ಈ ದಿನದಂದು ಭೂಮಿಯ ಸಮೀಪ ಬರಲಿದೆ ಧೂಮಕೇತು !
ಧೂಮಕೇತುವು ಗ್ರಹದ ಹಾಗೆಯೇ ಸೂರ್ಯನ ಸುತ್ತ ಚಲಿಸುವ ಶಿಲೆಯ ತುಣುಕು. ಈ ಕಾಯಗಳು ಹಿಮದ ಶಿಲೆಗಳಾಗಿರುತ್ತವೆ. 2020ರಲ್ಲಿ ಗೋಚರಿಸಿದ ನಿಯೋವೈಸ್ ಧೂಮಕೇತುವಿನ ಬಳಿಕ ಈಗ ಮತ್ತೊಂದು ಪ್ರಕಾಶಮಾನವಾದ ಧೂಮಕೇತುವೊಂದು ಸದ್ಯದಲ್ಲೇ ಭೂಮಿಯ ಸಮೀಪಕ್ಕೆ ಬರಲಿದೆ. ಸಾಮಾನ್ಯವಾಗಿ ಇವುಗಳು ದೀರ್ಘ ವೃತ್ತಾಕಾರದ ಕಕ್ಷೆಗಳಾಗಿರುತ್ತವೆ.
ಇದೀಗ ಸುಮಾರು 50 ಸಾವಿರ ವರ್ಷಗಳ ಕಕ್ಷಾವಧಿ ಹೊಂದಿರುವ ಹಸಿರು ಬಣ್ಣದ ಸಿ/2022 ಇ3 ಧೂಮಕೇತು ಫೆಬ್ರವರಿ 1ರಂದು ಭೂಮಿಯ ಅತೀ ಸಮೀಪಕ್ಕೆ ಬರಲಿದ್ದು ಬರಿಗಣ್ಣಿನಿಂದ ನೋಡಬಹುದಾಗಿದೆ ಎಂದು ಖಗೋಳ ತಜ್ಞ ಅತುಲ್ ಭಟ್ ತಿಳಿಸಿದ್ದಾರೆ.
ಸದ್ಯ ಕಕ್ಷೆಯು ಯಾವ ರೀತಿಯಲ್ಲಿ ರೂಪುಗೊಂಡಿದೆ ಎಂಬುದರ ಮೇಲೆ ಅವಲಂಬಿತವಾಗಿ ಧೂಮಕೇತುವನ್ನು ಆವರ್ತನೀಯ ಅಥವಾ ಆವರ್ತಕವಲ್ಲದ ಧೂಮಕೇತು ಎಂದು ವರ್ಗೀಕರಿಸಬಹುದಾಗಿದೆ.
ಹೌದು, ಸಿ/2022 ಇ3 ಧೂಮ ಕೇತುವು ಒಳ ಸೌರವ್ಯೂಹದಲ್ಲಿದ್ದು, ಜ.12 ರಂದು ಸೂರ್ಯನ ಸಮೀಪ ತನ್ನ ಚಲನೆಯನ್ನು ಪೂರ್ಣಗೊಳಿಸಿದೆ. ಅಂತೆಯೇ ತನ್ನ ಕಕ್ಷೆಯಲ್ಲಿ ಮರಳಿ ಹೋಗುವಾಗ ಭೂಮಿಯ ಸಮೀಪಕ್ಕೆ ಬರಲಿದ್ದು, ಫೆ.1ರಂದು ಭೂಮಿಯಿಂದ 42.63 ದಶಲಕ್ಷ ಕಿ.ಮೀ.ಗಳಷ್ಟು ಸಮೀಪದಿಂದ ಹಾದು ಹೋಗಲಿದೆ. ಅಂದರೆ ಭೂಮಿ ಮತ್ತು ಸೂರ್ಯನ ನಡುವಿನ ಅಂತರದ ಸರಿಸುಮಾರು ಮೂರನೇ ಒಂದರಷ್ಟು. ಈ ಧೂಮಕೇತುವು ಭೂಮಿಯ ಹತ್ತಿರಕ್ಕೆ ಬಂದಂತೆ 5.4 ರಷ್ಟು ಕಾಂತಿಮಾನದಲ್ಲಿ ಪ್ರಕಾಶಿಸಲಿದೆ.
