ಬಸ್ ಸ್ಟಾಪ್ ನಲ್ಲೇ ಪಿಯು ವಿದ್ಯಾರ್ಥಿನಿಗೆ ತಾಳಿ ಕಟ್ಟಿದ ವಿದ್ಯಾರ್ಥಿ!!!
ಮದುವೆ ಎಂದರೆ ಶಾಸ್ತ್ರ ಸಂಪ್ರದಾಯದ ಮೂಲಕ ಆಗುವಂಥದ್ದು. ಆದರೆ ಇತ್ತೀಚಿನ ಯುವ ಪೀಳಿಗೆ ಇದನ್ನು ಯಾವ ರೀತಿಯಾಗಿ ತೆಗೆದುಕೊಂಡಿದೆ ಎಂಬುವುದು ಇನ್ನೂ ಗೊತ್ತಿಲ್ಲ. ಇಲ್ಲೊಂದು ಕಡೆ ವಿದ್ಯಾರ್ಥಿಗಳು ಮಾಡಿದ ಕೆಲಸ ನಿಜಕ್ಕೂ ಎಲ್ಲರನ್ನೂ ದಿಗ್ಭ್ರಮೆ ಮೂಡಿಸುತ್ತಿದೆ.
ಹೌದು, ಪಾಲಿಟೆಕ್ನಿಕ್ ಓದುತ್ತಿದ್ದ ವಿದ್ಯಾರ್ಥಿಯೋರ್ವ ಪಿಯುಸಿ ಓದುತ್ತಿರುವ ವಿದ್ಯಾರ್ಥಿನಿಗೆ ಬಸ್ ನಿಲ್ದಾಣದಲ್ಲೇ ತಾಳಿ ಕಟ್ಟಿದ ಘಟನೆಯೊಂದು ನೆರೆಯ ರಾಜ್ಯ ತಮಿಳುನಾಡಿನಲ್ಲಿ ನಡೆದಿದೆ. ಕಡಲೂರಿನ ಚಿದಂಬರಂ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಈ ದೃಶ್ಯ ಮೊಬೈಲ್ನಲ್ಲಿ ಸೆರೆ ಆಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸಂಚಲನ ಸೃಷ್ಟಿಸಿದೆ.
ಕಡಲೂರಿನಲ್ಲಿರುವ ಚಿದಂಬರಂ ಬಸ್ ನಿಲ್ದಾಣದ ಗಾಂಧಿ ಪ್ರತಿಮೆ ಬಳಿ ಸ್ಥಳೀಯ ಸರ್ಕಾರಿ ಕಾಲೇಜೊಂದರ 12ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಬಸ್ಗಾಗಿ ಕಾಯುತ್ತಾ ಕುಳಿತಿದ್ದಳು. ಇದೇ ವೇಳೆ ಕೀರಪಾಲ್ಯಂನಲ್ಲಿರುವ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಯೋರ್ವ ಅಲ್ಲಿಗೆ ಬಂದು ವಿದ್ಯಾರ್ಥಿನಿ ಪಕ್ಕದಲ್ಲೇ ಕುಳಿತಿದ್ದಾನೆ. ಬಳಿಕ ತನ್ನ ಬಳಿ ಇದ್ದ ತಾಳಿ ತೆಗೆದು ಪಿಯು ವಿದ್ಯಾರ್ಥಿನಿಗೆ ಕಟ್ಟಿದ್ದಾನೆ. ಇದೇ ವೇಳೆ ಅಲ್ಲೇ ಇದ್ದ ಕೆಲ ವಿದ್ಯಾರ್ಥಿಗಳು ಸ್ನೇಹಿತರು ಆಕೆಗೆ ಶುಭಾಶಯ ಹೇಳುತ್ತಿರುವುದು ವೀಡಿಯೋ ಹಿನ್ನೆಲೆಯಲ್ಲಿ ಕೇಳಿಸುತ್ತಿದೆ.
ಬಸ್ ನಿಲ್ದಾಣದಲ್ಲಿ ಈ ರೀತಿಯ ಮದುವೆಯ ಆಟವಾಡಿದ ಈ ಇಬ್ಬರನ್ನು ಪೊಲೀಸರು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಅಲ್ಲದೇ ಈ ಇಬ್ಬರು ವಿದ್ಯಾರ್ಥಿಗಳ ಪೋಷಕರನ್ನು ಕೂಡ ಠಾಣೆಗೆ ಕರೆದು ವಿಚಾರಣೆ ಮಾಡಿದ್ದಾರೆ. ಅಲ್ಲದೇ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ರಮ್ಯಾ ಅವರ ಗಮನಕ್ಕೆ ಈ ವಿಚಾರ ಬಂದಿದ್ದು, ಈ ಇಬ್ಬರು ವಿದ್ಯಾರ್ಥಿಗಳ ತನಿಖೆಗೆ ಮುಂದಾಗಿದ್ದಾರೆ.
ಅಲ್ಲದೇ ಈ ವಿಡಿಯೋವನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದ ಬಾಲಾಜಿ ಗಣೇಶ್ ಎಂಬಾತನನ್ನು ಕೂಡಾ ದೌರ್ಜನ್ಯ ತಡೆ ಕಾಯ್ದೆಯಡಿ ಪೊಲೀಸರು ಬಂಧನ ಮಾಡಿದ್ದಾರೆ. ಮಕ್ಕಳ ಪೋಷಕರು ನೀಡಿದ ದೂರನ್ನು ಆಧರಿಸಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಹೀಗೆ ಬಂಧಿತನಾದ ಬಾಲಾಜಿ ಗಣೇಶ್ ಅಸ್ವಸ್ಥನಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂಥಹ ಘಟನೆಗಳು ನಿಜಕ್ಕೂ ಸೂಕ್ಷ್ಮಕರವಾದ ವಿಚಾರ ಎಂದೇ ಹೇಳಬಹುದು. ಇಂದಿನ ಕಾಲದಲ್ಲಿ ಇಂತಹ ಘಟನೆಗಳು ವೈರಲ್ ಆದರೆ ಅದರ ಪ್ರಭಾವ ಏನಾಗಬಹುದು ಎಂಬುವುದರ ಅರಿವು ಮಕ್ಕಳಲ್ಲಿ ಇರುವುದಿಲ್ಲ. ಹಾಗಾಗಿ ಪೋಷಕರು, ಹರೆಯದ ತಮ್ಮ ಮಕ್ಕಳು ಸರಿ ಮಾರ್ಗದಲ್ಲಿ ನಡೆಯುವಂತೆ ಅವರಿಗೆ ತಿಳುವಳಿಕೆ ನೀಡುವ ಅಗತ್ಯ ಇದೆ.