ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಅಪಪ್ರಚಾರ ಪ್ರಕರಣ, ಜೈಲು ಸೇರಿದ ನಾಗರಿಕ ಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ ನಾಯಕ್
ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ವಿರುದ್ದ ಅಪಪ್ರಚಾರ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಬೆಳ್ತಂಗಡಿ ನ್ಯಾಯಾಲಯದ ತೀರ್ಪಿನಂತೆ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ ನಾಯಕ್ ಜೈಲು ಸೇರಿದ್ದಾರೆ. ಇವತ್ತು ಅವರು ತಮ್ಮ ಅಪಾರ ಅಭಿಮಾನಿಗಳೊಂದಿಗೆ ಬೆಳ್ತಂಗಡಿ ಕೋರ್ಟಿಗೆ ಸರಂಡರ್ ಆಗುವುದರೊಂದಿಗೆ ನ್ಯಾಯ ಒಂದು ಕಡೆ ಗೆದ್ದಿದೆ, ಇನ್ನೊಂದು ಕಡೆ ಸೋತಿದೆ ಎನ್ನಬಹುದು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ ನಾಯಕ್, ಡಾ.ವೀರೇಂದ್ರ ಹೆಗ್ಗಡೆ ವಿರುದ್ಧ ಮಿತಿಗಿಂತ ಜಾಸ್ತಿ ಸ್ಥಿರಾಸ್ತಿ ಹೊಂದಿದ ಆರೋಪ ಮಾಡಿದ್ದರು. ಅಲ್ಲದೇ, ಅವರು ಧರ್ಮಸ್ಥಳ ಮತ್ತು ಹೆಗ್ಗಡೆಯವರ ಬಗ್ಗೆ ನಿರಂತರವಾಗಿ ಸಾಮಾಜಿಕ ತಾಣಗಳ ಮೂಲಕ ಬರಹಗಳನ್ನ ಬರೆದಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿ ಹೆಗ್ಗಡೆಯವರ ವಿರುದ್ದ ಅಪಪ್ರಚಾರ ಮಾಡದಂತೆ ಬೆಳ್ತಂಗಡಿ ಕೋರ್ಟ್ ಪ್ರತಿಬಂಧಕಾಜ್ಞೆ ವಿಧಿಸಿತ್ತು. ಆದರೆ ಅದನ್ನ ಉಲ್ಲಂಘಿಸಿ ಮತ್ತೆ ಆರೋಪ ಮುಂದುವರೆಸಿದ್ದ ಸೋಮನಾಥ ನಾಯಕ್ ಸಾಮಾಜಿಕ ತಾಣಗಳಲ್ಲೂ ಹೆಗ್ಗಡೆಯವರ ಬಗ್ಗೆ ಅಪಪ್ರಚಾರ ಮಾಡಿದ್ದರು ಎಂದು ದೂರಲಾಗಿತ್ತು.
ನಂತರ ವಿಚಾರಣೆ ಬಳಿಕ ಸೋಮನಾಥ ನಾಯಕ್‌ಗೆ ಜೈಲು ಶಿಕ್ಷೆ ವಿಧಿಸಿ ಬೆಳ್ತಂಗಡಿ ಕೋರ್ಟ್ ಆದೇಶ ಮಾಡಿತ್ತು. ಆದರೆ ಬೆಳ್ತಂಗಡಿ ಕೋರ್ಟ್ ತೀರ್ಪು ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದ ನಾಯಕ್ ಕಾನೂನು ಹೋರಾಟ ನಡೆಸಿದ್ದರು. ಬೆಳ್ತಂಗಡಿ ಕೋರ್ಟಿನ ಜೈಲು ಶಿಕ್ಷೆಯನ್ನು ಖಾಯಂಗೊಳಿಸಿ ಹೈಕೋರ್ಟ್ ತೀರ್ಪು ಕೂಡಾ ನೀಡಿತ್ತು.
ಹೋರಾಟದ ಮನೋಭಾವದ ಸೋಮನಾಥ ನಾಯಕ್, ಹೈ ಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದರು. ಆದರೆ ಸುಪ್ರೀಂ ಕೋರ್ಟ್ ನಿಂದಲೂ ಬೆಳ್ತಂಗಡಿ ಕೋರ್ಟ್ ನ ಜೈಲು ಶಿಕ್ಷೆ ಖಾಯಂಗೊಳಿಸಿ ತೀರ್ಪು ಪ್ರಕಟವಾಗಿದೆ. ಹೀಗಾಗಿ ಇವತ್ತು ಸುಮಾರು 70 ಜನ ಹೋರಾಟಗಾರ ಮನಸ್ಸಿನ ದಿಗ್ಗಜರ ಜತೆ ಮತ್ತು ತಮ್ಮ ಅಪಾರ ಬೆಂಬಲಿಗರ ಜೊತೆ ಸೋಮನಾಥ ನಾಯಕ್ ಬೆಳ್ತಂಗಡಿ ಕೋರ್ಟ್‌ಗೆ ಶರಣಾಗಿದ್ದಾರೆ.
ಬೆಳ್ತಂಗಡಿ ಕಾಂಗ್ರೆಸ್ ಮಾಜಿ ಶಾಸಕರಾದ ಕೆ.ವಸಂತ ಬಂಗೇರ, ಚಿಂತಕರಾದ ಲಕ್ಷ್ಮೀಶ ತೋಳಡಿತ್ತಾಯ, ರಂಜನ್ ರಾವ್ ಯರ್ಡೂರು, ಡಿಎಸ್ಎಸ್ ಮುಖಂಡರು ಹಾಗೂ ಮತ್ತಿತರ ಸಂಘಟನೆಯ ಕಾರ್ಯಕರ್ತರು ಜೊತೆಯಲ್ಲಿದ್ದರು.
ಸೋಮನಾಥ್ ನಾಯಕ್ ಅವರಿಗೆ ಮೂರು ತಿಂಗಳ ಸೆರೆವಾಸಕ್ಕೆ ಅವರನ್ನು ಮಂಗಳೂರು ಜೈಲಿಗೆ ಬೆಳ್ತಂಗಡಿ ನ್ಯಾಯಾಲಯವು ಕಳಿಸಿದೆ. ಅವರಿಗೆ ಜೈಲು ಶಿಕ್ಷೆ ಜೊತೆಗೆ 4.5 ಲಕ್ಷ ಪರಿಹಾರವನ್ನೂ ಸೋಮನಾಥ್ ನಾಯಕ್ ಅವರು ತೆರಬೇಕಿದೆ.