ಸದ್ಯ ಜನವರಿ ತಿಂಗಳ ಕೊನೆಯ ಕೆಲವು ದಿನಗಳಲ್ಲಿ ಮತ್ತು ಫೆಬ್ರವರಿ ತಿಂಗಳ ಪ್ರಾರಂಭದ ದಿನಗಳಲ್ಲಿ ಪ್ರಕಾಶಮಾನವಾಗಿ ಗೋಚರಿಸುವ ಸಿ/2022 ಇ3 ಧೂಮಕೇತುವನ್ನು ಭೂಮಿಯಿಂದ ವೀಕ್ಷಿಸಬಹುದು. ಇದು ಫೆ.1ರಂದು ಮುಂಜಾನೆಯ ಆಕಾಶದಲ್ಲಿ ಪ್ರಕಾಶಮಾನವಾಗಿ ಗೋಚರಿಸಲಿದ್ದು, ಮತ್ತೆ ಈ ಅಪರೂಪದ ಅತಿಥಿಯನ್ನು ವೀಕ್ಷಿಸಬೇಕೆಂದರೆ 50,000 ವರ್ಷ ಕಾಯಬೇಕಾಗುತ್ತದೆ. ಅಂದರೆ, ಜೀವಿತಾವಧಿಯಲ್ಲಿ ಒಮ್ಮೆಗೆ ಮಾತ್ರ ನಮಗೆ ಇದನ್ನು ನೋಡಲು ಸಾಧ್ಯವಾಗಿದೆ.
ಆವರ್ತಕ ಧೂಮಕೇತುಗಳು ನಿರ್ದಿಷ್ಟ ಕಕ್ಷಾವಧಿಯೊಂದಿಗೆ ಸೂರ್ಯನ ಸುತ್ತ ಪುನರಾವರ್ತಿತವಾಗಿ ಸುತ್ತುತ್ತವೆ. ಧೂಮಕೇತುವು ಸೂರ್ಯನನ್ನು ಸಮೀಪಿಸುತ್ತಿದ್ದಂತೆ, ಅದರ ಹಿಮದ ಮೇಲೆ ಕರಗಲು ಪ್ರಾರಂಭಿಸಿ, ‘ಕೊಮಾ’ ಎಂಬ ವಾತಾವರಣ ನಿರ್ವಣವಾಗುತ್ತದೆ ಹಾಗೂ ಅದರೊಂದಿಗೆ ಬಾಲವೂ ಸಹ ರೂಪುಗೊಳ್ಳುತ್ತದೆ. ಈ ರೀತಿಯ ರಚನೆಯಿಂದಾಗಿ ಧೂಮಕೇತು ಮತ್ತು ಕ್ಷುದ್ರಗ್ರಹಗಳನ್ನು ಪ್ರತ್ಯೇಕವಾಗಿ ವರ್ಗೀಕರಿಸಲಾಗಿದೆ. ಧೂಮಕೇತುವಿನ ಚಲನೆಯು ಯಾವುದೇ ದಿಕ್ಕಿನಲ್ಲಿರಲಿ, ಅದರ ಬಾಲವು ಯಾವಾಗಲೂ ಸೂರ್ಯನ ವಿರುದ್ಧ ದಿಕ್ಕಿನೆಡೆಗೆ ಇರುತ್ತದೆ ಆದ್ದರಿಂದ ನಾವು ಈ ಧೂಮಕೇತುವನ್ನು ಬರಿಗಣ್ಣಿನಿಂದ ನೋಡಬಹುದಾಗಿದೆ ಎಂದು ಖಗೋಳ ತಜ್ಞ ಅತುಲ್ ಭಟ್ ವೀಕ್ಷಿಸಬಹುದಾಗಿದೆ ತಿಳಿಸಿದ್ದಾರೆ.