ಶ್ರೀರಾಮ ಸೇನೆ ಮುಖಂಡನ ಮೇಲಿನ ಗುಂಡಿನ ದಾಳಿ!! ಕೆಲವೇ ಗಂಟೆಗಳಲ್ಲಿ ಆರೋಪಿಗಳ ಬಂಧನ-ಈ ಕಾರಣಕ್ಕಾಗಿ ನಡೆಯಿತೇ ದಾಳಿ!?
ಬೆಳಗಾವಿ: ಶ್ರೀ ರಾಮ ಸೇನಾ ಜಿಲ್ಲಾಧ್ಯಕ್ಷ ರವಿ ಕೋಕಿತಕರ್ ಮೇಲೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಫೈರಿಂಗ್ ನಡೆಸಿದ ಘಟನೆ ನಿನ್ನೆ ರಾತ್ರಿ ವೇಳೆ ನಡೆದಿದ್ದು, ಘಟನೆ ಬೆನ್ನಲ್ಲೇ ಕ್ಷಿಪ್ರ ಕಾರ್ಯಚರಣೆ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಅಭಿಜಿತ್ ಸೋಮನಾಥ ಬಾತಖಾಂಡ ಪಾಟೀಲ ಮಾಳ ಬೆಳಗಾವಿ, ರಾಹುಲ ನಿಂಗಾಣಿ ಕೋಡಚವಾಡ ಸಾ ಸಂಬಾಜಿ ಗಲ್ಲಿ ಬಸ್ತವಾಡ ಹಾಗೂ ಜ್ಯೋತಿಭಾ ಗಂಗಾರಾಮ ಮುತಗೇತಕರ ಎಂದು ಗುರುತಿಸಲಾಗಿದೆ.ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ದಾಳಿ ನಡೆದಿದೆ ಎನ್ನುವ ವಿಚಾರ ಮೂಲಗಳಿಂದ ತಿಳಿದುಬಂದಿದೆ.
ಘಟನೆ ವಿವರ:ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಚಾಲಕನೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಸ್ತೆ ಹಂಪ್ಸ್ ಬಳಿ ಕಾರಿನ ವೇಗ ನಿಧಾನವಾಗುತ್ತಿದ್ದಂತೆ ಅಪರಿಚಿತ ದುಷ್ಕರ್ಮಿಗಳು ಫೈರಿಂಗ್ ನಡೆಸಿದ್ದು, ರವಿ ಕೋಕಿತಕರ್ ಅವರ ಗುದ್ದಕ್ಕೆ ತಗುಲಿದ ಗುಂಡು ಬಳಿಕ ಚಾಲಕನ ಕೈಯನ್ನು ಸೀಳಿದೆ ಎಂದು ತಿಳಿದುಬಂದಿದೆ.
ಗುಂಡೇಟಿನಿಂದ ಚಾಲಕನಿಗೂ ಗಾಯಗಳಾಗಿದ್ದು, ಗಾಯಾಳುಗಳಿಗೆ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಘಟನೆಯ ಸುದ್ದಿ ಹಬ್ಬುತ್ತಿದ್ದಂತೆ ಬೆಳಗಾವಿ ಜಿಲ್ಲೆಯಾದ್ಯಂತ ಪೊಲೀಸರು ಮುಂಜಾಗ್ರತ ಕ್ರಮ ಕೈಗೊಂಡಿದ್ದು, ಡಿಸಿಪಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಹಾಗೂ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗೆ ತಂಡಗಳನ್ನು ರಚನೆ ಮಾಡಲಾಗಿತ್ತು. ಸದ್ಯ ಪೊಲೀಸರ ತಂಡವು ಮೂವರನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.