Cash Thrown Incident | ಬೆಂಗಳೂರು ಫ್ಲೈ ಓವರ್ ನಿಂದ ಹಣ ಎಸೆತ ಪ್ರಕರಣ | ಬಯಲಾಯ್ತು ನಿಜ ವಿಷಯ !
ನಿನ್ನೆಯಷ್ಟೇ ಬೆಂಗಳೂರಿನ ಕೆ.ಆರ್.ಮಾರ್ಕೆಟ್ ಫ್ಲೈ ಓವರ್ ಮೇಲೆ ಮಹಾಶಯನೊಬ್ಬ ಬಂದು ಹಣ ಎಸೆದ ಘಟನೆ ವರದಿಯಾದ ಬೆನ್ನಲ್ಲೇ ಮಾಹಿತಿಯೊಂದು ಹೊರ ಬಿದ್ದಿದೆ. ಕೆ.ಆರ್.ಮಾರುಕಟ್ಟೆಯ ಫ್ಲೈಓವರ್ ಮೇಲೆ ನಿಂತು ಭಾರೀ ಮೊತ್ತದ ಹಣ ಎಸೆದು, ಟ್ರಾಫಿಕ್ ಜಾಮ್ ಜೊತೆಗೆ ವಾಹನ ಸಂಚಾರಕ್ಕೆ ತೊಡಕು ಉಂಟಾಗಲು ಕಾರಣನಾಗಿದ್ದ ವ್ಯಕ್ತಿಯ ವಿರುದ್ಧ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈತನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದು, ಪಬ್ಲಿಸಿಟಿಗಾಗಿ ಹೀಗೆ ಮಾಡಿರುವುದು ತಿಳಿದು ಬಂದಿದೆ.
ಹಣ ಎಸೆದ ವ್ಯಕ್ತಿಯನ್ನು ಆಯಂಕರ್ ಮತ್ತು ಈವೆಂಟ್ ಮ್ಯಾನೇಜರ್ ಅರುಣ್ (30) ಎಂದು ಗುರುತಿಸಲಾಗಿದೆ. ಸದ್ಯ ವೈರಲ್ ಆಗಿ ಸಂಚಲನ ಮೂಡಿಸಿದ ವಿಡಿಯೋದಲ್ಲಿ ಸೂಟು-ಬೂಟು ಧರಿಸಿ, ಕೊರಳಿಗೆ ಗಡಿಯಾರವನ್ನು ಜೋತು ಹಾಕಿಕೊಂಡು ನೋಟುಗಳ ಬ್ಯಾಗ್ನೊಂದಿಗೆ ದ್ವಿಚಕ್ರವಾಹನದಲ್ಲಿ ಆಗಮಿಸಿರುವ ಅರುಣ್, 10 ರೂಪಾಯಿ ಮುಖಬೆಲೆಯ ಸುಮಾರು 3-4 ಕಟ್ಟುಗಳ ಹಣವನ್ನು ಕೆ.ಆರ್.ಮಾರುಕಟ್ಟೆಯ ಫ್ಲೈಓವರ್ ಮೇಲಿಂದ ಎಸೆಯುವುದು ಕಂಡುಬಂದಿದೆ.
ಹಣ ಕಂಡರೆ ಹೆಣವೂ ಬಾಯಿ ಬಿಡುತ್ತೆ ಅನ್ನೋ ಹಾಗೆ ಜನರು ಹಣವನ್ನು ಪಡೆಯಲು ಮುಗಿ ಬಿದ್ದಿದ್ದರು. ಈ ಕೃತ್ಯದಿಂದ ಫ್ಲೈಓವರ್ ಮೇಲೆ ಹಾಗೂ ಕೆಳಗೆ ಕೆಲ ಕಾಲ ಸಂಚಾರಕ್ಕೆ ತೊಂದರೆಯಾಗಿತ್ತು. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ತಲುಪುವ ಮುನ್ನವೇ ಅರುಣ್ ಹಾಗೂ ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿದ್ದ ಆತನ ಸ್ನೇಹಿತರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಹಣ ಪಡೆದವರು ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಅನ್ನುವ ಹಾಗೆ ಖುಷಿ ಪಟ್ಟಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಿಟಿ ಮಾರ್ಕೆಟ್ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ.
ಭಾರತೀಯ ದಂಡ ಸಂಹಿತೆ (ಐಪಿಸಿ)ಯ ಸೆಕ್ಷನ್ 283, 290 ಹಾಗೂ ಕರ್ನಾಟಕ ಪೊಲೀಸ್ ಕಾಯಿದೆಯ 92 (D) ಅಡಿಯಲ್ಲಿ ಅರುಣ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದ ಕುರಿತಾಗಿ ತನಿಖೆ ನಡೆಸಿದ ಪೊಲೀಸರು ಕೃತ್ಯಕ್ಕೆ ಕಾರಣ ನೀಡುವಂತೆ ನಾಗರಭಾವಿಯಲ್ಲಿರುವ ಅರುಣ್ ನಿವಾಸಕ್ಕೆ ಪೊಲೀಸರು ನೋಟಿಸ್ ನೀಡಿದ್ದಾರೆ. ಆದರೆ, ಈ ಕುರಿತಂತೆ ಅರುಣ್ ಉತ್ತರ ನೀಡದ ಹಿನ್ನೆಲೆ ನಾಗರಭಾವಿಯಲ್ಲಿರುವ ಯೂಟ್ಯೂಬ್ ಕಚೇರಿಯಲ್ಲಿ ಅರುಣ್ ಇರುವುದು ತಿಳಿದು ಅಲ್ಲಿಗೆ ತೆರಳಿ ಆತನನ್ನು ಠಾಣೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.
ಬೆಂಗಳೂರು ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಲಕ್ಷ್ಮಣ್ ನಿಂಬರಗಿ ಅವರು, ಅರುಣ್ ” ಆಯಂಕರ್ ಮತ್ತು ಈವೆಂಟ್ ಮ್ಯಾನೇಜರ್ ಆಗಿರುವ ಹಿನ್ನೆಲೆ ಪ್ರಚಾರ ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿಸಿದ್ದಾರೆ. ಅರುಣ್ ತನ್ನ ಸ್ನೇಹಿತ ಸತೀಶ್ ಜೊತೆ ಕೆ.ಆರ್.ಮಾರುಕಟ್ಟೆ ಫ್ಲೈಓವರ್ ಬಳಿ ಬಂದು ಹಣ ಎಸೆದಿದ್ದು ಅಲ್ಲದೆ ಹೆಚ್ಚು ಜನಸಂದಣಿ ಇರುವ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದಾನೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸ್‌ಆಯಪ್‌ನಲ್ಲೂ ಈತ ವಿಡಿಯೋಗಳನ್ನು ಶೇರ್ ಮಾಡಿರುವ ಕುರಿತು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.