ವಿಶ್ವವನ್ನೇ ರಂಜಿಸುತ್ತಿರುವ ಅವತಾರ್ ಹೆಸರು ಸಂಸ್ಕೃತ ಮೂಲದ್ದು ? ಪಂಚಭೂತಗಳ ಆಧಾರದಲ್ಲಿ ಶೂಟ್ ಆಗುತ್ತಿದೆ ಅವತಾರ್ !!!
ಟೈಟಾನಿಕ್, ಟರ್ಮಿನೇಟರ್ ಮುಂತಾದ ಸಿನಿಮಾಗಳಂತಹ ಸೂಪರ್ ಹಿಟ್ ಸಿನಿಮಾಗಳನ್ನು ವಿಶ್ವಕ್ಕೆ ನೀಡಿದ ಜೇಮ್ಸ್ ಕ್ಯಾಮರೂನ್ 2009 ರಲ್ಲಿ ಊಹೆಗೂ ನಿಲುಕದಂತಹ, ಕಾಲ್ಪನಿಕ ‘ಅವತಾರ್’ ಸಿನೆಮಾವನ್ನು ನೀಡಿ ಇಡೀ ವಿಶ್ವವೇ ಬೆರಗಾಗುವಂತೆ ಮಾಡಿದ್ದಂತಹ ಸಿನಿ ಮಾಂತ್ರಿಕ. ಪ್ಯಾಂಡೋರಾ ಗ್ರಹ, ಅಲ್ಲಿನ ನಾವೀ ಜೀವಿಗಳ ಮೂಲಕ ಇಡೀ ವಿಶ್ವದ ಜನರನ್ನೇ ಮೂಕವಿಸ್ಮಿತರಾಗಿಸಿ ಸಿನಿಮಾ ತೆಗೆಯಬಲ್ಲ ಚತುರ ಪಂಡಿತ ಜೇಮ್ಸ್ ಕ್ಯಾಮರೂನ್ !
2009 ರಲ್ಲಿಯೇ ತೆರೆಕಂಡಂತಹ ಅವತಾರ್ ನ ಮೊದಲ ಪಾರ್ಟ್ ವಿಶ್ವದಾದ್ಯಂತ ಬಾಕ್ಸ್ ಆಫೀಸನ್ನೇ ಬಾಚಿಬಿಟ್ಟಿತ್ತು. ಸಿನೆಮಾ ನಿರ್ಮಾಣಕ್ಕಾಗಿಯೇ ಸುಮಾರು 230 ಮಿಲಿಯನ್ ಡಾಲರನ್ನು ಅಂದರೆ 2 ಸಾವಿರ ಕೋಟಿ ರೂಪಾಯಿಯನ್ನು ಬಳಸಲಾಗಿತ್ತು. ಆದರೆ ಸಿನೆಮಾ ಖರ್ಚಿನ ಇಪ್ಪತ್ತು ಪಟ್ಟು ಹಣವನ್ನು ಬಾಚಿ ಪ್ರಪಂಚದ ಎಲ್ಲಾ ದಾಖಲೆಗಳನ್ನು ಚಿತ್ರವು ಧೂಳೀಪಟ ಮಾಡಿಬಿಟ್ಟಿತ್ತು. ಹೌದು, ದಶಕಗಳ ಹಿಂದೆಯೇ ಚಿತ್ರವು ಸುಮಾರು 24000 ಕೋಟಿಯಷ್ಟು ಗಳಿಸಿತ್ತು.
