನವನ್ನು ವೀಕ್ಷಿಸಿದರು.