ದತ್ತ ಪೀಠಕ್ಕೆ ಹಿಂದೂ ಅರ್ಚಕರ ನೇಮಕ, ಸಂಭ್ರಮ ಆಚರಿಸಿಕೊಂಡ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು
ಹಿಂದೂಪರ ಸಂಘಟನೆಗಳ ಬಹುದಿನಗಳ ಬೇಡಿಕೆ ಈಗ ಈಡೇರಿದೆ. ದೀರ್ಘಕಾಲದ ಬೇಡಿಕೆಯ ಅನ್ವಯ ಇತಿಹಾಸದಲ್ಲೇ ಮೊದಲ ಬಾರಿಗೆ ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ದರ್ಗಾಕ್ಕೆ ತಾತ್ಕಾಲಿಕವಾಗಿ ಇಬ್ಬರು ವರ್ಚಕರ ನೇಮಕಕ್ಕೆ ಸರ್ಕಾರ ಅನುಮತಿ ನೀಡಿದೆ.
ಈ ಸಂಗತಿಯು ಇದೀಗ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳಿಗೆ ಖುಷಿ ತಂದಿದೆ. 2018ರ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ ಎಂದು ಹೇಳಿತ್ತು. ಅದರಂತೆ ಕೊಟ್ಟ ಮಾತನ್ನು ಸರ್ಕಾರ ಉಳಿಸಿಕೊಂಡಿದೆ.
ಇದುವರೆಗೆ ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಮುಜಾವರ್ ಪೂಜಾ ವಿಧಿ ವಿಧಾನ ನಡೆಸುತ್ತಿದ್ದರು. ಇದೇ ಮೊದಲ ಬಾರಿಗೆ ಅರ್ಚಕರನ್ನು ನೇಮಕ ಮಾಡಲಾಗಿದೆ.
ದತ್ತಪೀಠದ ಹಿಂದೂ ಅರ್ಚಕರಾಗಲು ಒಟ್ಟು ಇಬ್ಬರು ಅರ್ಜಿ ಹಾಕಿದ್ದರು. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮೂಲದ ಶ್ರೀಕಾಂತ್ ಹಾಗೂ ಚಿಕ್ಕಬಳ್ಳಾಪುರ ಮೂಲದ ಸಂದೀಪ್ ಅರ್ಜಿ ಹಾಕಿದ್ದರು. ದತ್ತಜಯಂತಿಗೆ ತುರ್ತಾಗಿ, ತಾತ್ಕಾಲಿಕಕ್ಕೆ ಇಬ್ಬರು ಬೇಕಿದ್ದ ಕಾರಣ ಆ ಇಬ್ಬರನ್ನೇ ಸರ್ಕಾರ ದತ್ತಪೀಠಕ್ಕೆ ಹಿಂದೂ ಅರ್ಚಕರಾಗಿ ನೇಮಕ ಮಾಡಿ ಆದೇಶಿಸಿದೆ. ಆದರೆ ಈ ಆಯ್ಕೆ ತಾತ್ಕಾಲಿಕವಾಗಿದ್ದು, ಮೂರು ದಿನದ ದತ್ತಜಯಂತಿ ಕಾರ್ಯಕ್ರಮಕ್ಕೆ ಸೀಮಿತ ಆಗಿದೆ.
ಡಿಸೆಂಬರ್ 1ರಂದು ಹೈಕೋರ್ಟ್ ದತ್ತಪೀಠದಲ್ಲಿ ಆಡಳಿತ ಸಮಿತಿಯ ನಿರ್ಧಾರದಂತೆ ಪೂಜೆ-ಪುನಸ್ಕಾರಗಳು ನಡೆಯಬೇಕೆಂದು ಆದೇಶ ನೀಡಿದ ಹಿನ್ನೆಲೆಯಲ್ಲಿ, ಆಡಳಿತ ಮಂಡಳಿ ಕೂಡ ಹಿಂದೂ ಅರ್ಚಕರ ಪೂಜೆಯೊಂದಿಗೆ ದತ್ತಜಯಂತಿ ಆಚರಣೆಗೆ ನಿರ್ಧರಿಸಿತ್ತು. ಹಾಗಾಗಿ ರಾಜ್ಯ ಸರ್ಕಾರ ಕೂಡ ಮೂರು ದಿನಗಳ ಮಟ್ಟಿಗೆ ಇಬ್ಬರು ಅರ್ಚಕರನ್ನು ನೇಮಕ ಮಾಡಿ ಆದೇಶಿಸಿದೆ..
ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ದರ್ಗಾಕ್ಕೆ ಅರ್ಚಕರಾಗಿ ನೇಮಿಸಲು ಸರ್ಕಾರ ಒಪ್ಪಿಗೆ ನೀಡಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಹೇಳಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯ ಪಿ.ಎಂ. ಸಂದೀಪ್ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬೊಮ್ಮನಕುಡಿಗೆಯ ಕೆ. ಶ್ರೀಧರ್ ಅವರನ್ನು ಅರ್ಚಕರಾಗಿ ನೇಮಿಸಲಾಗಿದೆ.