RSS ನಿಜವಾದ ಕಾಫಿಯಿದ್ದಂತೆ, ಬಿಜೆಪಿ ಕಾಫಿಯ ಮೇಲಿನ ನೊರೆಯಷ್ಟೆ ; RSS ಅನ್ನು ಈಗ ಸೋಲಿಸಲು ಆಗಲ್ಲ – ರಾಜಕೀಯ ತಂತ್ರಜ್ಞ ಪ್ರಶಾಂತ್‌ ಕಿಶೋರ್‌

ರಾಜಕೀಯ ತಂತ್ರಜ್ಞಾನ ಪ್ರಶಾಂತ್ ಕಿಶೋರ್ ಅವರು ಆರ್ ಎಸ್ ಎಸ್ ಬಗ್ಗೆ ವಿಭಿನ್ನ ಹೇಳಿಕೆ ನೀಡಿದ್ದಾರೆ. ಆರ್‌ಎಸ್‌ಎಸ್‌ (RSS) ನಿಜವಾದ ಕಾಫಿ. ಬಿಜೆಪಿ ಈ ಕಾಫಿಯ ಮೇಲಿನ ನೊರೆ ಇದ್ದಂತೆ ಎಂದು ರಾಜಕೀಯ ತಂತ್ರಜ್ಞ, ಕಾರ್ಯಕರ್ತ ಪ್ರಶಾಂತ್‌ ಕಿಶೋರ್‌ (Prashant Kishor) ಹೇಳಿಕೆ ನೀಡಿದ್ದಾರೆ.

ಪ್ರಶಾಂತ್ ಕಿಶೋರ್ ಅವರು ಬಿಹಾರದಲ್ಲಿ 3,500 ಕಿಲೋಮೀಟರ್‌ವರೆಗೆ ಸುದೀರ್ಘ ಪಾದಯಾತ್ರೆ ಕೈಗೊಂಡಿದ್ದಾರೆ. ಮೊನ್ನೆ ಅಕ್ಟೋಬರ್ 2 ರಿಂದ ಪ್ರಾರಂಭವಾದ ಈ ಕಾಲ್ನಡಿಗೆ ಮುಂದುವರೆದಿದೆ. ಪಾದಯಾತ್ರೆ ವೇಳೆ ದಾರಿ ಮಧ್ಯ ಅವರು ಮಾತಾಡುತ್ತಿದ್ದರು.

ಮಹಾತ್ಮ ಗಾಂಧಿಯವರ ಕಾಂಗ್ರೆಸ್ ಅನ್ನು ಪುನರುಜ್ಜೀವನಗೊಳಿಸುವ ಮೂಲಕ ಮಾತ್ರ ಗೋಡ್ಸೆಯ ಸಿದ್ಧಾಂತವನ್ನು ಸೋಲಿಸಬಹುದು. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಜಗನ್ ಮೋಹನ್ ಅವರಂತಹವರಿಗೆ ಸಹಾಯ ಮಾಡುವ ಬದಲು ನಾನು ಆ ದಿಕ್ಕಿನಲ್ಲಿ ಕೆಲಸ ಮಾಡಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

‘ ನೀವು ಎಂದಾದರೂ ಒಂದು ಲೋಟದಲ್ಲಿ ಕಾಫಿಯನ್ನು ನೋಡಿದ್ದೀರಾ? ಮೇಲ್ಭಾಗದಲ್ಲಿ ಆವರಿಸಿಕೊಂಡಿರುವ ನೊರೆಯೇ ಬಿಜೆಪಿ. ಅದರ ಕೆಳಗೆ ಆರ್‌ಎಸ್‌ಎಸ್‌ನ ಆಳವಾದ ರಚನೆ ಇದೆ. ಸಂಘವು ಸಾಮಾಜಿಕ ರಚನೆಯಲ್ಲಿ ತನ್ನ ದಾರಿಯನ್ನು ಹುಟ್ಟುಹಾಕಿದೆ. ಅದನ್ನು ಈಗ ಸೋಲಿಸಲಾಗುವುದಿಲ್ಲ ‘ ಎಂದು ಅವರು ಹೇಳಿದ್ದಾರೆ.

ಸಿಎಎ, ಎನ್‌ಪಿಆರ್, ಎನ್‌ಆರ್‌ಸಿ ವಿರುದ್ಧ ರಾಷ್ಟ್ರವು ಕಿಡಿಕಾರಿದ್ದಾಗ ನಾನು ಜೆಡಿಯು ರಾಷ್ಟ್ರೀಯ ಉಪಾಧ್ಯಕ್ಷನಾಗಿದ್ದೆ. ನನ್ನ ಪಕ್ಷದ ಸಂಸದರು ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಮಸೂದೆಯ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ತಿಳಿದು ದಿಗ್ಭ್ರಮೆಗೊಂಡಿದ್ದೆ ಎಂದು ಅವರು ಹೇಳಿದ್ದಾರೆ.

Leave A Reply

Your email address will not be published.