ಅವತಾರ್ ಮೂವಿಯ ಕಥೆಯನ್ನು 1994 ರಷ್ಟರಲ್ಲೇ ಜೇಮ್ಸ್ ಕ್ಯಾಮರೂನ್ ಸಿದ್ಧಪಡಿಸಿಟ್ಟಿದ್ಧರು. ಅಂದರೆ ತಮ್ಮದೇ ಟೈಟಾನಿಕ್ ಸಿನೆಮಾ ತೆರೆಕಾಣುವ ಮುಂಚಿತವಾಗಿಯೇ ಅವತಾರ್ ಕಥೆ ರೆಡಿಯಾಗಿತ್ತು. ಆದರೆ ಸಿನೆಮಾ ಚಿತ್ರೀಕರಣಕ್ಕೆ ಬೇಕಾದ ಟೆಕ್ನಾಲಜಿ ಇನ್ನೂ ಡೆವಲಪ್ ಆಗದ ಕಾರಣ ಹಾಗೂ ನಿರ್ಮಾಣಕ್ಕೆ ಬೇಕಾದಷ್ಟು ಬಜೆಟ್ ನ ಕೊರತೆಯಿದ್ದದ್ದರಿಂದ 2009 ರವರೆಗೂ ಕಾಯಬೇಕಾಯಿತು. ಇನ್ನು ಜೇಮ್ಸ್ ಅವರು ಈ ಅವತಾರ್ ಸಿನೆಮಾ ಏನಾದರೂ ಫ್ಲಾಪ್ ಆದರೆ ನನ್ನ ಸಂಭಾವನೆಯ ಅರ್ಧ ಹಣವನ್ನು ನಾನು ಹಿಂದಿರುಗಿಸುತ್ತೇನೆ ಎಂದು ಮಾತು ನೀಡಿದ್ದರು. ಇನ್ನೂ ಮುಖ್ಯವಾದ ಸಂಗತಿ ಎಂದರೆ ಚೀನಾದಲ್ಲಿ ಸಾಧಾರಣವಾಗಿ ಹಾಲಿವುಡ್ ಮೂವಿಗಳ ಪ್ರದರ್ಶನಕ್ಕೆ ಅವಕಾಶ ಇರುವುದಿಲ್ಲ. ಆದರೆ ಅವತಾರ್ ಮೂವಿಯ ಹವಾಕ್ಕೆ ಫಿದಾ ಆದ ಚೀನೀಯರು ಅವತಾರ್ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ್ದರು. ಹಾಗಾಗಿ ಅದರ ಗಳಿಕೆ ಮಗದಷ್ಟು ಏರುವಂತಾಯಿತು.
ಅವತಾರ್ ನ ಮೊದಲ ಪಾರ್ಟ್ ಮುಗಿದ ತಕ್ಷಣ 2014 ರಲ್ಲಿಯೇ ಅವತಾರ್ 2, ಅವತಾರ್ 3 ಯನ್ನು ಪ್ರೇಕ್ಷಕರ ಮುಂದಿಡುವ, ಅವರ ಕುತೂಹಲವನ್ನು ತಣಿಸುವ ಯೋಜನೆ ಜೇಮ್ಸ್ ಅವರದ್ದಾಗಿತ್ತು. ಆದರೆ ಅವತಾರ್ 2 ಅನ್ನು ನೀರಿನಾಳದಲ್ಲಿ ಚಿತ್ರಿಸಬೇಕಾದ್ದರಿಂದ, ಅದಕ್ಕೆ ಬೇಕಾದ ಟೆಕ್ನಾಲಜಿಯ ಕೊರತೆ ಮತ್ತೆ ತಲೆದೋರಿದ್ದರಿಂದ ದಶಕಗಳವರೆಗೆ ಕಾಯಬೇಕಾಯಿತು. 2017 ರಲ್ಲಿ ಮತ್ತೆ ಅವತಾರ್ 2 ಶೂಟೀಂಗ್ ಆರಂಭವಾಯ್ತು. 2020 ರಲ್ಲಿ ಕೊರೋನ ಕಾರಣದಿಂದ ಮತ್ತೆ ಸಿನೆಮಾ ತೆರೆಕಾಣಬೇಕಾದದ್ದು ತಡವಾಯಿತು. ಅಂತೂ 2022 ರ ಡಿಸೆಂಬರ್ 16 ಬಂದೇ ಬಿಟ್ಟಿತು. ಮತ್ತೊಮ್ಮೆ ಪ್ರಪಂಚದ ಎಲ್ಲಾ ಚಿತ್ರಮಂದಿರಗಳಲ್ಲಿ ಅವತಾರ್ 2 ಮೂಲಕ ಹೊಸ ದಾಖಲೆಯನ್ನು ಮತ್ತೆ ಬರೆಯಲಾಗುತ್ತಿದೆ.
