Social Media Influencers: ಸಾಮಾಜಿಕ ಮಾಧ್ಯಮ ಪ್ರಭಾವಿಗಳೇ ಗಮನಿಸಿ | ಬಂದಿದೆ ಹೊಸ ನಿಯಮ !
ಕೇಂದ್ರ ಸರ್ಕಾರವು ಸಾಮಾಜಿಕ ಮಾಧ್ಯಮಗಳ ಪ್ರಭಾವಿಗಳಿಗೆ ಹೊಸ ಕಾನೂನನ್ನು ಜಾರಿಗೆ ತಂದಿದೆ. ಈ ಹೊಸ ನಿಯಮದಲ್ಲಿ ತಾವು ಸ್ವೀಕರಿಸಿಲಾದ ವಸ್ತುಗಳ ವಿವರವನ್ನು ಬಹಿರಂಗಪಡಿಸಬೇಕೆಂದು ಕಡ್ಡಾಯಗೊಳಿಸಿದೆ. ತಪ್ಪಿದಲ್ಲಿ 50 ಲಕ್ಷ ರೂ. ವರೆಗೆ ದಂಡ ಮತ್ತು ಸಾಮಾಜಿಕ ಮಾಧ್ಯಮ ಅನುಮೋದನೆಗಳ ಮೇಲೆ ನಿಷೇಧವನ್ನು ಹೇರಲಾಗುವುದು ಎಂದು ಖಡಕ್ ಎಚ್ಚರಿಕೆಯನ್ನು ನೀಡಿದೆ.
ಹೊಸ ನಿಯಮದ ಪ್ರಕಾರ, ತಾವು ಸ್ವೀಕರಿಸಿದ ಉಡುಗೊರೆ, ಪಡೆದ ಹೋಟೆಲ್ ವಸತಿ ವ್ಯವಸ್ಥೆ, ಷೇರು, ರಿಯಾಯಿತಿ ಕೊಡುಗೆ, ಯಾವುದೇ ಉತ್ಪನ್ನ, ಸೇವೆ ಅಥವಾ ಯೋಜನೆಗಳ ಬಗ್ಗೆ ಪ್ರಭಾವ ಬೀರಿದ್ದಕ್ಕಾಗಿ ಪಡೆಯುವ ಬಹುಮಾನ ಇತ್ಯಾದಿಗಳ ವಿವರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ವಿವರವನ್ನು ಸರಳ ಮತ್ತು ಸ್ಪಷ್ಟವಾದ ಭಾಷೆಯಲ್ಲಿ ಸಲ್ಲಿಸಬೇಕು ಎಂದು ಸರ್ಕಾರವು ತಿಳಿಸಿದೆ. ಸಾಮಾಜಿಕ ಮಾಧ್ಯಮ ಪ್ರಭಾವ ಉದ್ಯಮ ವೇಗವಾಗಿ ಬೆಳವಣಿಗೆ ಹೊಂದುತ್ತಿರುವುದರ ನಡುವೆ, ಜನರ ಹಾದಿ ತಪ್ಪಿಸುವ ಜಾಹೀರಾತುಗಳನ್ನು ಕಡಿಮೆ ಮಾಡುವುದು ಮತ್ತು ಗ್ರಾಹಕರ ಹಿತ ಕಾಯುವ ದೃಷ್ಟಿಕೋನದಿಂದ ಹೊಸ ನಿಯಮವನ್ನು ರೂಪಿಸಲಾಗಿದೆ.
ಸಾಮಾಜಿಕ ಮಾಧ್ಯಮ ಪ್ರಭಾವ ಉದ್ಯಮವು ವಾರ್ಷಿಕವಾಗಿ ಶೇ 20ರಷ್ಟು ಬೆಳವಣಿಗೆ ಕಾಣುತ್ತಿದ್ದು, 2025ರ ವೇಳೆಗೆ ವಾರ್ಷಿಕ 2,800 ಕೋಟಿ ರೂ. ವಹಿವಾಟು ನಡೆಸುವ ನಿರೀಕ್ಷೆ ಇದೆ. ಹೊಸ ಕಾನೂನಿಗೆ ‘ಎಂಡೋರ್ಸ್ಮೆಂಟ್ ನೋ ಹೌ’ಸ್ – ಫಾರ್ ಸೆಲೆಬ್ರಿಟೀಸ್, ಇನ್’ಫ್ಲುಯೆನ್ಸರ್ಸ್ ಆ್ಯಂಡ್ ವರ್ಚುವಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್ (ಅವತಾರ್ ಆರ್ ಕಂಪ್ಯೂಟರ್ ಜನರೇಟೆಡ್ ಕ್ಯಾರಕ್ಟರ್) ಆನ್ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಸ್’ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯವು ನಾಮಕರಣ ಮಾಡಿದೆ. ಒಂದು ವೇಳೆ ಕಾನೂನನ್ನು ಉಲ್ಲಂಘಿಸಿದಲ್ಲಿ, 2019ರ ಗ್ರಾಹಕ ರಕ್ಷಣಾ ಕಾಯ್ದೆಯಲ್ಲಿ ಉಲ್ಲೇಖಿಸಿರುವಂತೆ ಹಾದಿತಪ್ಪಿಸುವ ಜಾಹೀರಾತಿಗೆ ಸೂಚಿಸಲಾಗಿರುವ ದಂಡವನ್ನೇ ವಿಧಿಸಲಾಗುವುದು ಎಂದು ಸಚಿವಾಲಯವು ತಿಳಿಸಿದೆ.
ಹೊಸ ಕಾನೂನಿನ ಅಡಿ, ಉತ್ಪಾದಕರು, ಜಾಹೀರಾತುದಾರರು ಮತ್ತು ಪ್ರಭಾವಿಗಳಿಗೆ 10 ಲಕ್ಷ ರೂ. ವರೆಗೆ ದಂಡ ವಿಧಿಸುವ ಅಧಿಕಾರ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರಕ್ಕೆ (CCPA) ಇದೆ. ಮರುಕಳಿಸಿದ ಅಪರಾಧಕ್ಕೆ 50 ಲಕ್ಷ ರೂ. ವರೆಗೆ ದಂಡ ವಿಧಿಸಬಹುದಾಗಿದೆ. ಹಾದಿತಪ್ಪಿಸುವ ಜಾಹೀರಾತನ್ನು ಅನುಮೋದಿಸುವವರ ಮೇಲೆ 1 ವರ್ಷದವರೆಗೆ ನಿಷೇಧ ಹೇರಲು ಮತ್ತು ಮರುಕಳಿಸಿದ ತಪ್ಪುಗಳಿಗಾಗಿ ನಿಷೇಧವನ್ನು 3 ವರ್ಷಗಳವರೆಗೆ ವಿಸ್ತರಿಸಬಹುದಾದ ಅಧಿಕಾರ ಸಿಸಿಪಿಎಗೆ ಇದೆ.