ಅವತಾರ್-2 ಪ್ರಪಂಚದಾದ್ಯಂತ ಸುಮಾರು 55000 ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಸಿನೆಮಾ ರಿಲೀಸ್ ಗೂ ಮುಂಚಿತವಾಗಿ 5.4 ಲಕ್ಷ ಟಿಕೆಟ್ ಗಳು ಸೇಲ್ ಆಗಿದ್ದವು. ಅವತಾರ್- 2 ನಿರ್ಮಾಣಕ್ಕೆ ತಗುಲಿದ ವೆಚ್ಚ ಅಂದಾಜಾಗಿ ಹೇಳುವುದಾದರೆ 350 ಮಿಲಿಯನ್ ಡಾಲರ್ ಗಳು. ಅಂದರೆ ಸರಿಸುಮಾರು 2,800 ಕೋಟಿ. ಆದರೆ ಕೇವಲ ಹತ್ತು ದಿನಗಳಲ್ಲಿ ಇದರ ಗಳಿಕೆ 7000 ಕೋಟಿಗೂ ಅಧಿಕವಾಗಿದೆ. ಭಾರತದಲ್ಲಿಯೇ ಈಗಾಗಲೇ 300 ಕೋಟಿ ಬಾಚಿಕೊಂಡಿದೆ. ಮುಂದಿನ ಅದರ ಗಳಿಕೆ 500 ಕೋಟಿಯನ್ನು ದಾಟಬಹುದೆಂಬ ನಿರೀಕ್ಷೆಯೂ ಇದೆ.
ಇನ್ನೂ ಮುಖ್ಯವಾದ ವಿಚಾರ ಎಂದರೆ ಅವತಾರ್ ಪದವು ಭಾರತೀಯ ಮೂಲವಾಗಿದೆ. ಹೌದು, ಅವತಾರ್ ಪದವು ಮೂಲ ಸಂಸ್ಕೃತ ಪದವಾಗಿದೆ. ಅವತಾರ್ ಎಂದರೆ ಬದಲಾಗು, ಮತ್ತೊಂದು ರೂಪವನ್ನು ತಾಳು ಎಂಬಂತಹ ಅರ್ಥವನ್ನು ನೀಡುತ್ತದೆ. ಈ ವಿಚಾರವಾಗಿ ಜೇಮ್ಸ್ ಕ್ಯಾಮರೂನ್ ಅವರೇ 2010 ರ ತಮ್ಮ ಒಂದು ಸಂದರ್ಶನದಲ್ಲಿ ಅವತಾರ್ ಎಂಬ ಹೆಸರಿಡಲು ಭಾರತದ ರೆಫರೆನ್ಸ್ ನನ್ನ ತಲೆಯಲ್ಲಿತ್ತು ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಅವತಾರ್ 3, 4, 5 ಪಾರ್ಟ್ಗಳು ಮುಂದೆ ಬರಲಿವೆ, ಮುಂದೆ ಅವತಾರ್ 3 ಗೆ ಬರುವ ರೆಸ್ಪಾನ್ಸ್ ನೋಡಿ 4, 5 ಅನ್ನು ಚಿತ್ರೀಕರಿಸುತ್ತೇವೆ ಎಂದಿದ್ದಾರೆ.
ಅವತಾರ್ ಪಾರ್ಟ್ ಗಳು ಪಂಚ ಭೂತಗಳನ್ನು ಆಧರಿಸಿ, ಅದರ ಹಿನ್ನೆಲೆಯಲ್ಲಿ ರಚಿತವಾಗುತ್ತಿರುವ ಸಿನಿಮಾಗಳು ಎಂದು ಹೇಳಲಾಗುತ್ತಿದೆ. ಯಾಕೆಂದರೆ ಅವತಾರ್ ಮೊದಲ ಭಾಗವನ್ನು ಕಾಡಿನಲ್ಲಿ ಅಂದರೆ ನೆಲದ ಮೇಲೆ ಶೂಟ್ ಮಾಡಲಾಗಿತ್ತು. ನಂತರ ಅವತಾರ್ 2 ಮುಕ್ಕಾಲು ಭಾಗ ನೀರಿನಲ್ಲಿಯೇ ಶೂಟ್ ಆಗಿದೆ. ಮುಂದಿನ ಅವತಾರ್ 3, 4, 5 ಗಳು ಬೆಂಕಿ, ಗಾಳಿ, ಮತ್ತು ಆಕಾಶದಲ್ಲಿ ಚಿತ್ರಿತವಾಗಲಿವೆ ಎಂದು ಸಿನಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತದ ಪೌರಾಣಿಕ ನಂಬಿಕೆಗಳು ಹಾಲಿವುಡ್ ಮಂದಿಗೂ ಕಥಾ ಕಣಜಗಳಾಗಿ ಮಾರ್ಪಟ್ಟು, ಇದೀಗ ವಿಶ್ವವನ್ನೇ ಭಾರತೀಯ ಪದದ ಹೆಸರಲ್ಲಿ ಚಿತ್ರವೊಂದು ಆಳುತ್ತಿರುವುದು ನಮ್ಮ ಹೆಮ್ಮೆಯ ಸಂಸ್ಕೃತಿಗೆ ಸಂದ ಗೌರವವೇ ಸರಿ.